Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಒಲಿದ ಜೀವಗಳು ಒಂದಾಗುವ ಸಪ್ತಪದಿ ಮುಹೂರ್ತ

Wednesday, 13.12.2017, 3:05 AM       No Comments

1967ರ ಕಥೆ ಇದು.

ಭಾರತ ಕ್ರಿಕೆಟ್ ತಂಡದ ಸರ್ವಶ್ರೇಷ್ಠ ನಾಯಕರಲ್ಲೊಬ್ಬರಾದ ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಬಾಲಿವುಡ್​ನ ಶ್ರೇಷ್ಠ ಅಭಿನೇತ್ರಿ ಶರ್ವಿುಳಾ ಟಾಗೋರ್ ಅವರ ಬಹುರ್ಚಚಿತ ಪ್ರೇಮ, ದಾಂಪತ್ಯದ ಇನಿಂಗ್ಸ್​ನ ಹೊಸ್ತಿಲಿನಲ್ಲಿದ್ದ ಕಾಲಘಟ್ಟವದು. ಪ್ರತಿಷ್ಠಿತ ನವಾಬ್ ಪಟೌಡಿ ಮನೆತನದ ಸೊಸೆಯಾಗಲು ತುದಿಗಾಲಲ್ಲಿ ನಿಂತಿದ್ದ ಶರ್ವಿುಳಾಗೆ ಇದ್ದಕ್ಕಿದ್ದಂತೆ ಪೀಕಲಾಟವೊಂದು ಶುರುವಾಗಿತ್ತು.

ಆ ವರ್ಷ ಶಕ್ತಿ ಸಮಂತಾ ನಿರ್ದೇಶನದ ಆನ್ ಇವಿನಿಂಗ್ ಇನ್ ಪ್ಯಾರಿಸ್ ಚಿತ್ರದಲ್ಲಿ ಶರ್ವಿುಳಾ ನಟಿಸಿದ್ದರು. ಶಮ್ಮಿ ಕಪೂರ್ ನಾಯಕರಾಗಿದ್ದ ಆ ಚಿತ್ರದಲ್ಲಿ ಶರ್ವಿುಳಾ ಮೊಟ್ಟಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು ಆ ಕಾಲಕ್ಕೆ ಬಹುದೊಡ್ಡ ಕ್ರಾಂತಿಕಾರಕ ನಡೆಯಾಗಿತ್ತು. ಚಿತ್ರ ಬಿಡುಗಡೆಯ ದಿನಾಂಕ ಹತ್ತಿರಲ್ಲಿರುವಂತೆಯೇ ಶರ್ವಿುಳಾ ಬಿಕಿನಿಯಲ್ಲಿ ಕಂಗೊಳಿಸುತ್ತಿದ್ದ ಪೋಸ್ಟರ್​ಗಳು ಮುಂಬೈನ ಬೀದಿ ಬೀದಿಗಳನ್ನು ಅಲಂಕರಿಸಿ ಅಭಿಮಾನಿಗಳ ನಿದ್ರೆಗೆಡಿಸಿದ್ದವು. ಅಂಥ ಸಂದರ್ಭದಲ್ಲಿ ಮನ್ಸೂರ್ ಪಟೌಡಿಯ ಅಮ್ಮ ಸಜೀದಾ ಸುಲ್ತಾನಾ ಭಾವಿ ಸೊಸೆಯನ್ನು ನೋಡಲು ಮುಂಬೈಗೆ ಬರುತ್ತಿರುವುದಾಗಿ ಸಂದೇಶ ಬಂದಿತ್ತು. ಶರ್ವಿುಳಾ ಸಿನಿಮಾಗಳಲ್ಲಿ ನಟಿಸುವ ಬಗ್ಗೆ, ಬಿಕಿನಿ ತೊಟ್ಟ ಬಗ್ಗೆ ಪಟೌಡಿಗೆ ಆಕ್ಷೇಪವೇನೂ ಇರಲಿಲ್ಲ. ಆದರೆ, ಸಂಪ್ರದಾಯಸ್ಥ ರಾಜಮನೆತನದವರು ಭಾವೀ ಸೊಸೆಯನ್ನು ಬಿಕಿನಿ ಅವತಾರದಲ್ಲಿ ಕಂಡರೆ ಮದುವೆ ಮುರಿದು ಬೀಳುವುದು ಗ್ಯಾರಂಟಿ ಎಂದು ಶರ್ವಿುಳಾಗೆ ಮನವರಿಕೆಯಾಗಿತ್ತು. ಹಾಗೆಂದೇ ಅತ್ತೆ ಮುಂಬೈಗೆ ಆಗಮಿಸುವ ಮುನ್ನಾ ದಿನ ಶರ್ವಿುಳಾ ಶತಾಯಗತಾಯ ಪ್ರಯತ್ನದಿಂದ ಚಿತ್ರದ ನಿರ್ವಪಕರ ಮನವೊಲಿಸಿ ಅಷ್ಟೂ ಬಿಕಿನಿ ಪೋಸ್ಟರ್​ಗಳನ್ನು ರಾತ್ರೋರಾತ್ರಿ ಕಿತ್ತುಹಾಕಿಸಿದ್ದರು. ಕೊನೆಗೆ ಪಟೌಡಿ ಕುಟುಂಬ ಶರ್ವಿುಳಾರನ್ನು ಒಪ್ಪಿಕೊಂಡಿದ್ದು, ‘ಈ ಮದುವೆ ಅಲ್ಪಾಯು’ ಎಂಬ ಜನರ ಎಲ್ಲ ಟೀಕೆ-ಟಿಪ್ಪಣಿಗಳನ್ನು ಸುಳ್ಳಾಗಿಸಿ ಪಟೌಡಿ-ಶರ್ವಿುಳಾ ಒಂದಾಗಿ ಬಾಳಿದ್ದು ಇತಿಹಾಸ.

ಕ್ರಿಕೆಟ್-ಬಾಲಿವುಡ್ ಪರಿಣಯ 1960ರ ದಶಕದಲ್ಲಿ ಕ್ರಾಂತಿಕಾರಕವಾಗಿತ್ತು. ಆದರೆ, ಆನಂತರದ ದಿನಗಳಲ್ಲಿ ಈ ಎರಡು ಜನಾನುರಾಗಿ ಕ್ಷೇತ್ರಗಳ ನಂಟು ಸರ್ವೆಸಾಮಾನ್ಯವೆಂಬಂತಾಯಿತು. ಆದರೂ, ವೆಸ್ಟ್ ಇಂಡೀಸ್​ನ ದಿಗ್ಗಜರಾದ ವಿವಿಯನ್ ರಿಚರ್ಡ್ಸ್-ನಟಿ ನೀನಾ ಗುಪ್ತಾ, ಗ್ಯಾರಿ ಸೋಬರ್ರ್ಸ್- ನಟಿ ಅಂಜು ಮಹೇಂದ್ರು ಪ್ರೇಮ, ಪಾಕಿಸ್ತಾನದ ಮೊಹ್ಸಿನ್ ಖಾನ್- ರೀನಾ ರಾಯ್ ವಿವಾಹಗಳು ಹೆಚ್ಚು ಕಾಲ ಬಾಳದೇ ಹೋದಾಗ ಇಂಥ ಥಳಕುಬಳುಕಿನ ಸಂಬಂಧಗಳ ಕ್ಷಣಭಂಗುರತೆ ಚರ್ಚೆಯ ವಿಷಯಗಳಾಗಿದ್ದವು. ಟೀಮ್ ಇಂಡಿಯಾದ ಹಾಲಿ ಕೋಚ್ ರವಿ ಶಾಸ್ತ್ರಿ- ನಟಿ ಅಮೃತಾ ಸಿಂಗ್, ಮಾಜಿ ನಾಯಕ ಸೌರವ್ ಗಂಗೂಲಿ – ನಟಿ ನಗ್ಮಾ ಪ್ರೀತಿ-ಒಡನಾಟ ಕೂಡ ಗಾಸಿಪ್ ಕಾಲಂಗಳನ್ನು ತುಂಬಿಸುವುದಕ್ಕಷ್ಟೇ ಸೀಮಿತವಾಯಿತು. ಮಾಜಿ ನಾಯಕ ಮೊಹ್ಮದ್ ಅಜರುದ್ದೀನ್- ನಟಿ ಸಂಗೀತಾ ಬಿಜಲಾನಿ ದಾಂಪತ್ಯ ಅಂದಾಜು ಒಂದು ದಶಕ ಕಾಲ ಅನುರೂಪವಾಗಿ ಬಾಳಿದರೂ, ಒಂದು ಕೆಟ್ಟಗಳಿಗೆಯಲ್ಲಿ ಬೇರ್ಪಟ್ಟಿತು.

ಮದುವೆಯೆಂದರೆ ಶಾಶ್ವತ ಬದ್ಧತೆ. ಜನ್ಮಜನ್ಮದ ಅನುಬಂಧ. ಆದರೆ, ಭಿನ್ನ ಕ್ಷೇತ್ರಗಳ ಸೆಲಿಬ್ರಿಟಿಗಳಿಬ್ಬರು ವಿವಾಹವಾಗುವಾಗ ಜನರಲ್ಲೊಂದು ಕುತೂಹಲವಿರುತ್ತದೆ… ಸಣ್ಣ ಅಪನಂಬಿಕೆ ಇರುತ್ತದೆ… ಇದಕ್ಕೆ ಕಾರಣ ಜಗತ್ತಿನಲ್ಲಿ ಹೆಚ್ಚಿನ ಸೆಲಿಬ್ರಿಟಿ ವಿವಾಹಗಳು ಯಶಸ್ವಿ ಆಗದೇ ಇರುವುದು. ಪಾಶ್ಚಾತ್ಯ, ಅದರಲ್ಲೂ ಹಾಲಿವುಡ್ ಜಗತ್ತಿನಲ್ಲಂತೂ ವಿವಾಹ, ವಿಚ್ಚೇದನ ಎರಡೂ ಮೊಬೈಲ್ ಬದಲಿಸಿದಷ್ಟೇ ಸರ್ವೆಸಾಮಾನ್ಯ.

ಸಾಮಾನ್ಯರ ದಾಂಪತ್ಯಕ್ಕೆ ಹೋಲಿಸಿದರೆ, ಸೆಲಿಬ್ರಿಟಿಗಳ ದಾಂಪತ್ಯ ಹೆಚ್ಚಿನ ಸರಾಸರಿಯಲ್ಲಿ ಮುರಿದುಬೀಳುವುದಕ್ಕೆ ‘ವ್ಯಕ್ತಿತ್ವಗಳ ತಾಕಲಾಟ’ ಪ್ರಮುಖ ಕಾರಣವಾಗಿರುತ್ತದೆ. ದಾಂಪತ್ಯ ಅಥವಾ ಸಂಸಾರವೆಂದರೆ, ಪರಸ್ಪರ ಪ್ರೀತಿ, ಅನುರಕ್ತಿ, ತ್ಯಾಗ, ಸ್ವಾರ್ಥವಿಲ್ಲದಿರುವುದು, ಒಬ್ಬರಿಗಾಗಿ ಇನ್ನೊಬ್ಬರು ಬದುಕುವುದೇ ಆಗಿರುತ್ತದೆ. ಇಲ್ಲಿ ತಮ್ಮ ಹಟಕ್ಕಿಂತ ಒಬ್ಬರಿಗಾಗಿ ಇನ್ನೊಬ್ಬರು ‘ಹೊಂದಿಕೊಳ್ಳುವ, ಸೋಲುವ’ ಗುಣವೇ ಮುಖ್ಯವಾಗಿರುತ್ತದೆ. ಆದರೆ, ಇಬ್ಬರು ಭಿನ್ನ ಹಿನ್ನೆಲೆ, ವರ್ಚಸ್ಸು, ಸ್ಟೇಟಸ್ಸಿನ ವ್ಯಕ್ತಿಗಳು ಒಟ್ಟಿಗೆ ಬಾಳುವ ಸಂದರ್ಭ ಬಂದಾಗ ಯಾರು ತಗ್ಗಬೇಕು, ಯಾರು ಬಗ್ಗಬೇಕು ಎಂಬ ವಿಚಾರ ವಿವಾದಕ್ಕೆ ಕಾರಣವಾಗುತ್ತದೆ. ಅದರಲ್ಲೂ ಸೆಲಿಬ್ರಿಟಿಗಳೆಂದ ಮೇಲೆ ಪರಸ್ಪರರ ಸಂಪಾದನೆ, ಪ್ರಖ್ಯಾತಿಯ ತೂಕಗಳೂ ತುಲನೆಗೊಳಪಟ್ಟು ಜೀವನ ಅಧ್ವಾನವಾಗಿರುವ ಉದಾಹರಣೆಗಳು ಅನೇಕ. ಆದರೂ, ಮದುವೆ ಎಂಬ ವಿಚಿತ್ರ, ವಿಶಿಷ್ಠ ಜೊತೆಯಾಟದಲ್ಲಿ ‘ಇವರಿಬ್ಬರಿಗೆ ಯಾವ ಕಾರಣಕ್ಕೂ ಹೊಂದಾಣಿಕೆ ಸಾಧ್ಯವೇ ಇಲ್ಲ’ ಎಂಬಂಥ ಜೋಡಿಗಳು ಯಶಸ್ವಿಯಾಗಿ ಅಚ್ಚರಿ ಮೂಡಿಸುವುದುಂಟು. ಅನುರೂಪ-ಅಪರೂಪ ಎಂಬಂಥ ಜೋಡಿಗಳು ಅಲ್ಪಾವಧಿಯಲ್ಲೇ ಬೇರೆಯಾಗಿ ವಿಷಾಧ ಮೂಡಿಸುವ ಸಂದರ್ಭಗಳೂ ಉಂಟು. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವ, ಮನೋಭಾವವೂ ಅವರವರ ಭಾವಕ್ಕೆ ಬದಲಾಗುವ ಕಾರಣ ಯಾರ ಗ್ರಹಿಕೆಗೂ ನಿಲುಕದೆ, ಸಿಲುಕದೆ ಸಾಗುವುದೇ ಜೀವನ. ಅದೇ ಜಗದ ನಿಯಮ.

ಸದ್ಯ ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನ ಇಬ್ಬರು ತಾರಾ ಕಣ್ಮಣಿಗಳು ಜೀವನಪರ್ಯಂತ ಒಂದಾಗಿ ಬಾಳುವ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ ಅಭಿನಂದನೆ ಹೇಳುವ ಹೊತ್ತು. ತುಂಬಾ ಸಾಧಾರಣ ಹಿನ್ನೆಲೆಯಿಂದ ಬಂದು ಕ್ರಿಕೆಟ್​ನಿಂದಲೇ 400 ಕೋಟಿ ರೂ. ಆಸ್ತಿಗೆ ಒಡೆಯನಾಗಿರುವ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್​ನ ಸುಪ್ರಸಿದ್ಧ ನಟಿ ಅನುಷ್ಕಾ ಶರ್ಮ ದೂರದ ಇಟಲಿಯಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಓರ್ವ ಕ್ರಿಕೆಟಿಗನಾಗಿ ಕೊಹ್ಲಿ ಮುಂಗೋಪಿ ಎಂದೇ ಹೆಸರಾದವರು. ಅವರ ಬ್ಯಾಟಿಂಗ್ ಹಾಗೂ ಮನೋಭಾವ ಎರಡೂ ಆಕ್ರಮಣಕಾರಿ. ಎದುರಾಳಿ ಬೌಲರ್ ಇರಲಿ, ಸಮಸ್ಯೆ ತಂದೊಡ್ಡುವ ಯಾರೇ ಇರಲಿ, ಆಕ್ರಮಣಕಾರಿ ಆಟ, ಮಾತಿನಿಂದಲೇ ಎದುರಿಸುವ ವ್ಯಕ್ತಿತ್ವ ಅವರದು. ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಕೊಹ್ಲಿಗಿರುವ ಸ್ಪಷ್ಟತೆ ಹಾಗೂ ದಿಟ್ಟತನ ಅನುಕರಣೀಯ. ತತ್​ಕ್ಷಣದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಾಗೂ ತೆಗೆದುಕೊಂಡ ನಿರ್ಧಾರವನ್ನು ಕೊನೆಯವರೆಗೂ ಸಮರ್ಥಿಸಿಕೊಳ್ಳುವ ಛಾತಿ ಅವರ ವ್ಯಕ್ತಿತ್ವಕ್ಕೊಂದು ತೂಕ ತಂದುಕೊಟ್ಟಿರುವುದು ಸುಳ್ಳಲ್ಲ. ಜೂನಿಯರ್ ಕ್ರಿಕೆಟ್ ದಿನಗಳಿಂದಲೂ ಕೊಹ್ಲಿ ಕ್ರಿಕೆಟ್ ವಲಯದಲ್ಲಿ ಭಿನ್ನವಾಗಿ ಗುರುತಿಸಿಕೊಂಡು ಸದ್ಯ ವಿಶ್ವದ ನಂ.1 ಆಟಗಾರನೆನಿಸಿದ್ದರೆ, ಅದಕ್ಕೆ ಇತರೆಲ್ಲರಿಗಿಂತ ಭಿನ್ನವಾಗಿ ಆಲೋಚಿಸುವ, ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರುವ ಅವರ ಗುಣವಿಶೇಷವೇ ಕಾರಣ. ಇಂಥ ಪ್ರಬಲ ವ್ಯಕ್ತಿತ್ವದ ಕೊಹ್ಲಿ ಹಾಗೂ ಬಾಲಿವುಡ್​ನಲ್ಲಿ ತಮ್ಮ ಗಟ್ಟಿ ಪರ್ಸನಾಲಿಟಿಯಿಂದಲೇ ಮುಂಚೂಣಿಗೆ ಬಂದಿರುವ ಅನುಷ್ಕಾ ತಾಳಮೇಳದ ಜೋಡಿ ಎಂದೇ ಹೇಳಬಹುದು.

ವಯಸ್ಸಿನಲ್ಲಿ ಕೊಹ್ಲಿಗಿಂತ 6 ತಿಂಗಳು ಹಿರಿಯರಾದ ಅನುಷ್ಕಾ, ಸ್ನೇಹಿತರ ಆಯ್ಕೆಯಿಂದ, ಎಂಥ ಚಿತ್ರಗಳಲ್ಲಿ ನಟಿಸಬೇಕು, ಯಾವ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು, ಯಾವ ನಟರೊಂದಿಗೆ ತೆರೆ ಹಂಚಿಕೊಳ್ಳಬೇಕೆಂಬ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಪ್ರೌಢಿಮೆ ಮೆರೆದವರು. ಅದೇ ಕಾರಣಕ್ಕೆ ಇಲ್ಲಿಯವರೆಗೆ ಅನುಷ್ಕಾ ನಟಿಸಿರುವ ಪ್ರತಿಯೊಂದು ಚಿತ್ರವೂ ಭಿನ್ನ ಕಾರಣಗಳಿಗಾಗಿ ದೊಡ್ಡ ಸುದ್ದಿ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಭವಿಷ್ಯ ಏನೇ ಆದರೂ, ಅನುಷ್ಕಾ ಚಿತ್ರ ಎಂಬ ಕಾರಣಕ್ಕಾಗಿ ಬಿಡುಗಡೆ ಪೂರ್ವ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದೇ ರೀತಿ ಜೀವನದ ವಿಷಯಕ್ಕೆ ಬಂದಾಗ ವಿರಾಟ್ ಮತ್ತು ಅನುಷ್ಕಾ ಪರಸ್ಪರರ ಆಯ್ಕೆಯಲ್ಲಿ ತೋರಿದ ಜಾಣ್ಮೆಯೂ ಸ್ವಾರಸ್ಯಕರ.

ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್-ಬಾಲಿವುಡ್ ವಿವಾಹಗಳು ವಾರ್ಷಿಕ ವೇಳಾಪಟ್ಟಿಯ ಭಾಗವೇ ಆಗಿ ಹೋಗಿದೆ. ಹರ್ಭಜನ್ ಸಿಂಗ್ -ಗೀತಾ ಬಾಸ್ರಾ ವಿವಾಹದ ಬಳಿಕ ಯುವರಾಜ್ ಸಿಂಗ್- ಹ್ಯಾಜೆಲ್ ಕೀಚ್ ದಂಪತಿಗಳಾದರು. ಇತ್ತೀಚೆಗೆ ಜಹೀರ್ ಖಾನ್- ಸಾಗರಿಕ ಘಾಟ್ಕೆ ಮದುವೆಯಾದ ಬೆನ್ನಲ್ಲೇ ವಿರಾಟ್-ಅನುಷ್ಕಾ ಜೀವನಪೂರ್ತಿ ಪ್ರೀತಿಯ ಅನುಬಂಧದ ಪ್ರತಿಜ್ಞೆ ಮಾಡಿದ್ದಾರೆ.

ಮದುವೆ ಎಂದೊಡನೆ ಕನ್ನಡಿಗರೆಲ್ಲರಿಗೆ ನೆನಪಾಗುವುದು ಡಾ. ರಾಜ್​ಕುಮಾರ್ ಅವರ ಅಮರಕಂಠ ಸಿರಿಯಲ್ಲಿ ಸಾರ್ವಕಾಲಿಕ ಜನಪ್ರಿಯವಾದ ಸಪ್ತಪದಿ ಇದು ಸಪ್ತಪದಿ… ಹಾಡು. ಮದುವೆ ಎನ್ನುವುದು ಏಳು ಹೆಜ್ಜೆಗಳ ಸಂಬಂಧ, ನಮ್ಮ ಏಳು ಜನ್ಮಗಳ ಅನುಬಂಧ ಎಂದು ಚಿ. ಉದಯಶಂಕರ್ ಅವರು ಬರೆದ ಗೀತೆಯ ಸಾಲುಗಳು ಅಜರಾಮರ.

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೆ

ಇದಕೆ ಹರಿಯೇ ಸಾಕ್ಷಿ ಎನುವೆ/ ಸ್ವರ್ಗ ಸಮಾನ ಸುಖವ ನೀಡೆಂದು

ಕೈಗಳನು ಮುಗಿವೆ ಎರಡನೇ ಹೆಜ್ಜೆಯನು ಇಡುವೆ

ಮೂರು ಕಾಲದಲು ಏಕ ರೀತಿ ನಾ ಸಹಚರನಾಗಿರುವೆ

ಮೂರನೆ ಹೆಜ್ಜೆಯನು ಇಡುವೆ /

ಮಮತೆ ಮೋಹ ಸುಖ ದುಃಖದಲಿ ಜೊತೆಯಲ್ಲೇ ಇರುವೆ

ನಾಲ್ಕನೆ ಹೆಜ್ಜೆಯನು ಇಡುವೆ/

ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನುತಾ

ಐದನೆ ಹೆಜ್ಜೆಯನು ಇಡುವೆ / ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನುವೆ / ಆರನೇ ಹೆಜ್ಜೆಯನು ಇಡುವೆ/

ಸಪ್ತ ಋಷಿಗಳ ಸ್ಮರಣೆ ಮಾಡುತಾ ಹರಸಿ ನಮ್ಮನು ಎಂದೂ ಬೇಡುತ

ಏಳನೇ ಹೆಜ್ಜೆ ಇಡುವೆ

ನಾ ಏಳನೇ ಹೆಜ್ಜೆ ಇಡುವೆ… ಎಂದು ಸಾಗುವ ಈ ಗೀತೆ ಮದುವೆ ಪರಿಕಲ್ಪನೆ ಹಿಂದಿರುವ ಭಾರತೀಯ ಸಂಸ್ಕೃತಿಯ ಸಾರಸೊಗಡನ್ನು ಕಟ್ಟಿಕೊಡುತ್ತದೆ. ವಿರಾಟ್ ಕೊಹ್ಲಿ- ಅನುಷ್ಕಾ ದಾಂಪತ್ಯ ಗೀತೆಗೆ ಶುಭ ಕೋರುವ ಹೊತ್ತಿನಲ್ಲಿ ಸಪ್ತಪದಿ ಹಾಡಿನ ಸಾಲುಗಳನ್ನು ಕೊಹ್ಲಿ-ಅನುಷ್ಕಾ ಸಪ್ತಪದಿಯ ಸಂದರ್ಭಕ್ಕೆ ಹೊಂದಿಸಿ, ಕಲ್ಪಿಸಿಕೊಂಡಾಗ ಹೊಸಹೊಸ ಅರ್ಥಗಳು ಹೊಳೆದವು.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top