ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಸಿದ್ಧತೆ

ಬೆಂಗಳೂರು: ಭಾರತ 2032ರ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಸಕಲ ಸಿದ್ಧತೆಗಳನ್ನು ನಡೆಸಲಾರಂಭಿಸಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವ ಭಾರತದ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ ಮತ್ತು ಭುವನೇಶ್ವರದ ಜತೆಗೆ ಬೆಂಗಳೂರು ಕೂಡ ರೇಸ್​ನಲ್ಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದ್ದಾರೆ.

2032ರ ಒಲಿಂಪಿಕ್ಸ್​ಗೆ ಬಿಡ್ ಸಲ್ಲಿಸಲು ತಾನು ಗಂಭೀರ ಚಿಂತನೆಯಲ್ಲಿರುವುದನ್ನು ಕಳೆದ ವರ್ಷವೇ ಪ್ರಕಟಿಸಿದ್ದ ಭಾರತ, ಕಳೆದ ಡಿಸೆಂಬರ್​ನಲ್ಲಿ ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಗೆ (ಐಒಸಿ) ಅಧಿಕೃತ ಮಾಹಿತಿಯನ್ನೂ ನೀಡಿತ್ತು. ಸದ್ಯ ಬಿಡ್ ಪ್ರಕ್ರಿಯೆಗೆ ಐಒಎ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದು, ನಾಲ್ಕು ನಗರಗಳ ಪೈಕಿ ಒಂದರ ಹೆಸರನ್ನು ಮುಂದಿನ ಒಂದು ತಿಂಗಳಲ್ಲಿ ಅಂತಿಮಗೊಳಿಸಲಿದೆ. ‘ಆತಿಥೇಯ ನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರಬೇಕು ಎಂಬುದು ಐಒಸಿಯ ಏಕಮಾತ್ರ ಷರತ್ತು ಆಗಿದೆ. ಹೀಗಾಗಿ ಬೆಂಗಳೂರು ಕೂಡ ಸದ್ಯ ನಮ್ಮ ಪರಿಗಣನೆಯಲ್ಲಿದೆ’ ಎಂದು ಬಾತ್ರಾ ತಿಳಿಸಿದ್ದಾರೆ. ಆದರೆ ಸದ್ಯಕ್ಕೆ ಸ್ಪರ್ಧೆಯಲ್ಲಿ ಮುಂಬೈ ಮತ್ತು ದೆಹಲಿ ಮುಂಚೂಣಿಯಲ್ಲಿವೆ ಎಂದೂ ಹೇಳಿದ್ದಾರೆ. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎರಡಂಕಿ ಪದಕಗಳನ್ನು ಗೆಲ್ಲುವ ಗುರಿ ನಮ್ಮದಾಗಿದೆ. 2024ರಲ್ಲಿ 25 ಮತ್ತು 2028ರಲ್ಲಿ 35-40 ಪದಕಗಳನ್ನು ಗೆಲ್ಲುವ ಯೋಜನೆ ರೂಪಿಸಲಾಗಿದೆ ಎಂದೂ ಬಾತ್ರಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *