ಲಕ್ಷ್ಮೇಶ್ವರ: ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡುವ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಅರಿತು ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಪ್ರೀತಿ, ನಂಬಿಕೆ ಹಾಗೂ ವಿಶ್ವಾಸವನ್ನಿಟ್ಟು ಬಾಳಿದಾಗ ಮಾತ್ರ ಸಂಸಾರ ಸುಖಮಯ ಮತ್ತು ಸಾರ್ಥಕವಾಗುತ್ತದೆ ಎಂದು ಹಿರೇಮಣಕಟ್ಟಿಯ ಮೃಗೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಸಮೀಪದ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧು-ವರರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಆದರ್ಶಮಯ ಸಂಸಾರಕ್ಕೆ ಸಂಸ್ಕಾರ ಕೊಡುವುದರಲ್ಲಿ ಜೀವನದ ಅರ್ಥ ಅಡಗಿದೆ. ಉತ್ತಮ ನಾಗರಿಕನಾಗಿ ಬದುಕುವುದು ಸಂಸಾರದ ಸಾರವಾಗಿದೆ ಎಂದರು.
ಕೊಣ್ಣೂರಿನ ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಪ್ರತಿಯೊಬ್ಬ ವ್ಯಕ್ತಿ ಹೊಂದುವ ಆಧ್ಯಾತ್ಮಿಕ ಜ್ಞಾನ ಬದುಕಿನ ಶಾಂತಿ, ನೆಮ್ಮದಿಗೆ ಪೂರಕವಾದ ಅಂತಃಶಕ್ತಿಯನ್ನು ನೀಡುತ್ತದೆ. ಅದ್ದರಿಂದ ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ರೂಢಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ನೀಡುವುದು, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಮೊದಲಾದ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದರು. 8 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಗ್ಗೆ ದುಂಡಸಿಯ ಕುಮಾರ ಮಹಾಸ್ವಾಮಿಗಳು ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ವಿಶ್ವಾರಾಧ್ಯ ಶ್ರೀಗಳು ಅನೇಕ ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ ನೆರವೇರಿಸಿದರು. ಸಂಜೆ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿ ರಥೋತ್ಸವ ನೆರವೇರಿತು.
ಸಾಮೂಹಿಕ ಮದುವೆಗಳಲ್ಲಿ ಎಲ್ಲ ಜಾತಿ, ಧರ್ಮ, ಮತ ಪಂತಗಳ ಜನರು ಭಾಗವಹಿಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮತ್ತು ಹೊಸತನಕ್ಕೆ ನಾಂದಿ ಹಾಡುತ್ತಿರುವ ಸಂಪ್ರದಾಯ ಸಾರ್ವತ್ರಿಕವಾಗಬೇಕು.
| ವಿಶ್ವಾರಾಧ್ಯ ಶಿವಾಚಾರ್ಯರು