ಒಣಹಣ್ಣುಗಳ ಬಳಕೆ

ವಾತಾವರಣದ ತಾಪಮಾನ ಕಡಿಮೆಯಾದಂತೆ ಶಕ್ತಿಯ ಲಭ್ಯತೆಯೂ ಕಡಿಮೆಯಾಗುತ್ತದೆ. ದೇಹದ ಉಷ್ಣಾಂಶ ಹೆಚ್ಚುವಿಕೆಗೆ ಶಕ್ತಿಯು ಬಳಕೆಯಾಗುವುದರಿಂದ ಆರೋಗ್ಯರಕ್ಷಣೆಗೆ ಪೂರಕವಾದ ಅನೇಕ ಉಪಚಾರಗಳು ಅಗತ್ಯವಾಗಿರುತ್ತವೆ. ದೇಹದ ರೋಗನಿರೋಧಕ ಶಕ್ತಿಯೂ ದುರ್ಬಲವಾಗುವುದರಿಂದ ಶಕ್ತಿಯ ವರ್ಧನೆಯ ಜೊತೆಗೆ ರೋಗನಿರೋಧಕ ಶಕ್ತಿಯ ಹೆಚ್ಚುವಿಕೆಗೂ ಕಾರಣವಾಗುವ ಆಹಾರಪದಾರ್ಥ ಸೇವಿಸಬೇಕು.

ಚಳಿಗಾಲದ ದಿನಗಳಲ್ಲಿ ಒಣಹಣ್ಣುಗಳು ಹಾಗೂ ನಟ್ಸ್​ಗಳ ಸೇವನೆಯು ಆರೋಗ್ಯಕ್ಕೆ ಬಹಳ ಪೂರಕ. ಬೆಳಗ್ಗೆ ಎದ್ದ ಕೂಡಲೇ ರಾತ್ರಿ ನೆನೆಸಿದ ಹತ್ತು ಬಾದಾಮಿ ಅಥವಾ ಮೆಂತ್ಯಕಾಳುಗಳನ್ನು ಸೇವಿಸಬಹುದು. ಒಂದು ಗ್ಲಾಸ್ ಬಿಸಿನೀರಿಗೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯಬಹುದು. ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡಲು ಇದು ನೆರವಾಗುತ್ತದೆ. ಬೆಳಗ್ಗಿನ ಉಪಾಹಾರದಲ್ಲಿ ಕೂಡ ಒಣಹಣ್ಣುಗಳು ಹಾಗೂ ನಟ್ಸ್​ಗಳನ್ನು ಸೇರಿಸಿದಾಗ ಉತ್ತಮ ಫಲಿತಾಂಶ ಲಭ್ಯ. ನಟ್ಸ್​ಗಳಾದ ಬಾದಾಮಿ, ಗೋಡಂಬಿ, ವಾಲ್​ನಟ್ಸ್, ಪಿಸ್ತಾಗಳನ್ನು ಒಳಗೊಂಡಾಗ ಅದು ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಇವು ಉತ್ತಮ ಕೊಬ್ಬಿನ ಆಹಾರಪದಾರ್ಥಗಳಾಗಿರುವುದರಿಂದ ಶಕ್ತಿ ನೀಡಿ, ಬೇಗ ಹಸಿವೆ ಆಗದಂತೆ ತಡೆಯುತ್ತದೆ. ದೇಹಕ್ಕೆ ನಿಧಾನವಾಗಿ ಶಕ್ತಿ ನೀಡುತ್ತದೆ.

ಒಣಹಣ್ಣುಗಳು ಈ ನಿಟ್ಟಿನಲ್ಲಿ ಬಹಳ ಸಹಾಯಕಾರಿಯಾಗಿವೆ. ಒಣದ್ರಾಕ್ಷಿ, ಅಂಜೂರ, ಖರ್ಜೂರ ಅಥವಾ ಒಣಖರ್ಜೂರ, ಒಣ ಚೆರ್ರಿಗಳು, ಎಪ್ರಿಕಾಟ್​ಗಳು ಶರ್ಕರಪಿಷ್ಟವನ್ನು ಹೊಂದಿರುವಂತಹ ಪದಾರ್ಥಗಳು. ಇವುಗಳ ಸೇವನೆಯಿಂದ ವೇಗವಾಗಿ ದೇಹಕ್ಕೆ ಶಕ್ತಿ ದೊರಕುವುದೊಂದೇ ಅಲ್ಲದೆ ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಪೋಷಕಾಂಶಗಳು ಲಭ್ಯವಾಗುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೂ ಅನುವು ಆಗುತ್ತದೆ. ಜೇನುತುಪ್ಪವನ್ನು ಇದರೊಟ್ಟಿಗೆ ಸೇರಿಸಿ ತೆಗೆದುಕೊಳ್ಳಬಹುದು. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡಬಹುದಾದ ಶೀತ, ನೆಗಡಿಯಂತಹ ತೊಂದರೆಗಳನ್ನು ನಿರ್ವಹಣೆ ಮಾಡಲು ಸಹಾಯಕಾರಿ. ಚರ್ಮದ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.

ಮಕ್ಕಳಿಗೆ ಪ್ರತಿನಿತ್ಯ ಒಣಹಣ್ಣು ಮತ್ತು ನಟ್ಸ್​ಗಳನ್ನು ತಿನ್ನುವ ರೂಢಿ ಮಾಡಿಸಿ. ಮಿದುಳು ಚುರುಕಾಗಲು ಹಾಗೂ ಮಗು ಆರೋಗ್ಯವಾಗಿರಲು ಇದರಿಂದ ಸಾಧ್ಯ. ಒಣಹಣ್ಣುಗಳಲ್ಲಿ ಕೆಲವು ಬಾರಿ ರಾಸಾಯನಿಕಗಳು ಇರುವುದರಿಂದ ಇವುಗಳನ್ನು ಐದರಿಂದ ಆರು ತಾಸು ನೀರಿನಲ್ಲಿ ನೆನೆಸಿ ಆ ನೀರನ್ನು ಚೆಲ್ಲಿ ಸೇವಿಸುವುದು ಉತ್ತಮ.

Leave a Reply

Your email address will not be published. Required fields are marked *