ಒಡನಾಟದಿಂದಲೇ ಸಾಹಿತ್ಯ ಸಾಧನ

ಮಕ್ಕಳ ಸಾಹಿತ್ಯಕ್ಕೆ ಅವಿಭಜಿತ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ. ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ಸಾಹಿತಿಗಳಿರೋದು ಇದೇ ಜಿಲ್ಲೆಯಲ್ಲಿ. ಒಂದರ್ಥದಲ್ಲಿ ವಿಜಯಪುರ ‘ಮಕ್ಕಳ ಸಾಹಿತಿಗಳ ತವರೂರು.’ ಹರ್ಡೆಕರ ಮಂಜಪ್ಪ, ಕಂಚ್ಯಾಣಿ ಶರಣಪ್ಪ, ಶಂ.ಗು. ಬಿರಾದಾರ, ಸಿ.ಸು.ಸಂಗಮೇಶ, ಈಶ್ವರಚಂದ್ರ ಚಿಂತಾಮಣಿ, ಪರಶುರಾಮ ಚಿತ್ರಗಾರ ಹೀಗೆ ಮಕ್ಕಳ ಸಾಹಿತಿಗಳ ಪಟ್ಟಿ ಬೆಳೆಯುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಬಾಲಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿರುವ ಮಕ್ಕಳ ಸಾಹಿತಿ, ಮುಗ್ಧತೆಯ ಸಾಕಾರಮೂರ್ತಿ, ಭಾವಸಿರಿವಂತಿಕೆಯ ಅನುಭಾವ ಕವಿ, ಬರದ ಜಿಲ್ಲೆಯ ಕಣ್ಮಣಿ ಕಂಚ್ಯಾಣಿ ಶರಣಪ್ಪ ನಾನೇಕೆ ಮಕ್ಕಳ ಸಾಹಿತಿಯಾದೆ, ಕವಿಯಾದೆ ಎಂಬುದನ್ನು ಇಲ್ಲಿ ಹೇಳಿಕೊಂಡಿದ್ದಾರೆ.

| ಪರಶುರಾಮ ಭಾಸಗಿ ವಿಜಯಪುರ

ತಮಗೆ ಮಕ್ಕಳ ಸಾಹಿತ್ಯ ಒಲಿದದ್ದು ಹೇಗೆ? ಇದರಿಂದಾದ ಪ್ರಭಾವ ಏನು?

ಪ್ರಭಾವಕ್ಕಿಂತ ಒಡನಾಟವೇ ಸಾಹಿತ್ಯ ಸಾಧನೆಗೆ ಪ್ರೇರಣೆ. ಶಂ.ಗು. ಬಿರಾದಾರ, ಸಿಸು ಸಂಗಮೇಶ ಮೊದಲಾದವರೆಲ್ಲ ಸೇರಿ ಸಾಹಿತ್ಯ ಕೃಷಿ ಮಾಡಿದ್ದರಿಂದ ಈ ಮಟ್ಟಕ್ಕೆ ತಂದು ನಿಲ್ಲಿಸಿತು. ಬಾಲ್ಯದಲ್ಲಿ ತಾಯಿ ರುದ್ರಮ್ಮ ಅವರ ಜಾನಪದ ಹಾಡು, ಸೋಬಾನೆ ಪದ, ಬೀಸುಕಲ್ಲಿನ ಹಾಡು, ಲಾವಣಿ ಪದ, ಹಂತಿ ಪದ, ರಿವಾಯತ್ ಪದಗಳು ಪರಿಣಾಮ ಬೀರಿದವು. ಹಬ್ಬ-ಹರಿದಿನಗಳಲ್ಲಿ ನನ್ನ ಕಿವಿಗೆ ಬೀಳುತ್ತಿದ್ದ ತತ್ವ ಪದಗಳು, ಶರಣರ ವಚನಗಳು ಕವಿತೆ ಬರೆಯಲು ಪ್ರೇರಣೆ ನೀಡಿದವು. ಕನ್ನಡ ಟ್ರೇನಿಂಗ್ ಕಾಲೇಜಿನಲ್ಲಿದ್ದಾಗ ರೋಡೇಕರ ಶಾಮರಾಯ ಅಂತ ಪ್ರಾಧ್ಯಾಪಕರಿದ್ದರು. ಆಗ ಒಡನಾಡಿಗಳೆಲ್ಲ ಸೇರಿ ಕೈಬರಹ ಪತ್ರಿಕೆ ಹೊರತರುತ್ತಿದ್ದೆವು. ಇಂದು ಇಷ್ಟೆಲ್ಲಾ ಬರವಣಿಗೆಗೆ ಆ ಕಾರ್ಯವೇ ಸ್ಪೂರ್ತಿ. ಇಂದಿನ ತಾಂತ್ರಿಕ ಯುಗದಲ್ಲಿ ಅಂತಹ ಕಲಿಕೆ ಭಾಗ್ಯ ಸಿಗೋದು ಕಷ್ಟ.

ಮಕ್ಕಳ ಸಾಹಿತ್ಯ ರಚನೆಯಲ್ಲಿನ ಅನುಭವ?

‘ಜಾಗೃತ ಭಾರತ’ ಎಂಬ ಕವನ ಬರೆಯುವ ಮೂಲಕ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡೆ. ನೇತಾಜಿ ಸುಭಾಷಚಂದ್ರ ಬೋಸ್ ಅವರ ಕುರಿತಾದ ಆ ಕವನ ತುಂಬ ತೃಪ್ತಿ ತಂದಿತು. ನವೀನ ಮಾದರಿಯಲ್ಲಿ ಕಥೆಗಳನ್ನು ಬರೆದು ಅದನ್ನು ಪರಿಚಯಿಸುವ ಕೆಲಸ ಮಾಡಿದೆವು. ಪ್ರಶಸ್ತಿಗೆ ಭಾಜನವಾದ ಕವನಗಳೆಲ್ಲವನ್ನೂ ಸೇರಿಸಿ ‘ನೂರೊಂದು ಕವಿತೆ’ ಪುಸ್ತಕ ಪ್ರಕಟಿಸಿದೆ. ಪುಸ್ತಕ ಪ್ರಕಟಣೆಗೆ ಅಂದು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದೆವು. ಆಗ ಈಗಿನಷ್ಟು ಸೌಲಭ್ಯ ಆಗಿರಲಿಲ್ಲ. ಪ್ರಕಾಶಕರು ಪುಸ್ತಕಗಳ ಹಕ್ಕನ್ನು ತಾವೇ ಇಟ್ಟುಕೊಳ್ಳುವ ಕಾರಣ ಲೇಖಕರ ಸ್ವಾತಂತ್ರ್ಯರಣವಾಗುತ್ತಿದೆ ಎನಿಸುತ್ತದೆ. ಪ್ರಶಸ್ತಿಗಳಿಗೆ ಇಂದು ಲಾಬಿಗಳೇ ಹೆಚ್ಚು. ನನ್ನ ಪ್ರಕಾರ ವರ್ಗ, ವರ್ಣ, ಪಂಥ ಗಣನೆಗೆ ತೆಗೆದುಕೊಳ್ಳದೆ ಮೌಲ್ಯಕ್ಕೇ ಹೆಚ್ಚಿನ ಮನ್ನಣೆ ಸಿಗಬೇಕು. ಆಳುವ ವರ್ಗದ ಆಸ್ಥಾನ ಕವಿಗಳಂತಾಗದೆ ಸಮಾಜದ ಓರೆಕೋರೆ ತಿದ್ದುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವುದು ಉತ್ತಮವೆನಿಸುತ್ತದೆ.

ಮಕ್ಕಳ ಸಾಹಿತಿ ಮತ್ತು ಸಾಹಿತ್ಯ ಅನಾದರಕ್ಕೊಳಗಾಗುತ್ತಿದೆಯಾ?

ಸಾಹಿತ್ಯಕ್ಕೆ ಜಾನಪದವೇ ತಾಯಿ. ಜಾನಪದಕ್ಕೆ ಮಕ್ಕಳ ಸಾಹಿತ್ಯವೇ ತಾಯಿ ಬೇರು. ಮಕ್ಕಳ ಸಾಹಿತ್ಯದಲ್ಲಿ ಮಹಿಳೆಯ ಪಾತ್ರ ಅನನ್ಯ. ಇಂದಿನ ಮಹಿಳೆ ಮಕ್ಕಳನ್ನು ಕುರಿತು ‘ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ’ ಎಂದು ಹಾಡುವುದನ್ನೇ ಮರೆತಿದ್ದಾಳೆ. ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು’ ಎಂಬ ಪದ ಅರ್ಥ ಕಳೆದುಕೊಳ್ಳುತ್ತಿದೆ. ಮಕ್ಕಳ ಸಾಹಿತ್ಯ ಬೆಳೆದು ಬರಲು ಸರ್ಕಾರದ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು. ಮಕ್ಕಳ ಸಾಹಿತ್ಯ ಸಂಘ ಹುಟ್ಟಿಕೊಳ್ಳಬೇಕು. ಶಿಶು ಪ್ರಾಸ, ಶಿಶು ಗೀತೆ, ಮಕ್ಕಳ ನಾಟಕ, ಕಥೆ, ಕವಿತೆ, ಮಕ್ಕಳ ಸಮಾವೇಶ, ಸಾಹಿತ್ಯ ತರಬೇತಿ ಕಾರ್ಯಕ್ರಮಗಳು ಇಂದಿನ ಅವಶ್ಯಕತೆಗಳಾಗಿವೆ. ಶಿಕ್ಷಣ ಸಂಸ್ಥೆಗಳು ನೌಕರರನ್ನು ತಯಾರಿಸುವ ಕಾರ್ಖಾನೆಗಳಾಗಬಾರದು. ತಂದೆ-ತಾಯಿ ಮಕ್ಕಳು ವಿದ್ವಾಂಸರಾಗಲಿ, ಬುದ್ಧಿವಂತರಾಗಲೀ ಎಂದು ಬಯಸಬೇಕು. ಗ್ರಾಮೀಣ ಮಕ್ಕಳಿಗೆ ಸಾಹಿತ್ಯ ತರಬೇತಿ ಕೊಡಿಸಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನ ರಾಜ್ಯಮಟ್ಟದಲ್ಲಿ ವಾರಗಳ ಕಾಲ ನಡೆಯಬೇಕು.

ಪ್ರಶಸ್ತಿಗಳಿಗಾಗಿ ಲಾಬಿ, ವಿವಾದಾತ್ಮಕ ಹೇಳಿಕೆ, ಎಡ-ಬಲ ಪಂಥಗಳು ಸಾಹಿತ್ಯ ಶ್ರೀಮಂತಿಕೆಯನ್ನು ಗೌಣವಾಗಿಸಿವೆಯಾ?

ಅದೆಲ್ಲ ಪ್ರೌಢ ಸಾಹಿತ್ಯದಲ್ಲಿ ನಡೆಯುತ್ತದೆ. ಮಕ್ಕಳ ಸಾಹಿತ್ಯ ಎಂಬುದು ಮಗುವಿನ ಮನಸ್ಸಿನಷ್ಟೇ ನಿರ್ಮಲ. ಇಲ್ಲಿ ಮಗು ಮುಖ್ಯ. ಪಂಥ, ವರ್ಗ ಬೇಧಗಳು ಇಲ್ಲ. ಆದರೆ, ಸಾಹಿತಿಗಳನ್ನು ನೋಡುವಾಗ ಆ ಎಲ್ಲ ಪದಗಳು ಅನುಕರಣೆಯಾಗುತ್ತಿವೆ. ಪ್ರಶಸ್ತಿಗಳ ಆಯ್ಕೆ ಸಂದರ್ಭ ಆ ವರ್ಗ ಈ ವರ್ಗ ಅಂತೆಲ್ಲ ಪರಿಗಣನೆಯಾಗುವುದನ್ನು ಕಂಡಿದ್ದೇನೆ. ವರ್ಗಕ್ಕೆ ಸಿಗಲಿ ಎಂದರೆ ಕೇವಲ ವರ್ಗಕ್ಕೆ ಪುರಸ್ಕಾರ ಸಿಕ್ಕಂತಲ್ಲವಾ? ಇಲ್ಲಿ ನಿಜವಾದ ಸಾಹಿತ್ಯಕ್ಕೆ ಬೆಲೆ ಇಲ್ಲದಾಗುತ್ತದೆ ಎಂಬುದು ನನ್ನ ಅನಿಸಿಕೆ. ಪಠ್ಯಪುಸ್ತಕಗಳಲ್ಲೂ ಕೆಲ ವರ್ಗ ಆಧಾರಿತವಾಗಿ ಕವನಗಳನ್ನು ಬಲವಂತವಾಗಿ ಸೇರಿಸಿದ್ದನ್ನು ಕೇಳಿದ್ದೇನೆ. ಇದೆಲ್ಲವೂ ಸಾಹಿತ್ಯ ಲೋಕಕ್ಕೆ ಮಾಡುವ ಘೊರ ಅಪಮಾನ. ನಾನು ಬರೆದ ‘ಗುಡುಗುಡು ಮುತ್ಯಾ’, ‘ನನ್ನ ತೋಟ ಮತ್ತು ಚಲುವಿನ ಚೇತನ’ ಕವನಗಳು ಪ್ರಾಥಮಿಕ ಪಠ್ಯದಲ್ಲಿ ಅಳವಡಿಕೆಯಾಗಿವೆ. ಇದರಲ್ಲಿ ಸಿದ್ಧಾಂತಗಳಿಲ್ಲ. ಕೇವಲ ಮಕ್ಕಳಿಗೆ ಸರಳ ಸಂದೇಶ ಮತ್ತು ಮನರಂಜನೆ ನೀಡೋದೆ ಅದರ ಹೂರಣ. ಲೇಖಕನಾದವನು ಯಾವುದಕ್ಕೂ ಜೋತು ಬೀಳಬಾರದೆ. ಸಾಹಿತ್ಯವೇ ಅವನ ಸಿದ್ಧಾಂತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಈಗ ಹೇಳಿ ಅಕಾಡೆಮಿ ಪ್ರಶಸ್ತಿ ಬಂದಿದ್ದಕ್ಕೆ ತಮಗೆ ಏನೆನಿಸುತ್ತದೆ?

ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಬಾಲಸಾಹಿತ್ಯ ಪುರಸ್ಕಾರ ಲಭಿಸಿದ್ದು ಮಕ್ಕಳ ಸಾಹಿತ್ಯಕ್ಕೆ ಮತ್ತು ಹಿಂದುಳಿದ ಜಿಲ್ಲೆ ವಿಜಯಪುರಕ್ಕೆ ಸಿಕ್ಕ ಜಯ. ಈ ಹಿಂದೆ ಹಲವು ಪ್ರಶಸ್ತಿ ಸಿಕ್ಕಾಗಲೂ ಇಷ್ಟೇ ಹಿರಿಹಿರಿ ಹಿಗ್ಗಿದ್ದೆ. ಪ್ರಶಸ್ತಿಯಲ್ಲಿ ದೊಡ್ಡದು ಸಣ್ಣದು ಅಂತಿಲ್ಲ. ಸಾಹಿತಿಗೆ ಚಿಕ್ಕ ಸನ್ಮಾನವೂ ಬಹುದೊಡ್ಡ ಪುರಸ್ಕಾರವೇ. ಎಲ್ಲಕ್ಕಿಂತ ಹೆಚ್ಚಾಗಿ ಓದುಗರ ಸಕಾರಾತ್ಮಕ ಸ್ಪಂದನೆಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ. ಮಕ್ಕಳ ಸಾಹಿತ್ಯಕ್ಕೆ ಅವಿಭಜಿತ ಜಿಲ್ಲೆ ಕೊಡುಗೆ ಅಪಾರ. ಸಾಹಿತಿಗಳು ಮತ್ತು ಸಾಹಿತ್ಯ ಎಂದರೆ ಉತ್ತರ ಕರ್ನಾಟಕಕ್ಕೆ ಧಾರವಾಡವೇ ಕೊನೇ ಸೀಮೆ ಎಂಬಂತಾಗಿತ್ತು. ಇದೀಗ ಬರದ ಜಿಲ್ಲೆ ಸಾಹಿತಿಗಳನ್ನೂ ಗುರುತಿಸಿದ್ದು ಖುಷಿ ತಂದಿದೆ. ಈ ಭಾಗದಲ್ಲಿ ಮಕ್ಕಳ ಸಾಹಿತ್ಯ ಬೆಳವಣಿಗೆಗೆ ವಿಶೇಷ ಸಂಘ ಅಥವಾ ಪ್ರತ್ಯೇಕ ಅಕಾಡೆಮಿ ನೀಡಿದರೆ ಅನುಕೂಲ. ಇಂದಿನ ಕನ್ನಡ ದಿನಪತ್ರಿಕೆಗಳು ಪ್ರತಿ ವಾರ ಮಕ್ಕಳಿಗಾಗಿ ವಿಶೇಷ ಪುರವಣಿ ನೀಡುತ್ತಿರುವುದೇ ಸಮಾಧಾನಕರ ಸಂಗತಿ.

ಮಕ್ಕಳ ಕವಿಯಾಗಿ ಸಾಹಿತಿಯಾಗಿ…

ಮೂಲತಃ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದವರಾದ ಕಂಚ್ಯಾಣಿ ಶರಣಪ್ಪ ಅವರು 39 ವರ್ಷಗಳ ಕಾಲ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. 1988ರಲ್ಲಿ ನಿವೃತ್ತಿಯಾಗಿದ್ದು ಸುಮಾರು 50 ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಕವಿಕೀರ್ತಿ, ಬಸವ ಪ್ರದೀಪ, ಅಜ್ಜನ ಹಾಡು ಎಂಬ ಮಕ್ಕಳ ಕವಿತೆಗಳು, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಗುಡು ಗುಡು ಗುಂಡ, ಆಯ್ದ ನೂರೊಂದು ಕವಿತೆಗಳು, ಚಲುವಿನ ಚಿಟ್ಟೆ, ತೊಟ್ಟಿಲು ಗುಬ್ಬಿ, ರಾಜಯೋಗಿ ಬೀಳೂರ ಅಜ್ಜನವರು, ಗಿಲ್​ಗಿಲ್ ಗಿಡ್ಡ, ಪುಟ್ಟಿಯ ತೋಟ, ತಿಪ್ಪನ ಕಥೆಗಳು, ತಿಪ್ಪನ ಮತ್ತಷ್ಟು ಕಥೆಗಳು, ಬೆದರು ಬೆಚ್ಚ, ಚತುರ ಚಿಣ್ಣರು, ಹಾಡುವ ಹಕ್ಕಿ, ಬೆಕ್ಕಿನ ಕೊರಳಿಗೆ ಗಂಟೆ, ಅಜ್ಜನ ಅಂದದ ಕಥೆಗಳು ಮುಂತಾದ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಅಜ್ಜನ ಹಲ್ಲು

ಬೆಳಗಿನ ಸಮಯದಿ ಅಜ್ಜಿಯು ಹರುಷದಿ

ಬಟ್ಟೆ ತೊಳೆಯಲು ಹೊರಟಿಹಳು

ಅಜ್ಜನ ಅಂಗಿ ಧೋತರ ಲುಂಗಿ

ಎಲ್ಲಾ ಗಂಟನು ಕಟ್ಟಿದಳು||

ಬಟ್ಟೆ ಗಂಟನು ಬಗಲಲಿ ಹೊತ್ತು

ಹರಿಯುವ ಹಳ್ಳಕೆ ನಡೆಯುವಳು

ಜುಳು ಜುಳು ಹರಿಯುವ ಹಳ್ಳದ ನೀರಲಿ 

ಕಚಪಚ ಬಟ್ಟೆ ಕುಕ್ಕಿದಳು||

ಬರಬರ ಬರಬರ ಸಾಬೂನ ತಿಕ್ಕಿ

ಪಟಪಟ ಬಂಡೆಗೆ ಬಡಿಯುವಳು

ಬಡ ಬಡ ಬಟ್ಟೆ ತೊಳೆಯುವ ಭರದಲಿ

ಅಜ್ಜನ ಹಲ್ಲನು ಮುರಿಯುವಳು||

ಅಂಗಿಯ ಜೇಬಿನ ಒಳಗಡೆ ಅಜ್ಜನ

ಹಲ್ಲಿನ ಕಟ್ಟು ಹುಡಗಿತ್ತು

ಕುಟ್ಟಿದ ಪೆಟ್ಟಿಗೆ ಪಟಪಟ ಮುರಿದು

ಬಳಬಳ ಬಳಬಳ ಉದುರಿತ್ತು||

Leave a Reply

Your email address will not be published. Required fields are marked *