ಒಟ್ಟು 58 ಜನರ ರಕ್ಷಣೆ

ಧಾರವಾಡ: ದುರಂತ ಕಟ್ಟಡದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಗುರುವಾರವೂ ಮುಂದುವರಿದು, ಇದುವರೆಗೆ 58 ಜನರ ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 13 ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಉಣಕಲ್ ಕೂಡ ಒಬ್ಬಳು.

ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ಅಗ್ನಿಶಾಮಕ ದಳ, ರಾಜ್ಯ ತುರ್ತು ಸೇವೆ, ಪೊಲೀಸ್, ಗೃಹರಕ್ಷಕ ದಳ ಇಲಾಖೆಗಳು ಕಾರ್ಯಾಚರಣೆ ನಡೆಸುತ್ತಿವೆ. ಬುಧವಾರ ರಾತ್ರಿ 12.20ಕ್ಕೆ ಕಲಘಟಗಿಯ ನಬೀಸಾಬ ಎಂಬುವರನ್ನು ರಕ್ಷಿಸಿ ಹೊರತೆಗೆದರು. ಅದೇ ಸ್ಥಳದಲ್ಲಿ ಸಿಲುಕಿದ್ದ ಟೋಲ್ ನಾಕಾ ಪ್ರದೇಶದ ನಿವಾಸಿ ಪ್ರೇಮಾ ಉಣಕಲ್ ಎಂಬುವರನ್ನು ರಾತ್ರಿ 1 ಗಂಟೆ ಸುಮಾರಿಗೆ ಹೊರತೆಗೆಯುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಯಿತು.

ಗುರುವಾರ ಇಡೀ ದಿನ ರಕ್ಷಣಾ ಕಾರ್ಯಾಚರಣೆ ಮುಂದುವರಿದರೂ ಕಟ್ಟಡದ ಅಡಿಯಿಂದ ಹೊರಬಂದಿದ್ದು ಮೃತದೇಹಗಳು ಮಾತ್ರ. ಧಾರವಾಡ ಶಿವಾನಂದನಗರದ ದಿವ್ಯಾ ಉಣಕಲ್ (8), ಕುಮಾರೇಶ್ವರನಗರದ ಕಮಲಾಕ್ಷಿ ಮುಧೋಳಮಠ (38), ಕಲಘಟಗಿ ಟೆಕ್ಕೆದ ಓಣಿಯ ಇಸ್ಮಾಯಿಲ್ ಸಾಬ್ ಟೆಕ್ಕೆದ (22), ನವಲಗುಂದ ಕಾಲವಾಡ ಗ್ರಾಮದ ಗರ್ಜಪ್ಪ ವೀರಪ್ಪ ಲಕ್ಕುಂಡಿ (53) ಹಾಗೂ ಕುಮಾರೇಶ್ವರನಗರದ ಸಂಗಮೇಶ ಮಾನ್ವಿ (35), ಅನೂಪ್ ಕುಡತರಕರ್ (33) ಎಂಬುವರ ಮೃತದೇಹಗಳನ್ನು ಹೊರೆತೆಗೆಯಲಾಗಿದೆ.

ಫಲಿಸಲಿಲ್ಲ ತಾಯಿಯ ಪೂಜೆ

ಕಟ್ಟಡದಲ್ಲಿ ಸಿಲುಕಿದ್ದ ತನ್ನ ಮಗ ಸುರಕ್ಷಿತವಾಗಿ ಹೊರಬರುತ್ತಾನೆ ಎಂಬ ನಿರೀಕ್ಷೆಯೊಂದಿಗೆ 3 ದಿನಗಳಿಂದ ಕಾದು ಕುಳಿತಿದ್ದ ತಾಯಿಗೆ ಗುರುವಾರ ಸಂಜೆ ಆಘಾತ ಕಾದಿತ್ತು. ಕಟ್ಟಡದಲ್ಲಿ ಸೈಬರ್ ಕೆಫೆ ನಡೆಸುತ್ತಿದ್ದ ಅನೂಪ್ ಕುಡತರಕರ್ (33) ಶವ ದೊರೆತಿದೆ. ಅನೂಪ್​ನ ಇಡೀ ಕುಟುಂಬದವರು 3 ದಿನಗಳಿಂದ ಹಗಲು- ರಾತ್ರಿ ಘಟನಾ ಸ್ಥಳದಲ್ಲೇ ಕಣ್ಣೀರಿಡುತ್ತ ಕುಳಿತಿದ್ದರು. ತಮ್ಮ ಮಗ ಅಲ್ಲಿರಬಹುದು, ಇಲ್ಲಿರಬಹುದು ಎನ್ನುತ್ತ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ, ರಕ್ಷಣಾ ಸಿಬ್ಬಂದಿ ಎದುರು ಗೋಗರೆಯುತಿದ್ದ ತಂದೆ- ತಾಯಿ, ಸಂಬಂಧಿಕರಿಗೆ ಅಕ್ಷರಶಃ ಆಘಾತ ಕಾದಿತ್ತು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಅನೂಪ್ ಮೃತದೇಹವನ್ನು ಹೊರತೆಗೆಯಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಯತ್ತ ಧಾವಿಸಿದ ಮೃತನ ಸಂಬಂಧಿಕರೇ ಗುರುತು ಪತ್ತೆಗೆ ಪರದಾಡಬೇಕಾಯಿತು. ಪ್ಯಾಂಟ್​ನ ಕಿಸೆಯಲ್ಲಿ ದೊರೆತ ಮೊಬೈಲ್​ನ ಸಿಮ್ ಕಾರ್ಡ್ ತೆಗೆದು ಅದರಲ್ಲಿದ್ದ ಸಂಪರ್ಕ ಸಂಖ್ಯೆಗಳನ್ನು ಪರಿಶೀಲಿಸಿದಾಗ ಆತನೇ ಅನೂಪ್ ಎಂದು ಪತ್ತೆ ಹಚ್ಚಿದರು. ಈ ವೇಳೆ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು.