ಒಗ್ಗೂಡಿ ರೈತ ಹೋರಾಟಕ್ಕೆ ಸಿದ್ಧ

ಹೊಳೆಹೊನ್ನೂರು: ಇಂದು ರೈತಸಂಘ ವಿಭಜನೆ ಆಗಿರುವುದರಿಂದ ಅದರ ಶಕ್ತಿ ಕ್ಷೀಣಿಸಿದೆ ಎಂದುಕೊಂಡರೆ ಅದು ತಪ್ಪು. ವಿಭಜನೆ ಆಗಿರುವುದು ನಿಜವಾದರೂ ಸಮಸ್ಯೆ ಒಂದೇ ಆಗಿದೆ. ಅವಶ್ಯಕತೆ ಬಿದ್ದರೆ ಎಲ್ಲರೂ ಒಗ್ಗೂಡಿ ನಾವೆಲ್ಲ ಒಂದೇ ಎಂದು ಹೋರಾಟ ಮಾಡುತ್ತೇವೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಘೊಷಿಸಿದ್ದಾರೆ.

ಭದ್ರಾವತಿ ತಾಲೂಕಿನ ನಾಗಸಮುದ್ರದಲ್ಲಿ ನಿರ್ವಿುಸಿರುವ ಹುತಾತ್ಮ ರೈತರ ಸ್ಮಾರಕವನ್ನು ಶನಿವಾರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಮಹತ್ವದ ಘೊಷಣೆ ಮಾಡಿದರು.

ರೈತರ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತಹ ಸಂದರ್ಭ ಬಂದರೆ ಯಾವ ರೈತನೂ ರಾಜಿಯಾಗುವ ಮಾತೇ ಇಲ್ಲ. ರೈತ ಸಂಘಕ್ಕೆ ಯಾವುದೆ ಜಾತಿ, ಮತದ ಭೇದವಿಲ್ಲ. ಭೂ ತಾಯಿಯನ್ನು ನಂಬಿ ಬದುಕುತ್ತಿರುವ ಎಲ್ಲರೂ ರೈತರೇ. ಎಲ್ಲ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಲ್ಲಿ ರೈತರ ಮೇಲೆ ಪೊಲೀಸರ ಬಂದೂಕು ಸದ್ದು ಮಾಡಿದರೆ ರೈತ ಸಂಘಟನೆಯು ಚಳವಳಿಯ ಮೂಲಕ ಸದ್ದು ಮಾಡಬೇಕಾಗುತ್ತದೆ. ಪೊಲೀಸರು ರೈತರ ಮೇಲೆ ದೌರ್ಜನ್ಯವೆಸಗಿದರೆ ರೈತಸಂಘ ಸಿಡಿದೇಳುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರು ಹಿಂದಿಗಿಂತಲೂ ಇಂದು ವಿಭಿನ್ನವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಸಂಬದ್ಧ ಕಾಯ್ದೆಗಳು, ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಬೆಲೆ ಕುಸಿತ, ಮಾರುಕಟ್ಟೆ ಸಮಸ್ಯೆ, ಸಾಲ ಸೌಲಭ್ಯದ ಸಮಸ್ಯೆ, ವಿದೇಶಿ ಕಂಪನಿಗಳ ಹಾವಳಿ, ಮಧ್ಯವರ್ತಿಗಳ ಹಾವಳಿ, ಕೂಲಿ ಕಾರ್ವಿುಕರ ಸಮಸ್ಯೆ, ಕೃಷಿ ಯಂತ್ರೋಪಕರಣಗಳ ಸಮಸ್ಯೆ ಮತ್ತು ಫಸಲಿಗೆ ತಗುಲುವ ಆಧುನಿಕ ರೋಗಗಳ ಹತೋಟಿ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ರೈತರನ್ನು ಅಧೋಗತಿಗೆ ತಂದು ನಿಲ್ಲಿಸಿವೆ. ತಕ್ಷಣ ಸರ್ಕಾರ ರೈತರ ಎಲ್ಲ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಹುತಾತ್ಮ ರೈತರ ಸ್ಮಾರಕ ಲೋಕಾರ್ಪಣೆಗೊಳಿಸಿದ ನ್ಯಾಯವಾದಿ ರವಿವರ್ಮ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ರೈತ ಚಳವಳಿ ಇನ್ನಷ್ಟು ಗಟ್ಟಿ ಆಗಬೇಕು. 80ರ ದಶಕದಲ್ಲಿ ಯಾವ ರೀತಿಯ ಹೋರಾಟದ ಹಸಿವಿತ್ತೋ ಅದೇ ಹುಮ್ಮಸ್ಸಿನಿಂದ ರೈತರು ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದರು.

ಮಹಿಳೆಯರ ಎದೆ ಮೈಮುಟ್ಟಿ ಪೊಲೀಸರ ಶೋಧ: 1982, ಮೇ 25ರಂದು ಗೋಲಿಬಾರ್ ನಡೆದ ಸಂದರ್ಭದಲ್ಲಿ ಪೊಲೀಸರ ಕ್ರೌರ್ಯ ಎಷ್ಟಿತ್ತೆಂದರೆ ನಾಗಸಮುದ್ರ ಮತ್ತು ಮಂಗೋಟೆ ಗ್ರಾಮಗಳಲ್ಲಿ ಗಂಡಸರು ಮನೆ ಬಿಟ್ಟು ತಲೆ ಮರೆಸಿಕೊಂಡಿದ್ದರು. ಶೋಧಕ್ಕೆಂದು ಬಂದ ಪೊಲೀಸ್ ಅಧಿಕಾರಿಗಳು ಹೆಣ್ಣು ಮಕ್ಕಳ ಎದೆ ಮೈಮುಟ್ಟಿ, ಅವರು ಹೆಣ್ಣೋ, ಗಂಡೋ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು ಎಂದು ಹಿಂದಿನ ಘಟನೆಗಳನ್ನು ರವಿವರ್ಮ ಕುಮಾರ್ ಮೆಲುಕು ಹಾಕಿದರು.

ಗೋಲಿಬಾರ್ ಪ್ರಕರಣದಲ್ಲಿ ಹೋರಾಡಿ ಜೈಲು ಸೇರಿದ್ದ ರೈತರನ್ನು ಸನ್ಮಾನಿಸಲಾಯಿತು. ರೈತಸಂಘದ ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ, ಸಾಮಾಜಿಕ ಕಾರ್ಯಕರ್ತ ಅಮ್ರಾನ್, ಡಾ. ಚಿಕ್ಕಸ್ವಾಮಿ, ಕಡಿದಾಳು ಶಾಮಣ್ಣ, ಅನುಸೂಯಮ್ಮ, ಚಂದ್ರಪ್ಪ, ಪಂಚಾಕ್ಷರಪ್ಪ, ರವಿಕುಮಾರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *