ಒಗ್ಗಟ್ಟಿದ್ದರೆ ಸಮಸ್ಯೆಗೆ ಪರಿಹಾರ

ನೆಲಮಂಗಲ: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಪರವಾಗಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಯ್ಯ ಸಲಹೆ ನೀಡಿದರು.

ತಾಲೂಕಿನ ಭಿನ್ನಮಂಗಲ ಗ್ರಾಮದ ವಿನಾಯಕ ಬಡಾವಣೆಯಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಒಟ್ಟಾಗಿ ಸೇರಿ ಸರ್ಕಾರಕ್ಕೆ ಸಮಸ್ಯೆ ಮತ್ತು ಬೇಡಿಕೆ ಮನವರಿಕೆ ಮಾಡಿಕೊಟ್ಟಲ್ಲಿ ಈಡೇರಿಸಲು ಸಹಕಾರಿಯಾಗಲಿದೆ. ನಮ್ಮಲ್ಲಿ ಒಗ್ಗಟ್ಟಿಲ್ಲವೆಂದರೆ ನಮ್ಮ ಬೇಡಿಕೆ ಪೊರೈಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ಶಿಕ್ಷಕರ ಸಮುದಾಯದಲ್ಲಿ ನೂರಾರು ಸಂಘ ಹುಟ್ಟಿಕೊಂಡು ನೌಕರರ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ. ಸಂಘಟನೆಗಳಲ್ಲಿನ ಅಧಿಕಾರದ ಆಸೆ ಬಿಟ್ಟು ಒಂದಾದಲ್ಲಿ ಸಮುದಾಯದ ದೊಡ್ಡದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಗ್ರಾಮಾಂತರ ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಉತ್ತಮ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಿರುವುದು. ನೌಕಕರ ಪ್ರತಿಭಾವಂತ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸರ್ಕಾರಿ ನೌಕರರ ಸಂಘದ 45 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ.ಅನಂತರಾಮಯ್ಯ, ಸಹಶಿಕ್ಷಕಿ ಉಮಾ ಸಿ., ಎಂ.ಜಿ.ಸುಜಾತಾ, ಸಹಶಿಕ್ಷಕ ಟಿ.ಹನುಮಂತೇಗೌಡ, ವಿ.ಜಿ.ವೆಂಕಟಾಚಲಯ್ಯ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರ ಮನವಿ: ತಾಲೂಕಿನಲ್ಲಿ ಶಿಕ್ಷಕರಿಗೆ ಬಡ್ತಿ ತಡೆ ಹಿಡಿಯಲಾಗಿದೆ ಹಾಗೂ ಪ್ರೌಢಶಿಕ್ಷಕರ ಮುಂಬಡ್ತಿಯಾದ ನಂತರ ಕಾಲಬಡ್ತಿಯನ್ನು ನಿಲ್ಲಿಸಲಾಗಿದ್ದು, ಇದರ ಬಗ್ಗೆ ರಾಜ್ಯ ಘಟಕದ ಗಮನಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯಾಧ್ಯಕ್ಷರಿಗೆ ಶಿಕ್ಷಕರು ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ತಾಲೂಕು ಪಂಚಾಯಿತಿ ಇಒ ಗೋವಿಂದರಾಜು, ಬಿಇಒ ಅಲ್ಮಾಸ್ ಫರ್ವೀನ್ ತಾಜ್, ನೌಕರರ ಸಂಘದ ರಾಜ್ಯ ಖಜಾಂಚಿ ಶ್ರೀನಿವಾಸ್, ಸದಸ್ಯ ಬಿ.ಬಿ ರಾಮಣ್ಣಗೌಡ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ಅಧ್ಯಕ್ಷ ರಾಜಶೇಖರ್, ಬೆಂಗಳೂರು ಉತ್ತರ ವಲಯ ವಿಶೇಷ ತಹಸೀಲ್ದಾರ್ ಶಿವರಾಜು, ಕ್ಷೇತ್ರ ಸಮನ್ವಯ ಅಧಿಕಾರಿ ನರಸಿಂಹಯ್ಯ, ಸಂಘದ ನಿರ್ದೇಶಕಿ ಪುಷ್ಪಾ, ಗುರುಮೂರ್ತಿ, ರವಿಕುಮಾರ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *