ಒಕ್ಕಲಿಗ ಸಮಾಜದ ಇಬ್ಬರನ್ನು ಸಿಎಂ ಮಾಡಿದ್ದು ಬಿಎಸ್‌ವೈ

ಕೆ.ಆರ್.ಪೇಟೆ: ಒಕ್ಕಲಿಗ ಸಮಾಜದ ಇಬ್ಬರನ್ನು ಮುಖ್ಯಮಂತ್ರಿ ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆದರೆ, ಅವರನ್ನು ಒಕ್ಕಲಿಗ ವಿರೋಧಿ ಎಂದು ಉದ್ದೇಶಪೂರ್ವಕವಾಗಿ ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಯುವಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಬಿಎಸ್‌ವೈ. ಈಗ ಅವರೇ ಬಿಎಸ್‌ವೈ ಒಕ್ಕಲಿಗ ವಿರೋಧಿ ಎಂದು ಹೇಳುತ್ತಿದ್ದಾರೆ. ಬಿಎಸ್‌ವೈ ಒಕ್ಕಲಿಗ ವಿರೋಧಿ ಆಗಿದ್ದರೆ, ಅವರನ್ನು ಹಾಗೂ ಸದಾನಂದಗೌಡರನ್ನು ಸಿಎಂ ಮಾಡುತ್ತಿದ್ದರೆ ಎಂದು ವ್ಯಂಗ್ಯವಾಡಿದರು.

ಒಕ್ಕಲಿಗರನ್ನು ಮತಬ್ಯಾಂಕ್ ಮಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸಿ ಒಕ್ಕಲಿಗರನ್ನು ಸೆಳೆಯುತ್ತಿರುವ ಇವರು, ಒಕ್ಕಲಿಗರಿಗಾಗಿ ಏನು ಮಾಡಿದ್ದಾರೆ. ಜಿಲ್ಲೆಯ 8 ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ಜಿಲ್ಲೆಯ ರೈತರಿಗೆ ಯಾವ ಶಾಶ್ವತ ಯೋಜನೆಯನ್ನು ಜೆಡಿಎಸ್ ನೀಡಿದೆ. ಮಂಡ್ಯ ಜಿಲ್ಲೆಯ ಜನರು ಸ್ವಾಭಿಮಾನಿಗಳು ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಇಲ್ಲಿನ ಮಣ್ಣಿನ ವಿಶೇಷತೆ ಇಡೀ ದೇಶಕ್ಕೆ ತಿಳಿದಿದೆ ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಪ್ರವಾಸ ಮಾಡಿದ ಯಡಿಯೂರಪ್ಪ ಅವರು 26 ಕ್ಷೇತ್ರಗಳನ್ನು ಗೆಲ್ಲಿಸಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ನಿರ್ನಾಮ ಆಗಲಿದೆ. ಕಾಂಗ್ರೆಸ್ ಕಥೆ ಹೇಳುವ ಹಾಗಿಲ್ಲ. ಈಗಾಗಲೇ ಇಬ್ಬರು ನಾಯಕರು ಜೈಲು ಪಾಲಾಗಿದ್ದಾರೆ. ಇನ್ನು ಹಲವು ಕಾಂಗ್ರೆಸ್ ನಾಯಕರು ಜೈಲು ಸೇರಲಿದ್ದಾರೆ ಎಂದು ಭವಿಷ್ಯ ನುಡಿದರು.

ಬಿಎಸ್‌ವೈ ಅಧಿಕಾರ ಪೂರ್ಣಗೊಳಿಸಲು ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ. ನಾನು ಅಭ್ಯರ್ಥಿ ಆಕಾಂಕ್ಷಿಯಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಇಲ್ಲೇ ಉಳಿದುಕೊಂಡು ಅಭ್ಯರ್ಥಿ ಗೆಲ್ಲಿಸುತ್ತೇನೆ. ಇಲ್ಲಿ ಜಾತಿ ರಾಜಕಾರಣ ನಡೆಯಬಾರದು. ನೀವು ಸ್ವಾಭಿಮಾನಿಗಳು, ಅಭಿವೃದ್ಧಿಗಾಗಿ ರಾಜಕಾರಣ ನಡೆಯಬೇಕು. ಬಿಎಸ್‌ವೈ ಋಣ ತೀರಿಸಲು ಕ್ಷೇತ್ರದ ಜನರಿಗೆ ಅವಕಾಶ ಬಂದಿದೆ. ಹಿಂದೆ ತಾಲೂಕಿನ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಎಸ್‌ವೈಗೆ ತವರೂರಿನ ಬಗ್ಗೆ ಪ್ರೀತಿ ಇದೆ. ಅವರು ಮುಂದೆಯೂ ಸಿಎಂ ಆಗಬೇಕಾದರೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ತಮ್ಮೇಶ್‌ಗೌಡ, ಬಿಜೆಪಿ ಮುಖಂಡ ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ನಾಗಣ್ಣಗೌಡ, ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾಸತೀಶ್‌ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ತಾಲೂಕು ಅಧ್ಯಕ್ಷ ಬೂಕಹಳ್ಳಿ ಮಂಜು, ಪ್ರಧಾನ ಕಾರ್ಯದರ್ಶಿ ಬಿ.ಸಿ.ಹರೀಶ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *