ಒಕ್ಕಲಕೊಪ್ಪದಲ್ಲೊಂದು ಅವಿಭಕ್ತ ಕುಟುಂಬ!

ಮಂಜುನಾಥ ಸಾಯೀಮನೆ ಶಿರಸಿ:ಈ ಮನೆಯ ಸದಸ್ಯರ ಸಂಖ್ಯೆ 43! ಗಂಡ – ಹೆಂಡತಿ ಜಗಳವಾಡಿ ಕೋರ್ಟ್ ಮೆಟ್ಟಿಲು ಹತ್ತುವ ಇಂದಿನ ದಿನಗಳಲ್ಲಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಕೊಪ್ಪದ ಕೆರ್ಯಾ ನಾಗು ಗೌಡ ಅವರ ಒಕ್ಕಲಿಗರ ಬೃಹತ್ ಕುಟುಂಬದಲ್ಲಿನ ಅನ್ಯೋನ್ಯತೆ, ವಿಶ್ವಾಸ ಮಾದರಿಯಾಗುವಂತಿದೆ.

ಬಡತನವಿದ್ದರೂ ದುಡಿದು ಒಟ್ಟಿಗೆ ಊಟ ಮಾಡುವ ಸ್ವಭಾವ ಈ ಕುಟುಂಬದ್ದು. ಹಿರಿಯರಿಗೆ ಗೌರವ ನೀಡಿ, ಅವರ ಸಲಹೆ ಸೂಚನೆಯಂತೆ ನಡೆದುಕೊಳ್ಳುವ ತಾಲೂಕಿನ ಅಪರೂಪದ ಕುಟುಂಬ ಇದೆನಿಸಿದೆ. ಕುಟುಂಬದ ಎಲ್ಲ ಸದಸ್ಯರು ಮದುವೆ, ಅಥವಾ ಇನ್ನಿತರ ಕಾರ್ಯಕ್ಕೆ ಹೊರಟರೆ ಮಿನಿ ಬಸ್ ಬೇಕಾಗುತ್ತದೆ. ಕುಟುಂಬದ ಎಲ್ಲ ಸದಸ್ಯರ ಊಟ, ತಿಂಡಿಗಾಗಿ ಪ್ರತಿ ತಿಂಗಳು 35 ಸಾವಿರ ರೂ. ಖರ್ಚು ಬರುತ್ತದೆ. ನೆಗಡಿ, ಜ್ವರವಾದರೆ ಔಷಧಕ್ಕೆ, ನೆಂಟರಮನೆ ತಿರುಗಾಟಕ್ಕೆ ತಗುಲುವ ಖರ್ಚು ಬೇರೆ. ಇಷ್ಟೆಲ್ಲ ದೊಡ್ಡ ಕುಟುಂಬವಾದರೂ ಪರಸ್ಪರ ವಿಶ್ವಾಸ, ನಂಬಿಕೆ ಈ ಕುಟುಂಬದಲ್ಲಿ ಅಚಲವಾಗಿದೆ.

ಏಳನೇ ವರ್ಗದವರೆಗೆ ಶಿಕ್ಷಣ ಪಡೆದ ಕುಟುಂಬದ ಮುಖ್ಯಸ್ಥ ಕೆರ್ಯಾ ಗೌಡ ವ್ಯವಹಾರ ತಿಳಿಯುವ ಮುನ್ನವೇ ತಂದೆ ನಿಧನರಾಗಿ, ಸಣ್ಣ ವಯಸ್ಸಿನಲ್ಲಿ ತನ್ನ ನಾಲ್ಕು ತಮ್ಮಂದಿರ ಜೊತೆ ಮನೆಯ ಜವಾಬ್ದಾರಿ ನಿಭಾಯಿಸುವಂತಾಯಿತು. ಕುಟುಂಬದ ಆಸ್ತಿಯಾದ 11 ಎಕರೆ ಕೃಷಿ ಭೂಮಿಯನ್ನು ಉಳುಮೆ ಮಾಡಲು ತಮ್ಮಂದಿರು ಹೆಗಲು ನೀಡಿದ್ದಾರೆ. ಮೂರು ಎಕರೆಯಷ್ಟು ಅಡಕೆ ತೋಟ ನಿರ್ವಿುಸಿ, ಉಳಿದ ಭೂಮಿಯಲ್ಲಿ ಭತ್ತದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಕುಟುಂಬ ಬೆಳೆದಂತೆ ಆದಾಯ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಯುವ ತಲೆಮಾರು ಬಾರ್ ಬೆಂಡಿಂಗ್ ಕೆಲಸ ಮತ್ತು ಕೃಷಿ ಕಾರ್ಯಗಳಿಗಾಗಿ ನಿತ್ಯವೂ ಹೊರ ಹೋಗುತ್ತಿದ್ದಾರೆ. ಆದರೆ, ತಮ್ಮ ದುಡಿಮೆಯಲ್ಲಿ ಖರ್ಚು ಕಳೆದು ಉಳಿದ ಹಣವನ್ನು ಕೆರ್ಯಾ ಗೌಡ ಅವರಿಗೆ ಪ್ರತಿ ತಿಂಗಳು ನೀಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗೆ ತೆರಳುವ 15 ಮಕ್ಕಳಿದ್ದು, ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ. ಗಣೇಶ ಚತುರ್ಥಿಗೆ ಕುಟುಂಬದ ಎಲ್ಲ ಸದಸ್ಯರಿಗೂ ಹೊಸ ಬಟ್ಟೆ ಕೊಡಿಸಲಾಗುತ್ತದೆ.

28 ಮತಗಳು ಒಂದೇ ಮನೆಯಲ್ಲಿ : ಒಂದೇ ಮನೆಯಲ್ಲಿ 28 ಮತದಾರರಿರುವುದು ರಾಜಕಾರಣಿಗಳಿಗೂ ಕಣ್ಣು ಕುಕ್ಕುತ್ತಿದೆ. ಹೀಗಾಗಿ, ಚುನಾವಣೆಯಲ್ಲಿ ಪ್ರಚಾರಕ್ಕೆ ಬರುವವರು ಊರಿನಲ್ಲಿ ಮೊದಲು ಇಲ್ಲಿಯೇ ಬಂದು ಮತ ಯಾಚನೆ ಮಾಡುತ್ತಾರೆ. ಯಾರು ಉತ್ತಮ ಅಭ್ಯರ್ಥಿ ಎಂದು ಕುಟುಂಬದ ಎಲ್ಲ ಸದಸ್ಯರು ಕುಳಿತು ರ್ಚಚಿಸುತ್ತೇವೆ. ಆ ಬಳಿಕ ಅವರಿಗೆ ಇಷ್ಟವಾದವರಿಗೆ ಮತ ನೀಡುತ್ತಾರೆ ಎನ್ನುತ್ತಾರೆ ಕೆರ್ಯಾ ಗೌಡ.

ಕುಟುಂಬ ದೊಡ್ಡದಾಗಿರು ವುದರಿಂದ ಪ್ರತಿ ದಿನವೂ ಯಾರಾದರೂ ನೆಂಟರು ಬಂದೇ ಬರು ತ್ತಾರೆ. ಅವರಿಗೆ ಕಜ್ಜಾಯ ಮಾಡಿ ಬಡಿಸ ಲಾಗುತ್ತದೆ. ಹೀಗಾಗಿ ಮಕ್ಕಳಿಗೂ ಖುಷಿ. | ಕೆರ್ಯಾ ಗೌಡ, ಕುಟುಂಬದ ಯಜಮಾನ