ಒಎಫ್​ಸಿ ಅಳವಡಿಕೆಗಾಗಿ ಬೇಕಾಬಿಟ್ಟಿ ರಸ್ತೆ ಅಗೆತ, ವಿವಿಧೆಡೆ ಸಂಭವಿಸುತ್ತಿವೆ ಸಾಕಷ್ಟು ಅಪಘಾತ

ಕಾರವಾರ: ಮೊಬೈಲ್​ಫೋನ್ ಟವರ್​ಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಕಲ್ಪಿಸಲು ಖಾಸಗಿ ಕಂಪನಿಗಳು ಜಿಲ್ಲೆಯ ವಿವಿಧೆಡೆ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ತೆಗ್ಗು ತೆಗೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.

ಸಾಮಾನ್ಯವಾಗಿ ರಸ್ತೆಯ ಪಕ್ಕದಲ್ಲೇ ಕೇಬಲ್​ಗಳನ್ನು ಎಳೆಯಲಾಗುತ್ತದೆ. ಕೇಬಲ್ ಹಾಕಲು ತೆಗ್ಗು ತೋಡಿ, ನಂತರ ಮುಚ್ಚುವ ಸಂದರ್ಭದಲ್ಲಿ ಚರಂಡಿಗಳನ್ನು ಕೂಡ ಮುಚ್ಚಿದ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲವೆಡೆ ರಸ್ತೆಗಳನ್ನು ಅಗೆದು ಸರಿಪಡಿಸದೇ ಬಿಡಲಾಗಿದೆ. ರಸ್ತೆಗಳ ಪಕ್ಕದಲ್ಲಿ ಗುಂಡಿ ತೋಡಿ ಹಾಗಿಯೇ ಬಿಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೇಬಲ್ ಗುಂಡಿಗಳಲ್ಲಿ ಜಾನುವಾರುಗಳು ಬಿದ್ದು ಒದ್ದಾಡಿದ ಹಲವು ಉದಾಹರಣೆಗಳೂ ಇವೆ. ಈ ಅವ್ಯವಸ್ಥೆ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗಿಲ್ಲ. ನಗರದಲ್ಲೂ ಇದೇ ಪರಿಸ್ಥಿತಿ ಇದೆ. ಇನ್ನೇನು ಹೊಸ ರಸ್ತೆ ನಿರ್ವಣವಾಗಿ ಅಂದವಾಯಿತು ಎನ್ನುವಾಗ ಕೇಬಲ್ ಗುಂಡಿ ಅಗೆದು ರಸ್ತೆಯನ್ನೂ ರಿಪೇರಿ ಮಾಡದೇ ಹಾಗೆಯೇ ಹೋಗುತ್ತಿದ್ದಾರೆ.

ಅರಣ್ಯ ಇಲಾಖೆ ಮೌನ: ಸರ್ಕಾರದಿಂದ ಕೈಗೊಳ್ಳುವ ಕುಡಿಯುವ ನೀರಿನ ಯೋಜನೆ, ರಸ್ತೆ, ಸೇತುವೆ ಮುಂತಾದ ಕಾಮಗಾರಿಗಳಿಗೂ ಅಡ್ಡಿಪಡಿಸಿ ವರ್ಷಗಟ್ಟಲೇ ವಿಳಂಬ ಮಾಡುವ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ಕಂಪನಿಯ ಕಾಮಗಾರಿಗೆ ಮಾತ್ರ ಯಾವುದೇ ಆಕ್ಷೇಪಣೆ ಸಲ್ಲಿಸದೇ ಇರುವುದು ವಿಪರ್ಯಾಸ ಎಂಬುದು ಸ್ಥಳೀಯರ ದೂರು.

ಸಿಗ್ನಲ್ ಪ್ರಾಬ್ಲಂ: ತಾಲೂಕಿನ ದೇವಳಮಕ್ಕಿ ಭಾಗದಲ್ಲಿ ಕಳೆದ 4 ತಿಂಗಳಿಂದ ಬಿಎಸ್​ಎನ್​ಎಲ್ 3ಜಿ ಮೊಬೈಲ್​ಫೋನ್ ಸಿಗ್ನಲ್ ಸರಿಯಾಗಿರದ ಕುರಿತು ಗ್ರಾಮಸ್ಥರು ದೂರಿದ್ದಾರೆ. ಈ ಕುರಿತು ಕಾರವಾರ ಬಿಎಸ್​ಎನ್​ಎಲ್ ಕಚೇರಿಗೆ ಗ್ರಾಮಸ್ಥರು ತೆರಳಿ ದೂರು ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಂಪನಿಯ ಆಫ್ಟಿಕಲ್ ಕೇಬಲ್ ಎಳೆಯುವಾಗ ಹಾಗೂ ನೀರಿನ ಪೈಪ್​ಲೈನ್, ರಸ್ತೆ ಕಾಮಗಾರಿ ಕೈಗೊಳ್ಳುವಾಗ… ಹೀಗೆ ವಿವಿಧ ಸಂದರ್ಭಗಳಲ್ಲಿ

ಬಿಎಸ್​ಎನ್​ಎಲ್ ಮೊಬೈಲ್​ಫೋನ್ ಕೇಬಲ್​ಗಳು ತುಂಡಾಗುತ್ತಿವೆ. ಒಮ್ಮೆ ಮೊಬೈಲ್​ಫೋನ್ ಸಿಗ್ನಲ್ ಹೋದರೆ ಮೂರ್ನಾಲ್ಕು ದಿನ ಬಾರದು. ತುರ್ತು ಸಂದರ್ಭದಲ್ಲಿ

ಆಂಬುಲೆನ್ಸ್​ಗೆ ಕರೆ ಮಾಡುವುದೂ ಕಷ್ಟವಾಗಿ ಬಿಡುತ್ತದೆ. ಈ ಭಾಗದಲ್ಲಿ ಇದೊಂದೇ ಮೊಬೈಲ್ ಸಿಗ್ನಲ್ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥ ಪ್ರಜ್ವಲ ಶೇಟ್ ತಿಳಿಸಿದ್ದಾರೆ.

ಗ್ರಾಪಂಗಳಿಂದ ಖಾಸಗಿ ಕಂಪನಿಗಳು ಪರವಾನಗಿ ಪಡೆಯುತ್ತಿವೆಯೇ ಅಥವಾ ಹಾನಿಗೆ ದಂಡ ತುಂಬುತ್ತಿವೆಯೇ ಎಂಬ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು. | ಎಂ.ರೋಶನ್ ಜಿಪಂ ಸಿಇಒ

ಕೇಬಲ್ ಅಳವಡಿಕೆಗೆ ರಿಲಯನ್ಸ್ ಜಿಯೋ ಕಂಪನಿ 13 ಲಕ್ಷ ರೂ. ತುಂಬಿ ಪರವಾನಗಿ ಪಡೆದಿದೆ. ಕಾಮಗಾರಿ ಸಂದರ್ಭದಲ್ಲಿ ಉಂಟಾಗುವ ಸಾರ್ವಜನಿಕ ಆಸ್ತಿ ಹಾನಿಗೆ ದಂಡ ಆಕರಿಸಲಾಗುವುದು. ಅಲ್ಲದೆ, ಆಸ್ತಿ ರಿಪೇರಿ ಮಾಡಲಾಗುವುದು. ಈ ಹಿಂದೆ 25 ಲಕ್ಷ ರೂ.ಗಳನ್ನು ಕಂಪನಿಯಿಂದ ಪಡೆಯಲಾಗಿದೆ. | ಎಸ್.ಯೋಗೇಶ್ವರ ಕಾರವಾರ ನಗರಸಭೆ ಪೌರಾಯುಕ್ತ