ಒಂದೇ ದಿನ 12 ಉಮೇದುವಾರಿಕೆ

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಮಂಗಳವಾರ ಒಂದೇ ದಿನ ಬರೋಬ್ಬರಿ 12 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.ಜಿಲ್ಲಾಡಳಿತ ಭವನದಲ್ಲಿ ಸಮಾಜವಾದಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಗೌರಿಬಿದನೂರಿನ ಡಿ.ಪಾಳ್ಯ ಖಾದರ್ ಸುಭಾನ್ ಖಾನ್, ಭಾರತ ಕಾರ್ವಿುಕ ಪಾರ್ಟಿ(ಅಂಬೇಡ್ಕರ್ ಪಕ್ಷ) ಅಭ್ಯರ್ಥಿಯಾಗಿ ಚಿಂತಾಮಣಿಯ ಸೈಯದ್ ಅಲೀಂ ಪಾಷಾ, ರಿಪಬ್ಲಿಕನ್ ಸೇನೆ ಪಕ್ಷದ ಅಭ್ಯರ್ಥಿಯಾಗಿ ಶಿಡ್ಲಘಟ್ಟ ತಾಲೂಕು ಅರಿಕೆರೆ ಡಿ.ಮುನಿರಾಜು, ಕರ್ನಾಟಕ ಕಾರ್ವಿುಕರ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರಿನ ಡಿ.ಜೆ.ಹಳ್ಳಿಯ ನಜೀರ್ ಅಹಮದ್, ಅಂಬೇಡ್ಕರ್ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಚಿಂತಾಮಣಿ ಸಿಂಗಸಂದ್ರದ ಎಸ್.ಆರ್.ನಾಗೇಶ್​ರೆಡ್ಡಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ದೇವನಹಳ್ಳಿಯ ನಾಗೇಂದ್ರರಾವ್ ಸಿಂಧೆ, ಐ.ರಾ.ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಕೊಡಿಗೇನಹಳ್ಳಿಯ ಶೀತಲ್ ಚೌಹಾಣ್, ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಸಾದಪ್ಪನಹಳ್ಳಿ ರಾಮಾಂಜಿನಪ್ಪ, ನೆಲಮಂಗಲದ ಆರ್.ತೋಪಯ್ಯ, ಶಿಡ್ಲಘಟ್ಟ ತಾಲೂಕು ಗುಡಿಹಳ್ಳಿ ಜಿ.ಎನ್.ವೆಂಕಟೇಶಪ್ಪ, ಚಿಕ್ಕಬಳ್ಳಾಪುರದ ಎನ್.ನರಸಿಂಹಮೂರ್ತಿ, ಬೆಂಗಳೂರಿನ ಜೆ.ಸಿ.ನಗರದ ಅಬ್ದುಲ್ ಕರೀಂ ಅವರು ಜಿಲ್ಲಾ ಚುನಾವಣಾಧಿಕಾರಿ ಪಿ.ಅನಿರುಧ್ ಶ್ರವಣ್​ಗೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಾ.19ರಂದು ಶೂನ್ಯ, 20 ಮತ್ತು 21ರಂದು ತಲಾ ಒಂದು, 22ರಂದು 2, 25ರಂದು 9 ಅಭ್ಯರ್ಥಿಗಳು ಮತ್ತು ಕಡೇ ದಿನವಾದ ಮಾ.26ರಂದು 12 ಸೇರಿ 25 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಾ.27ರಂದು ನಾಮಪತ್ರ ಪರಿಶೀಲನೆ, 29ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.