ಬೆಂಗಳೂರು : ಸಂಚಾರ ನಿಯಮ ಪಾಲನೆ ಮಾಡುವಲ್ಲಿ ವಾಹನ ಸವಾರ/ಚಾಲಕರು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಆಡುಗೋಡಿ ಸಂಚಾರ ಠಾಣೆ ಎಎಸ್‌ಐ ಸತೀಶ್ ತಂಡ ಒಂದೇ ದಿನ ಬರೋಬ್ಬರಿ 261 ಕೇಸು ದಾಖಲಿಸಿ 1.30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಮಾರ್ಚ್ 3ರಂದು ಆಡುಗೋಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎಎಸ್‌ಐ ಸತೀಶ್ ಮತ್ತು ಅವರ ತಂಡ ಬೆಳಗ್ಗೆಯಿಂದ ಸಂಜೆ ವರೆಗೂ ವಿಶೇಷ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರ/ಚಾಲಕರನ್ನು ತಡೆದು ಕೇಸ್ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.
ಹಳೇ ಪ್ರಕರಣಗಳಲ್ಲಿ ಸಹ ದಂಡ ವಸೂಲಿ ಮಾಡಿದ್ದು, ಒಟ್ಟಾರೆ 261 ಕೇಸುಗಳಲ್ಲಿ 1,30,500 ರೂ. ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ ಹೆಚ್ಚಾಗಿ ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಉಲ್ಲಂಘನೆಯೇ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.