ಒಂದೇ ಕಂತಲ್ಲಿ ವಾಣಿಜ್ಯ ಬ್ಯಾಂಕ್ ಸಾಲಮನ್ನಾ ಫಲಾನುಭವಿಗಳ ಸಮಾವೇಶ ಗೊಂದಲಕ್ಕೆ ತೆರೆ ಎಳೆವ ಉದ್ದೇಶ

ಬೆಂಗಳೂರು: ವಾಣಿಜ್ಯ ಬ್ಯಾಂಕ್​ಗಳಲ್ಲಿ ರೈತರ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವ ಸರ್ಕಾರ, ಸಾಲಮನ್ನಾ ಕುರಿತ ಗೊಂದಲಗಳಿಗೆ ತೆರೆ ಎಳೆಯಲು ಬೆಂಗಳೂರಿನಲ್ಲಿ ಫಲಾನುಭವಿಗಳ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದೆ. ಸುಮಾರು 13 ಸಾವಿರ ರೈತರ ಸಾಲಮನ್ನಾದ ಹಣ ಖಾತೆಗಳಿಂದ ವಾಪಸ್ ಆಗಿ ಗೊಂದಲ ಉಂಟಾಗಿ ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಒಂದೇ ಕಂತಿನಲ್ಲಿ ಪಾವತಿಗೆ ತೀರ್ವನಿಸಿ ಆದೇಶ ಹೊರಡಿಸಿದೆ.

ಸಾಲಮನ್ನಾಕ್ಕೆ ಅರ್ಹತೆ ಹೊಂದಿರುವ ನಿರ್ಬಂಧಿತ, ಓವರ್ ಡ್ಯೂ ಹಾಗೂ ಪ್ರೋತ್ಸಾಹಧನಕ್ಕೆ ಅರ್ಹತೆ ಹೊಂದಿರುವ ಸಾಲಗಳನ್ನು ಒಂದೇ ಕಂತಿನಲ್ಲಿ ಪಾವತಿಸಲಾಗುತ್ತದೆ. ಇದರಿಂದ 7.49 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ. ವಾಣಿಜ್ಯ ಬ್ಯಾಂಕ್​ಗಳಲ್ಲಿ ರೈತರ ಸಾಲ ಬಡ್ಡಿ ಸೇರಿ 8,547.46 ಕೋಟಿ ರೂ. ಇದೆ. ಅದರಲ್ಲಿ ಇದುವರೆಗೂ 3,930.15 ಕೋಟಿ ರೂ. ಪಾವತಿ ಮಾಡಲಾಗಿದೆ. ಉಳಿದ ಮೊತ್ತ ತಕ್ಷಣ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

ಸಮಾವೇಶ: ಸಾಲಮನ್ನಾ ನಾಟಕವೆಂದು ಪ್ರತಿಪಕ್ಷ ಬಿಜೆಪಿ ಟೀಕೆ ಮಾಡುತ್ತಿದೆ. ಈ ಟೀಕೆಗೆ ಫಲಾನುಭವಿಗಳ ಬೃಹತ್ ಸಮಾವೇಶದ ಮೂಲಕ ಉತ್ತರ ನೀಡಲು ಸರ್ಕಾರ ಮುಂದಾಗಿದೆ. ಸಿಎಂ ಕುಮಾರಸ್ವಾಮಿ, ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಇತರರು ಸಮಾಲೋಚನೆ ನಡೆಸಿದ್ದು, ಇದೇ ತಿಂಗಳು ಬೆಂಗಳೂರಿನಲ್ಲಿ ಸಮಾವೇಶ ನಡೆಬೇಕೆಂದು ರ್ಚಚಿಸಿದ್ದಾರೆ. ಸಮಾವೇಶದ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಜುಲೈನಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಲ್ಲಿ ಸಾಲಮನ್ನಾ ಬಗ್ಗೆ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ. ಅದಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ತೆಗೆದುಕೊಳ್ಳಲು ಸಿಎಂ ಮುಂದಾಗಿದ್ದಾರೆ. ಸಮಾವೇಶದಲ್ಲಿ ಪ್ರತಿ ಜಿಲ್ಲೆಯಿಂದ ಕನಿಷ್ಠ 1500 ಜನರಂತೆ ಒಟ್ಟು 50 ಸಾವಿರ ಜನರನ್ನು ಸೇರಿಸಬೇಕು. ಇಲ್ಲಿಯೇ ಋಣ ಪರಿಹಾರ ಪತ್ರ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಲಮನ್ನಾ ನಡೆಯುತ್ತಿದೆ. ದಾಖಲೆಗಳು ಹೊಂದಾಣಿಕೆಯಾದಂತೆ ಹಣ ಬಿಡುಗಡೆ ಸಹ ಆಗುತ್ತಿದೆ. ಆದರೂ ಸಾರ್ವಜನಿಕ ವಲಯದಲ್ಲಿ ಗೊಂದಲಗಳಿವೆ. ಅವುಗಳಿಗೆ ಪರಿಹಾರ ಆಗಬೇಕಾದರೆ ಸಮಾವೇಶದ ಮೂಲಕವೇ ಉತ್ತರ ನೀಡಬೇಕು ಎಂಬುದು ಸರ್ಕಾರದ ನಿಲುವಾಗಿದೆ.

Leave a Reply

Your email address will not be published. Required fields are marked *