Friday, 16th November 2018  

Vijayavani

Breaking News

ಒಂದೆರಡು ವರ್ಷದಲ್ಲಿ ಉತ್ತಮ ಸೇವೆ

Thursday, 12.07.2018, 9:11 PM       No Comments

ಹಾವೇರಿ: ಪ್ರಧಾನಿ ಮೋದಿ ಅವರ ನೋಟ್​ಬ್ಯಾನ್ ನಿರ್ಧಾರದ ಪರಿಣಾಮ ಸಹಕಾರಿ ಸಂಘಗಳು ಸಮಸ್ಯೆ ಎದುರಿಸುವಂತಾಯಿತು. ಒಂದೆರಡು ವರ್ಷದಲ್ಲಿ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಸುಲ್ತಾನಪುರಿ ಹೇಳಿದರು.

ನಗರದ ಅಶೋಕ ಹೋಟೆಲ್ ಸಭಾಭವನದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್​ಗಳ ಮಹಾಮಂಡಳ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಆಯೋಜಿಸಿದ್ದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಹಕಾರ ಮಹಾಮಂಡಳದಿಂದ ಡಿಪ್ಲೊಮಾ ಕೋರ್ಸ್ ತೆರೆಯಲಾಗಿದೆ. ಈಗಾಗಲೇ 150 ಜನ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಸಹಕಾರ ಸಂಘಗಳ ಸಂಘಟನೆ ಅವಶ್ಯವಿದ್ದು, ಸುಭದ್ರಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಹೆಚ್ಚಿನ ಜನ ಸಹಕಾರಿ ಸಂಘಗಳ ಮೇಲೆ ಅವಲಂಬಿತರಾಗಿದ್ದಾರೆ. ಸಾಲ ನೀಡುವಲ್ಲಿ ಹಾಗೂ ಸಾಲ ಮರುಪಾವತಿಯಲ್ಲಿ ಸಹಕಾರ ಸಂಘಗಳು ಶಿಸ್ತಿನ ಕ್ರಮ ಅನುಸರಿಸಿದರೆ ಅಭಿವೃದ್ಧಿ ಸಾಧ್ಯ ಎಂದರು.

ಸಹಕಾರ ಯೂನಿಯನ್ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ರಾಜ್ಯದಲ್ಲಿ 37ಸಾವಿರ ಸಹಕಾರ ಸಂಘಗಗಳಿದ್ದು, 5ರಿಂದ 6ಲಕ್ಷ ಜನ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಅನಿಲ ಭಾರದ್ವಾಜ್, ಎನ್.ಎಂ. ಶಿವಕುಮಾರ ಅವರು ತರಬೇತಿ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಂಡಳಿಯ ಎಸ್.ಎಂ. ಪಾಟೀಲ, ಶಂಭಣ್ಣ ಬಸೇಗಣ್ಣಿ, ಮಂಜುಳಾ ಬಾಳಿಕಾಯಿ, ಭಾವಲಿಂಗಯ್ಯ ಹಿರೇಮಠ, ಮೃತ್ಯುಂಜಯ ಬಾಸೂರ ಇತರರಿದ್ದರು.

Leave a Reply

Your email address will not be published. Required fields are marked *

Back To Top