ಒಂದು ಗ್ರಾಮ ಒಂದೇ ಗಣಪತಿ

ರಾಣೆಬೆನ್ನೂರ: ಹಿಂದುಗಳ ಒಗ್ಗಟ್ಟಿನ ಸಂಭ್ರಮದ ಹಬ್ಬವಾದ ಗಣೇಶ ಚತುರ್ಥಿಯನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಸಂಕಲ್ಪ ಮಾಡಿರುವ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ‘ಒಂದು ಗ್ರಾಮ ಒಂದೇ ಗಣಪತಿ’ ಪ್ರತಿಷ್ಠಾಪನೆ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಗಣೇಶ ಚುತುರ್ಥಿ ಸಂದರ್ಭದಲ್ಲಿ ನಡೆಯುವ ಗಲಾಟೆ, ಡಿಜೆ ಬಳಕೆ, ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ಅಬ್ಬರ ತಡೆಯುವ ಹಾಗೂ ವಿಸರ್ಜನೆ ವೇಳೆ ಸೂಕ್ತ ಬಂದೋಬಸ್ತ್ ಒದಗಿಸಲು ಅನುಕೂಲವಾಗುವ ದೃಷ್ಟಿಯಿಂದ ಗ್ರಾಮೀಣ ಠಾಣೆ ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಏನಿದು ಪ್ರಯತ್ನ…?: ‘ಕುಲ ಒಂದೇ ದೈವ ಒಂದೇ, ನಮ್ಮೂರಿನ ಗಣಪತಿ ಒಂದೇ, ನಾವೆಲ್ಲರೂ ಒಂದೇ’ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಪೊಲೀಸರು ಕೆಲ ನಿಯಮಾವಳಿಗಳನ್ನು ರೂಪಿಸಿದ್ದಾರೆ.

ಗ್ರಾಮಗಳ ಓಣಿ ಓಣಿಗೊಂದು ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಬದಲು ಎಲ್ಲ ಸಂಘಟಕರು ಸೇರಿ ಒಂದೇ ಗಣಪತಿ ಪ್ರತಿಷ್ಠಾಪನೆ ಮಾಡಬೇಕು. ಅದು ಮಣ್ಣಿನಿಂದ ಮಾಡಿದ ನೈಸರ್ಗಿಕ ಬಣ್ಣ ಬಳಸಿದ ಮೂರ್ತಿಯಾಗಿರಬೇಕು. ಹಬ್ಬದ ನಿಮಿತ್ತ ನಡೆಯುವ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಹೊರತು ಪಡಿಸಿ ಧಾರ್ವಿುಕತೆ ಧಕ್ಕೆ ತರುವಂತಹ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳಬಾರದು. ನ್ಯಾಯಾಲಯದ ಆದೇಶದಂತೆ ರಾತ್ರಿ ಹತ್ತು ಗಂಟೆಯೊಳಗೆ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು. ಮೆರವಣಿಗೆ ವೇಳೆಯಲ್ಲಿ ಡಿಜೆ ಬಳಸುವಂತಿಲ್ಲ. ಪಾಶ್ಚಿಮಾತ್ಯ ಗೀತೆಗಳನ್ನು ಹಾಕುವಂತಿಲ್ಲ. ಜಾನಪದ ಕಲೆಗಳಿಗೆ ಆದ್ಯತೆ ನೀಡಬೇಕು.

ಈ ಎಲ್ಲ ಷರತ್ತುಗಳನ್ನು ಅನ್ವಯಿಸಿಕೊಂಡು ಗಣೇಶ ಚತುರ್ಥಿ ಆಚರಿಸುವ ಗ್ರಾಮದ ಸಂಘಟಕರನ್ನು ಒಗ್ಗೂಡಿಸಿಕೊಳ್ಳಬೇಕು. ಅವರಲ್ಲಿಯೇ ಉತ್ತಮವಾಗಿ ಆಚರಿಸಿದವರನ್ನು ಆಯ್ಕೆ ಮಾಡಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲು ಪೊಲೀಸರು ಮುಂದಾಗಿದ್ದಾರೆ.

ಸ್ಪಂದಿಸುವರೇ ಸಂಘಟಕರು: ಗ್ರಾಮೀಣ ಭಾಗದಲ್ಲಿ ಬಹುತೇಕರು ಓಣಿಗೊಂದು ಗಣಪತಿ ಮೂರ್ತಿ ಪ್ರತಿಷ್ಠಾಪಿಸುವುದು ಸಾಮಾನ್ಯ. ಮೂರ್ತಿ ಪ್ರತಿಷ್ಠಾಪನೆಯನ್ನು ಗ್ರಾಮೀಣರು ತಮ್ಮ ಓಣಿಯ ಪ್ರತಿಷ್ಠೆ ಎಂದೇ ತಿಳಿದುಕೊಂಡಿರುತ್ತಾರೆ. ಇದರ ನಡುವೆ ಪೊಲೀಸರು ತಮ್ಮ ಪ್ರಯತ್ನದ ಕುರಿತು ಗ್ರಾಮೀಣ ಭಾಗದ ಗಣಪತಿ ಸಂಘಟಕರಿಗೆ ಮಾಹಿತಿ ನೀಡುತ್ತಿದ್ದಾರೆ. ಠಾಣೆಯಲ್ಲಿ ಸಭೆ ನಡೆಸಿ ಮಾಹಿತಿ ರವಾನಿಸಿದ್ದಾರೆ.

ಪೊಲೀಸರು ಅಂದುಕೊಂಡಂತೆ ನಡೆದರೆ ಜಿಲ್ಲೆಯಲ್ಲಿಯೇ ರಾಣೆಬೆನ್ನೂರ ಗ್ರಾಮೀಣ ಭಾಗದ ಗಣೇಶ ಚತುರ್ಥಿ ಇತರರಿಗೆ ಮಾದರಿಯಾಗಲಿದೆ. ಆದರೆ, ಪೊಲೀಸರ ಪ್ರಯತ್ನಕ್ಕೆ ಸಂಘಟಕರು ಯಾವ ರೀತಿ ಸ್ಪಂದನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಠಾಣೆಯಲ್ಲೂ ಸಂಚಾರ ನಿಯಮ ಜಾಗೃತಿ ಗಣಪತಿ…!: ಗ್ರಾಮೀಣ ಭಾಗದಲ್ಲಿ ವಿನೂತನ ಪ್ರಯತ್ನ ನಡೆಸಿದ ಪೊಲೀಸರು ಈ ಬಾರಿ ಠಾಣೆಯಲ್ಲೂ ಸಂಚಾರ ನಿಯಮ ಪಾಲನೆ ಕುರಿತ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ಗಣಪತಿ ಮೂರ್ತಿ ಹೆಲ್ಮೆಟ್ ಹಾಕಿಕೊಂಡ ರೀತಿಯಲ್ಲಿ ಇರಲಿದ್ದು, ಚಾಲನಾ ಪರವಾನಗಿ, ವಿಮೆ ಹೊಂದಿರುವ ಕುರಿತು ಜಾಗೃತಿ ಮೂಡಿಸಲಿದೆ ಎಂದು ಪಿಎಸ್​ಐ ಮೇಘರಾಜ ಎಂ.ವಿ. ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ನಾವು ಈ ಹಿಂದೆ ಮೋಟೆಬೆನ್ನೂರಿನಲ್ಲಿ ಇಂಥ ಪ್ರಯತ್ನ ಮಾಡಿದಾಗ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನಲ್ಲೂ ಇಂಥ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಗಣಪತಿ ಸಂಘಟಕರಿಗೆ ಈ ಕುರಿತು ತಿಳಿ ಹೇಳಲಾಗುತ್ತಿದೆ. ಕೆಲವರು ಒಪ್ಪಿಗೆ ಸೂಚಿಸಿದ್ದಾರೆ. ಎಲ್ಲರೂ ಇದಕ್ಕೆ ಕೈ ಜೋಡಿಸಿದರೆ, ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ ನಮ್ಮದಾಗಲಿದೆ. ಜತೆಗೆ ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕೂಡ ನೆಲೆಸಲಿದೆ.
| ಮೇಘರಾಜ ಎಂ.ವಿ., ಗ್ರಾಮೀಣ ಠಾಣೆ ಪಿಎಸ್​ಐ