ಒಂದನೇ ತರಗತಿಯಿಂದ ಇಂಗ್ಲಿಷ್ ಬೋಧನೆಗೆ ಚಂಪಾ ವಿರೋಧ

ಧಾರವಾಡ: ಕನ್ನಡಕ್ಕೆ ಕೆಟ್ಟ ಗಳಿಗೆ ಬಂದಿಲ್ಲ. ಆದರೆ, ಕಷ್ಟದ ದಿನಗಳು ಎದುರಾಗುತ್ತಿವೆ. ಯಾವ ವಿಷಯವನ್ನು ಸಾಹಿತಿಗಳು, ಶಿಕ್ಷಣ ತಜ್ಞರು ಕುಳಿತು ರ್ಚಚಿಸಿ, ಅನುಸಂಧಾನ ಮಾಡಿ ನಿರ್ಣಯ ಕೈಗೊಳ್ಳಬೇಕಿತ್ತೋ ಆ ವಿಷಯವಾಗಿ ಈಗಿನ ಮೈತ್ರಿ ಸರ್ಕಾರ ದಿಢೀರ್ ನಿರ್ಧಾರ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲು ಅವಸರದ ನಿರ್ಣಯ ಕೈಗೊಂಡಿದೆ. ಇದನ್ನು ಎಲ್ಲರೂ ಖಂಡಿಸಿದ್ದಾರೆ ಎಂದು ನಿಕಟಪೂರ್ವ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪೊ›. ಚಂದ್ರಶೇಖರ ಪಾಟೀಲ ಹೇಳಿದರು.

ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ಶುಕ್ರವಾರ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡವನ್ನು ಸಾರ್ವಭೌಮ ಭಾಷೆಯಾಗಿ ಉಳಿಸಿ ಬೆಳೆಸಿಕೊಂಡು ಹೋಗುವುದೇ ಈಗಿನ ಜ್ವಲಂತ ಸಮಸ್ಯೆಯಾಗಿದ್ದು, ಈ ದಿಸೆಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡ ಕೆಲ ಉತ್ತಮ ನಿರ್ಧಾರಗಳನ್ನು ಮುಂದುವರಿಸಿಕೊಂಡು ಹೋಗುವುದು ಈಗಿನ ಮೈತ್ರಿ ಸರ್ಕಾರದ ಧರ್ಮ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಸೂಕ್ಷ್ಮ ಎಚ್ಚರಿಕೆಗಳನ್ನು ನೀಡಿದರು.

ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಕನ್ನಡವೇ ಮಾಧ್ಯಮವಾಗಬೇಕು ಎಂಬ ಕುವೆಂಪು ಅವರ ಆಶಯ, ಕನಸು ಇದುವರೆಗೂ ನನಸಾಗಿಲ್ಲ. ಅದು ನನಸಾಗಬೇಕಾದರೆ ಕನ್ನಡಿಗರು ನಿರಂತರ ಜಾಗೃತರಾಗಿರಬೇಕು. ಇಲ್ಲದಿದ್ದರೆ ಸರ್ಕಾರಗಳು ಏನೇನೋ ನಿರ್ಣಯ ಮಾಡಿ ಕನ್ನಡ ಮರೆಗೆ ಸರಿಸಬಹುದು ಎಂದರು.

ನಾನು ಇಂಗ್ಲಿಷ್ ಪ್ರಾಧ್ಯಾಪಕ ಆಗಿರಬಹುದು. ಆದರೆ, ಆಂಗ್ಲ ಭಾಷೆ ನನಗೆ ಉಪಜೀವನ, ಕನ್ನಡ ಎನ್ನುವುದು ನನ್ನ ಜೀವನ ಎಂದು ಹೇಳಿದ ಚಂಪಾ, ಇಂಗ್ಲಿಷ್ ಕಲಿಕೆಗೆ ನನ್ನ ವಿರೋಧ ಇಲ್ಲ. ಇಂಗ್ಲಿಷ್ ಜಗತ್ತಿನ ಭಾಷೆ. ಆದರೆ, ಜಗತ್ತು ತಿಳಿಯಬೇಕಾದರೆ ಅದು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂಗಡಪತ್ರದ ಅಧಿವೇಶನದಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭದ ಬಗ್ಗೆ ಸುಳಿವು ನೀಡಿದ್ದರು. ಆದರೆ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಶಾಲೆ ಉಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದರು. ಅಲ್ಲದೆ, ಅವರು ಈಗಿನ ಮೈತ್ರಿ ಸರ್ಕಾರದ ನಿರ್ಧಾರಕ್ಕೂ ಒಪ್ಪಿಲ್ಲ ಎಂದರು.

ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಬಗ್ಗೆ 2016ರಲ್ಲೇ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕತ್ತಲಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಮುಖ್ಯಮಂತ್ರಿಯವರು ಕನ್ನಡಿಗರನ್ನು ಕತ್ತಲಲ್ಲಿ ಇಡಬಾರದು. ಕನ್ನಡದ ಅಳಿವು ಉಳಿವು ಅಸ್ಮಿತೆಯ ಸಮಸ್ಯೆಗೆ ಸರ್ಕಾರ ನಿಲುವು ಪ್ರಕಟಿಸಬೇಕು. ಖಚಿತ ನಿಲುವು ಸ್ಪಷ್ಟಪಡಿಸಲಿ ಎಂದರು.

ಕನ್ನಡದ ವೃಕ್ಷ ಯಾವುದೇ ಕಾರಣಕ್ಕೂ ಒಣಗಬಾರದು. ಅದರ ಎಲೆ, ಕಾಂಡ, ಬೇರು ಎಲ್ಲವೂ ಬೆಳೆಯಬೇಕು. ಮುಖ್ಯಮಂತ್ರಿ ಅವರು ಕನ್ನಡಕ್ಕೆ ಕುಮಾರಸ್ವಾಮಿ ಆಗಬೇಕೆ ಹೊರತು ಕಠೋರಸ್ವಾಮಿ ಆಗಬಾರದು ಎಂದು ನೇರವಾಗಿಯೇ ಹೇಳಿದರು.

ಸಿಎಂ ತಳಮಳ

ಚಂದ್ರಶೇಖರ ಪಾಟೀಲ ಅವರು ಮೈತ್ರಿ ಸರ್ಕಾರದ ಕನ್ನಡ ಕಾಳಜಿ ಪ್ರಶ್ನಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಸಿಎಂ ಕುಮಾರಸ್ವಾಮಿ ಅವರು ತಳಮಳ ವ್ಯಕ್ತಪಡಿಸಿದರು. ತಾವು ಕನ್ನಡದ ಉಳಿವಿಗೆ ಬದ್ಧ ಎಂದು ಕಸಾಪ ಅಧ್ಯಕ್ಷ ಹಾಗೂ ಇತರರಿಗೆ ಕುಳಿತಲ್ಲಿಯೇ ಅರುಹಿದರು. ಮೈತ್ರಿ ಸರ್ಕಾರ ಯಾವುದೇ ನಿರ್ಧಾರ ಇನ್ನೂ ಮಾಡಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಂತೆ ಭಾಸವಾಯಿತು. ಇದನ್ನು ಅವರು ತಮ್ಮ ಭಾಷಣದಲ್ಲೂ ಪ್ರಕಟಿಸಿದರು.

ಇದ್ಯಾವುದನ್ನೂ ನೋಡದೇ ಚಂಪಾ ಅವರು, ತಾವು ಹೇಳಬೇಕಾಗಿದ್ದನ್ನು ಹೇಳಿ ಮುಗಿಸಿದರು. ಒಟ್ಟಾರೆ ಚಂಪಾ ಅವರು ಸಿಎಂ ಕುಮಾರಸ್ವಾಮಿ ಅವರನ್ನು ಮೊದಲು ರೇಗಿಸಿ, ಕೊನೆಯಲ್ಲಿ ಮಣ್ಣಿನ ಮಗ, ಮಾಜಿ ಪ್ರಧಾನಿ ಪುತ್ರ ಕುಮಾರಸ್ವಾಮಿ ಕನ್ನಡದ ಬಗ್ಗೆ ಒಳ್ಳೆಯ ನಿರ್ಧಾರ ಮಾಡುತ್ತಾರೆ ಎಂದು ಹೇಳಿ ಮತ್ತೆ ತಣ್ಣಗಾಗಿಸಿದರು.