ಧಾರವಾಡ: ಜಿಲ್ಲೆಯಲ್ಲಿ ಈವರೆಗೆ 40,393 ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದ್ದು, ಒಟ್ಟು 4,644 ಜನರಿಗೆ ಸೋಂಕು ಪತ್ತೆಯಾಗಿದೆ. 2337 ಜನರಿಗೆ ಚಿಕಿತ್ಸೆ ನಡೆಯುತ್ತಿದ್ದು, 2152 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಲಹೆ ಸೂಚನೆ ನೀಡುವಿಕೆ ಇನ್ನಷ್ಟು ಚುರುಕಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋವಿಡ್ ಚಿಕಿತ್ಸೆ ನಿಯಂತ್ರಣ ಮತ್ತು ಜನಜಾಗೃತಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
554 ಜನ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿಗೆ ಆರೋಗ್ಯ ತಂಡ ಕಾಲಕಾಲಕ್ಕೆ ಭೇಟಿ ನೀಡಿ ಅಗತ್ಯ ಔಷಧ, ಆರೋಗ್ಯ ಸಲಹೆ ನೀಡುವಿಕೆ ಮತ್ತಿಷ್ಟು ಕರಾರುವಾಕ್ ಆಗಬೇಕು. ಸೋಂಕಿತರು ಪತ್ತೆಯಾಗುವ ಪ್ರದೇಶಗಳ ಸೀಲ್ಡೌನ್ ಕಠಿಣಗೊಳಿಸಿ, ಅವಧಿ ಮುಗಿದ ನಂತರ ತಕ್ಷಣ ಸೀಲ್ಡೌನ್ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಕೋವಿಡ್ ಚಿಕಿತ್ಸೆ ನೀಡುವ ವೈದ್ಯರಿಗೆ, ಶುಶ್ರೂಷಕರಿಗೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್, ಮುಖಗವಸು, ಕೈಗವಸು ನೀಡಬೇಕು. ಯಾವುದೆ ಕಂಪನಿ ಕಳಪೆ ಮಟ್ಟದ ಆರೋಗ್ಯ ಪರಿಕರ ಸರಬರಾಜು ಮಾಡಿದರೆ ತಕ್ಷಣ ಅವುಗಳನ್ನು ತಿರಸ್ಕರಿಸಿ ಸರಬರಾಜುದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ದಂಡ ವಿಧಿಸುವ ಕೆಲಸ ನಗರ ಪ್ರದೇಶದಲ್ಲಿ ಉತ್ತಮವಾಗಿದ್ದು, ಗ್ರಾಮೀಣ ಭಾಗದಲ್ಲೂ ಇದು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಕೋವಿಡ್ ಚಿಕಿತ್ಸೆಗೆ ಮೂಲಸೌಕರ್ಯ ಜಿಲ್ಲೆಯಲ್ಲಿ ಉತ್ತಮವಾಗಿವೆ. ಸರ್ಕಾರಿ ಆಸ್ಪತ್ರೆ, ಕಿಮ್್ಸ ಉತ್ತಮ ಕೆಲಸ ಮಾಡುತ್ತಿವೆ. ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸೋಂಕಿತರಿಗೆ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆಯಾದ ಬಳಿಕ 14 ದಿನಗಳವರೆಗೆ ಹೋಂ ಐಸೋಲೇಷನ್ ಕಡ್ಡಾಯ. ಹೋಂ ಐಸೋಲೇಷನ್ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಿಸಿ ಎಫ್ಐಆರ್ ಮಾಡಲಾಗುತ್ತಿದೆ. ಅವಳಿ ನಗರದಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಅಭಿಯಾನ ಆರಂಭಿಸಿದ್ದು, ಶೇ. 6ರಿಂದ 7 ಪ್ರಕರಣಗಳು ಮಾತ್ರ ಪಾಸಿಟಿವ್ ಬರುತ್ತಿವೆ. ಆರಂಭದಲ್ಲಿ ವರ್ತಕರು ಗೊಂದಲಕ್ಕೆ ಒಳಗಾಗಿದ್ದರು. ಈಗ ಸ್ವಯಂ ಪ್ರೇರಣೆಯಿಂದ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದರು.
ಶಾಸಕ ಅಮೃತ ದೇಸಾಯಿ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಉಪ ಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಡಿಮಾನ್ಸ್ ನಿರ್ದೇಶಕ ಡಾ. ಷಣ್ಮುಖಪ್ಪ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಶಿವನಗೌಡ ಪಾಟೀಲ, ಡಿಎಚ್ಒ ಡಾ. ಯಶವಂತ ಮದೀನಕರ, ಆರ್ಸಿಎಚ್ಒ ಡಾ. ಎಸ್.ಎಂ. ಹೊನಕೇರಿ, ಇತರರು ಇದ್ದರು.
ಆಡಳಿತದ ಮೇಲೆ ದುಷ್ಪರಿಣಾಮವಿಲ್ಲ: ಕೋವಿಡ್ ಸೋಂಕಿನಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾದರೂ ಆಡಳಿತದ ಮೇಲೆ ಯಾವುದೆ ಪರಿಣಾಮ ಬೀರಿಲ್ಲ. ಸಿಎಂ ಕ್ವಾರಂಟೈನ್ನಲ್ಲಿದ್ದರೂ ಮುಖ್ಯಕಾರ್ಯದರ್ಶಿ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಪಾಸಿಟಿವ್ ಬಂದವರು ಪರಾರಿ?: ಹುಬ್ಬಳ್ಳಿ: ರ್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಬಂದಿದ್ದು, ರೋಗ ಲಕ್ಷಣ ಇಲ್ಲದ ಇಬ್ಬರು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಹಳೇಹುಬ್ಬಳ್ಳಿ ಭಾಗದಲ್ಲಿ ಟೆಸ್ಟ್ ನಡೆಸಿ, ಸೋಂಕು ಕಂಡುಬಂದವರನ್ನು ಕರೆದೊಯ್ಯಲು ಆರೋಗ್ಯ ಇಲಾಖೆ ವಾಹನದಲ್ಲಿ ಕೂಡ್ರಿಸಲಾಗಿತ್ತು. ಅಧಿಕಾರಿ- ಸಿಬ್ಬಂದಿ ಉಳಿದವರ ಪರೀಕ್ಷೆಯಲ್ಲಿ ನಿರತರಾದ ವೇಳೆ, ಈ ಇಬ್ಬರು ಪಕ್ಕದಲ್ಲಿ ವಾಹನದಿಂದ ಇಳಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೆ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.