ಐಸಿಯು ಕೇಂದ್ರಗಳಿಗೆ ಬೇಕಿದೆ ಚಿಕಿತ್ಸೆ!

ಕೆ.ಎನ್.ರಾಘವೇಂದ್ರ ಮಂಡ್ಯ
ಉಸಿರಾಟದ ತೊಂದರೆ, ತುರ್ತುಚಿಕಿತ್ಸೆಗೆ ಅನುಕೂಲವಾಗಲೆಂದು ರಾಜ್ಯದ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರೆದಿರುವ ಐಸಿಯು ಘಟಕಕ್ಕೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ.

ಹಿಂದಿನ ಕಾಂಗ್ರೆಸ್ ಸರ್ಕಾರ, 2017ಬಜೆಟ್‌ನಲ್ಲಿ ಈ ಯೋಜನೆ ಘೋಷಿತ್ತು. ಅದರಂತೆ ಅದೇ ವರ್ಷದ ಡಿಸೆಂಬರ್‌ನಲ್ಲಿ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಘಟಕ ಸ್ಥಾಪಿಸಲಾಯಿತು. ಆದರೆ, ಈವರೆಗೂ ಈ ಘಟಕ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಿಸುವುದನ್ನೇ ಮರೆತಿದೆ. ಇದರಿಂದ ಐಸಿಯು ಘಟಕ ಅವ್ಯವಸ್ಥೆ ಜತೆಗೆ ಕೋಟ್ಯಂತರ ರೂ. ವೆಚ್ಚದ ಯಂತ್ರೋಪಕರಣ ಹಾಳಾಗುವ ಆತಂಕ ಎದುರಾಗಿದೆ.

‘ತೀವ್ರ’ ಸಮಸ್ಯೆಯಾಗುತ್ತಿದೆ: ಮಹತ್ವಾಕಾಂಕ್ಷಿಯನ್ನಿಟ್ಟುಕೊಂಡು ಸ್ಥಾಪಿಸಿದ ಐಸಿಯು ಘಟಕದ ಉದ್ದೇಶವೇ ಈಡೇರದಂತಾಗಿದೆ. ತಾಲೂಕಿನ ಮೂರು ಹಾಸಿಗೆಯುಳ್ಳ ಐಸಿಯು ಘಟಕಕ್ಕೆ ಅಗತ್ಯವಿರುವ ಎಲ್ಲ ಚಿಕಿತ್ಸಾ ಸಲಕರಣೆ ನೀಡಲಾಗಿದೆ. ಇದಕ್ಕಾಗಿ ಕೋಟ್ಯಂತರ ರೂ. ವ್ಯಯಿಸಲಾಗಿದೆ. ಆದರೆ, ಸಿಬ್ಬಂದಿಯನ್ನೇ ನೇಮಿಸಿಲ್ಲ. ಇದರಿಂದ ಕೇಂದ್ರ ಇದ್ದೂ ಇಲ್ಲದಂತಾಗಿದೆ.

ಪ್ರತಿ ಘಟಕಕ್ಕೆ ಅರವಳಿಕೆ ತಜ್ಞರು, ಎಂಬಿಬಿಎಸ್ ವೈದ್ಯರು, ದಾದಿಯರ ಅವಶ್ಯಕತೆ ಇದೆ. ದಿನದ 24 ಗಂಟೆಯೂ ಈ ಘಟಕದಲ್ಲಿ ಚಿಕಿತ್ಸೆ ನೀಡಬೇಕಿರುವುದರಿಂದ ಹೆಚ್ಚುವರಿ ಸಿಬ್ಬಂದಿ ನೇಮಕವೂ ಆಗಬೇಕಿದೆ. ಪ್ರತಿದಿನ 3 ಪಾಳಿಗಳಲ್ಲಿ ಕೆಲಸ ನಿರ್ವಹಿಸಬೇಕಿರುವುದು ಅವಶ್ಯಕವಾಗಿದೆ.

ಹೆಚ್ಚುವರಿ ಕೆಲಸ: ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಘಟಕದಲ್ಲಿ ಅಲ್ಲಿನ ವೈದ್ಯರು, ದಾದಿಯರನ್ನೇ ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ಸಿಬ್ಬಂದಿ ಹೈರಾಣಾಗಿದ್ದಾರೆ. ತಮ್ಮ ಕರ್ತವ್ಯದ ಜತೆಗೆ ಹೆಚ್ಚುವರಿ ಕೆಲಸವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಐಸಿಯು ಘಟಕದಿಂದ ಸಾಕಷ್ಟು ಅನುಕೂಲವಾಗಿರುವುದು ಇದೆ. ಪ್ರಮುಖವಾಗಿ ಅಪಘಾತ, ವಿಷ ಸೇವನೆದಂತಹ ಪ್ರಕರಣಗಳಲ್ಲಿ ಅಲ್ಲಿನ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಎಲ್ಲ ಸಂದರ್ಭದಲ್ಲಿಯೂ ಇದು ಕಷ್ಟವಾಗುತ್ತಿದೆ.

ಐಸಿಯು ಘಟಕಕ್ಕೆಂದು ಖರೀದಿಸಿರುವ ಯಂತ್ರೋಪಕರಣದ ಬಗ್ಗೆಯೂ ಸಾರ್ವಜನಿಕರಿಂದ ಆಕ್ಷೇಪ ಕೇಳಿಬರುತ್ತಿದ್ದು, ಗುಣಮಟ್ಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಾನದಂಡ ಅನುಸರಿಸಿದ್ದಾರೆಂಬುದರ ಬಗ್ಗೆಯೂ ಪ್ರಶ್ನೆ ಹುಟ್ಟುಕೊಂಡಿದೆ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಬೇಕಿದೆ. ಜತೆಗೆ ಖರೀದಿ ಮಾನದಂಡದ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ. ಈ ಮೂಲಕ ಗ್ರಾಮೀಣ, ಬಡ ರೋಗಿಗಳ ನೆರವಿಗೆ ಬರಬೇಕಿದೆ. ಇಲ್ಲದಿದ್ದರೆ, ಕೋಟ್ಯಂತರ ರೂ. ವೆಚ್ಚದ ಮಹತ್ವಕಾಂಕ್ಷಿಯ ಯೋಜನೆ ಹಳ್ಳ ಹಿಡಿಯುವುದರಲ್ಲಿ ಅನುಮಾನವಿಲ್ಲ.