ಐವರು ಕಳ್ಳರ ಬಂಧನ

ಧಾರವಾಡ: ನಗರದ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ದೇವಸ್ಥಾನ, ಸರ್ಕಾರಿ ಭವನ ಹಾಗೂ ಮನೆಗಳಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಲಕ್ಷ್ಮೀಸಿಂಗನಕೇರಿ ನಿವಾಸಿಗಳಾದ ಮಂಜುನಾಥ ಉರ್ಫ್ ಮಂಜ್ಯಾ ಅರ್ಜುನ ಹುಲ್ಲೂರ, ಶಾನು ರೆಹಮಾನಸಾಬ ಹಾಲಬಾವಿ, ರಾಜೇಸಾಬ ಉರ್ಫ್ ರಾಜಾ ನೂರಅಹ್ಮದ್ ಶೇಖ್, ಮಹ್ಮದ್ ಇಸಾಕ್ ಉರ್ಫ್ ಟಾಚಣ್ಯಾ ಸೈಫುದ್ದೀನ್ ಪಠಾಣ ಹಾಗೂ ಜನ್ನತನಗರದ ಬಾಬಾಜಾನ ಉರ್ಫ್ ಬಾಬಾ, ಮಹಬೂಬಸಾಬ ಸಂಶಿ ಬಂಧಿತ ಆರೋಪಿಗಳು ಎಂದರು.

ಈ ಐವರು ಆರೋಪಿಗಳು ನಗರದ ಗೌಳಿಗಲ್ಲಿ ವೆಂಕಟೇಶ್ವರ ದೇವಸ್ಥಾನದಲ್ಲಿ, ಸನ್ಮತಿ ಮಾರ್ಗದ ಅಂಬೇಡ್ಕರ್ ಭವನದಲ್ಲಿ, ಧಾರವಾಡ ಲೋಕಾಯುಕ್ತ ಎಸ್​ಪಿ ಮನೆಯಲ್ಲಿ, ಮಂಜುನಾಥಪುರದ ಕುಲಕರ್ಣಿಯವರ ಮನೆಯಲ್ಲಿ ಹಾಗೂ ಲಕ್ಷ್ಮೀನಗರದ ಕಿರಾಣಿ ಅಂಗಡಿಯಲ್ಲಿ ಕಳವು ಮಾಡಿದ್ದರು. ಬಂಧಿತರಿಂದ 6.87 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನಾಭರಣ, 18,700 ರೂ. ಮೌಲ್ಯದ 285 ಗ್ರಾಂ ಬೆಳ್ಳಿಯ ಆಭರಣ, 15,000 ರೂ. ಮೌಲ್ಯದ ತಾಮ್ರದ ಸಾಮಗ್ರಿ, 14,000 ನಗದು ಸೇರಿ ಒಟ್ಟು 7,55,700 ರೂ. ಮೌಲ್ಯದ ವಸ್ತು, ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಡಿಸಿಪಿಗಳಾದ ಎಲ್. ನಾಗೇಶ, ಶಿವಕುಮಾರ ಗುಣಾರೆ ನಿರ್ದೇಶನದಲ್ಲಿ ಎಸಿಪಿ ಎಂ.ಎನ್. ರುದ್ರಪ್ಪ ಮರ್ಗದರ್ಶನದಲ್ಲಿ ವಿದ್ಯಾಗಿರಿ ಠಾಣೆ ಇನ್​ಸ್ಪೆಕ್ಟರ್ ವೈ.ಎಚ್. ರಮಾಕಾಂತ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಪ್ರೊಬೆಷನರಿ ಪಿಎಸ್​ಐ ಶಿವಾನಂದ ಬನ್ನಿಕೊಪ್ಪ, ಸಿಬ್ಬಂದಿ ಎ.ಬಿ. ನರೇಂದ್ರ, ಎಂ.ಎಫ್. ನದಾಫ್, ಐ.ಪಿ. ಬುರ್ಜಿ, ಆರ್.ಕೆ. ಅತ್ತಾರ, ಪಿ.ಎ. ಮಾನೆ, ಎಂ.ಸಿ. ಮಂಕಣಿ, ಎಂ.ಜಿ. ಪಾಟೀಲ, ಎಂ.ಎನ್. ಮಲ್ಲಾಡದ, ಡಿ.ಎಸ್. ಸಾಂಗ್ಲಿಕರ, ಚಂದ್ರು ಬಳ್ಳಾರಿ, ಬಿ.ಜಿ. ಸವಣೂರ ತನಿಖಾ ತಂಡದಲ್ಲಿದ್ದರು. 6 ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ 10,000 ನಗದು ಬಹುಮಾನ ನೀಡಲಾಗುವುದು ಎಂದು ಆಯುಕ್ತ ನಾಗರಾಜ ತಿಳಿಸಿದರು.

ಡಿಸಿಪಿ ಶಿವಕುಮಾರ ಗುಣಾರೆ, ಎಸಿಪಿಗಳಾದ ಅನೀಲ ಭೂಮರೆಡಡಿ, ಶ್ರೀಕಾಂತ ಕಟ್ಟಿಮನಿ, ಎಂ.ಎನ್. ರುದ್ರಪ್ಪ, ಇನ್​ಸ್ಪೆಕ್ಟರ್ ವೈ.ಎಚ್. ರಮಾಕಾಂತ ಸುದ್ದಿಗೋಷ್ಠಿಯಲ್ಲಿದ್ದರು.

ನಟೋರಿಯಸ್ ಅಲ್ಲ: ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳವು ಪ್ರಕರಣಗಳಲ್ಲಿ ಅಂತಾರಾಜ್ಯದ ನಟೋರಿಯಸ್ ಗ್ಯಾಂಗ್​ನ ಕೈವಾಡವಿದೆ ಎನ್ನಲಾಗಿತ್ತು. ರಾಜ್ಯದ ಹಲವೆಡೆ ಹಾಗೂ ಅಂತಾರಾಜ್ಯಗಳಲ್ಲೂ ತಂಡ ತನಿಖೆ ನಡೆಸಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ಇದು ಸ್ಥಳೀಯ ಗ್ಯಾಂಗ್ ಎಂಬ ಸುಳಿವು ಸಿಕ್ಕಿತ್ತು. ಒಬ್ಬೊಬ್ಬರನ್ನೇ ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಆಯುಕ್ತ ನಾಗರಾಜ ತಿಳಿಸಿದರು.

ಮೊಬೈಲ್ ವಿಡಿಯೋ ಸುಳಿವು: ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಸ್ಥಳೀಯರೊಬ್ಬರು ದೂರದಿಂದ ತಮ್ಮ ಮನೆ ಮೇಲಿಂದ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದರು. ಅವರು ನೀಡಿದ ಸುಳಿವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿದ್ದ ದೇಹಾಕೃತಿಗಳ ಆಧಾರದ ಮೇಲೆ ಕಳ್ಳರ ಪತ್ತೆ ಮಾಡಲಾಯಿತು ಎಂದು ತನಿಖಾ ತಂಡದ ಪೊಲೀಸ್ ಸಿಬ್ಬಂದಿಯೊಬ್ಬರು ವಿವರಿಸಿದರು.

ಬಾಂಗ್ಲಾ ಕಳ್ಳರು ಬಲೆಗೆ?: ಕಲ್ಯಾಣನಗರದ ಶಿವಾನಂದ ಹೊಂಬಳ ಎಂಬುವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಖಚಿತ ಸುಳಿವು ಸಿಕ್ಕಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು. ಕೆಲ ತಿಂಗಳ ಹಿಂದೆ ಹೊಂಬಳ ಎಂಬುವರ ಮನೆಯ ಕಿಟಕಿಯ ಸರಳು ಮುರಿದು ಒಳನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ಮೂವರ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ, ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದರು. ವಿಶೇಷ ತಂಡಗಳ ನಿರಂತರ ತನಿಖೆಯ ಫಲವಾಗಿ ಇಬ್ಬರು ಬಾಂಗ್ಲಾದೇಶದ ಕುಖ್ಯಾತ ಕಳ್ಳರ ಸುಳಿವು ಸಿಕ್ಕಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.