ಐವರಿಗೆ ವಾಣಿಜ್ಯ ರತ್ನ ಪ್ರಶಸ್ತಿ

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 91ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭವನ್ನು ಸಂಸ್ಥೆಯ ಚಂದ್ರವದನ ಸಭಾಗೃಹದಲ್ಲಿ ಆ. 1ರಂದು ಮಧ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ವಿ.ಪಿ. ಲಿಂಗನಗೌಡರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೆ. ಸಂಜಯ ಗೋಡಾವತ್ ಗ್ರುಪ್​ನ ಚೇರ್ಮನ್ ಸಂಜಯ ಗೋಡಾವತ್ ಅತಿಥಿಯಾಗಿ ಆಗಮಿಸುವರು. ಮೈಕ್ರೋಫಿನಿಷ್ ಗ್ರುಪ್ ಆಫ್ ಕಂಪನಿಯ ಅಧ್ಯಕ್ಷ ತಿಲಕ ವಿಕಮಶಿ, ಲಕ್ಷೆ್ಮೕಶ್ವರದ ಶಾ ಮಹಾವೀರ ಕುಮಾರ ಅಶೋಕಕುಮಾರ ಜಿನ್ನಿಂಗ್ ಆಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿ ಸಂಸ್ಥಾಪಕ ಓಂ ಪ್ರಕಾಶ ಜೈನ್, ಕೆನ್ ಅಗ್ರಿಟೆಕ್ ಕಂಪನಿ ಸಂಸ್ಥಾಪಕ ವಿವೇಕ ನಾಯಕ, ದಾಸನೂರ ಅಗ್ರೋ ಇಂಡಸ್ಟ್ರೀಜ್ ಸಂಸ್ಥಾಪಕ ಪ್ರಕಾಶ ದಾಸನೂರ, ಕಾರವಾರದ ಗೋವಿಂದರಾವ್ ಮಾಂಜ್ರೇಕರ ಉದ್ಯಮ ಸಂಸ್ಥಾಪಕ ಸತೀಶ ಮಾಂಜ್ರೇಕರ ಅವರಿಗೆ ‘ವಾಣಿಜ್ಯ ರತ್ನ’ ಪ್ರಶಸ್ತಿ ನೀಡಲಾಗುವುದು.

ಯುವ ಉದ್ಯಮಿಗಳಾದ ಹುಬ್ಬಳ್ಳಿಯ ಪ್ರಸಾದ ಪಾಟೀಲ, ಬೆಳಗಾವಿಯ ನಿರಂಜನ ಕಾರಗಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ಪೂರ್ವದಲ್ಲಿ ಸಂಸ್ಥಾಪನೆ ದಿನಾಚರಣೆ ಸಮಿತಿ ಉಪಾಧ್ಯಕ್ಷ ಅಚ್ಯುತ್ ಲಿಮೆ ಅವರಿಂದ ಅರ್ಧ ಗಂಟೆ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

1928 ಆಗಸ್ಟ್ 1ರಂದು ದಿ. ಮುರಗಯ್ಯಸ್ವಾಮಿ ಜಂಗಿನ ಅವರು ಸ್ಥಾಪಿಸಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ನಾಡಿನ ನೆಲ, ಜಲ ರಕ್ಷಣೆಗೆ ಹಾಗೂ ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಉತ್ತರ ಕರ್ನಾಟಕದಲ್ಲಿ ಒಂದು ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ, ಔಷಧ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ ಸ್ಥಾಪನೆ ಸೇರಿ ಇತರ ಮಹತ್ವದ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ನೆಲೆಯೂರುವುದರಲ್ಲಿ ಪಾತ್ರ ವಹಿಸಿದೆ ಎಂದರು.

ಸಂಸ್ಥೆ, ವಾಣಿಜ್ಯ ಹಾಗೂ ಉದ್ದಿಮೆದಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವೇದಿಕೆಯಾಗಿದೆ. ಅಷ್ಟೇ ಅಲ್ಲದೆ, ಕೃಷಿ ಹಾಗೂ ಸಾರ್ವಜನಿಕರ ಅಗತ್ಯಗಳಿಗನುಗುಣವಾಗಿ ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರ ಹಮ್ಮಿಕೊಳ್ಳುತ್ತ ಬಂದಿದೆ. ಈ ಎಲ್ಲ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿದೆ. ಸಂಸ್ಥೆ ರಾಜ್ಯಾದ್ಯಂತ 2,500 ಸದಸ್ಯರನ್ನು ಹೊಂದಿದೆ. 110 ವಿವಿಧ ಸಂಘ-ಸಂಸ್ಥೆಗಳು ನಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದುಕೊಂಡಿವೆ. ಸಂಸ್ಥೆ ಕೇವಲ ವಾಣಿಜ್ಯ ಹಾಗೂ ಉದ್ದಿಮೆಗಳ ಅಭಿವೃದ್ಧಿಗೆ ಸೀಮಿತಗೊಳ್ಳದೆ ರಾಜ್ಯ, ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ವಿನಯ ಜವಳಿ ಮಾತನಾಡಿ, ಹುಬ್ಬಳ್ಳಿ-ಬೆಳಗಾವಿ ಇಂಟರ್​ಸಿಟಿ, ಹುಬ್ಬಳ್ಳಿ- ಬೆಳಗಾವಿ (ವಾಯಾ ಕಿತ್ತೂರ) ಹಾಗೂ ಮಿರಜ- ಮೈಸೂರು ರೈಲು ಪ್ರಾರಂಭಿಸುವಂತೆ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗ ಚಾಲ್ತಿಯಲ್ಲಿರುವ ಧಾರವಾಡ- ಮೈಸೂರು ರೈಲಿಗೆ ಯಾವುದೇ ಅಡಚಣೆ ಮಾಡದಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳಣ್ಣವರ, ಗೌರವ ಜಂಟಿ ಕಾರ್ಯದರ್ಶಿ ಅಶೋಕ ಗಡಾದ, ಅಂದಾನೆಪ್ಪ ಸಜ್ಜನ, ಸುಭಾಸ ಬಾಗಲಕೋಟಿ, ಜೆ.ಬಿ. ಹೊಂಬಳ, ಚನ್ನಬಸಪ್ಪ ಧಾರವಾಡ ಶೆಟ್ರು ಸುದ್ದಿಗೋಷ್ಠಿಯಲ್ಲಿದ್ದರು.

ಸಿಪೆಟ್ ಸ್ಥಾಪನೆಗೆ ಮುತುವರ್ಜಿ ವಹಿಸಿ: ಹುಬ್ಬಳ್ಳಿಯಲ್ಲಿ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (ಸಿಪೆಟ್) ಕೇಂದ್ರ ಸ್ಥಾಪಿಸುವಂತೆ 3-4 ವರ್ಷದಿಂದ ವಾಣಿಜ್ಯೋದ್ಯಮ ಸಂಸ್ಥೆ ಬೇಡಿಕೆ ಇಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿ.ಪಿ. ಲಿಂಗನಗೌಡರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸಿಪೆಟ್ ಸ್ಥಾಪನೆ ಮಾಡಬೇಕೆಂದರೆ ರಾಜ್ಯ ಸರ್ಕಾರ ಜಾಗ ನೀಡಬೇಕು. ಆದರೆ ರಾಜ್ಯ ಸರ್ಕಾರ ಭೂಮಿ ಖರೀದಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಈ ಹಿಂದೆ ಕಂದಾಯ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದ್ದೆವು. ಇದುವರೆಗೂ ಭರವಸೆಯಾಗಿಯೇ ಉಳಿದಿದೆ. ಸಿಪೆಟ್ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.