ಐಪಿಎಲ್ ಮಾದರಿಯಲ್ಲಿ ಚುನಾವಣೆ ಬೆಟ್ಟಿಂಗ್

ಚಿಕ್ಕಬಳ್ಳಾಪುರ:  ಐಪಿಎಲ್ ಟ್ವಿಂಟಿ-20 ಕ್ರಿಕೆಟ್ ಆಟಕ್ಕೆ ಬೆಟ್ಟಿಂಗ್ ಕಟ್ಟುವ ಮಾದರಿಯಲ್ಲಿ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಸೋಲು-ಗೆಲುವಿನ ವಿಚಾರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ.

ಹೌದು! ತೀವ್ರ ಪೈಪೋಟಿಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿರುವ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿಗೆ ಸಂಬಂಧಿಸಿದಂತೆ ಸ್ವಯಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಜಾತಿ, ರಾಜಕೀಯ ಬಲ, ಮತ ವಿಭಜನೆ ಲೆಕ್ಕಾಚಾರದಲ್ಲಿ ತಮ್ಮದೆ ಮೇಲುಗೈ ಎನ್ನುತ್ತಿದ್ದಾರೆ. ಆದರೆ, ಇದನ್ನು ಪ್ರತಿಸ್ಪರ್ಧಿಗಳು ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಪೈಪೋಟಿಯ ಚರ್ಚೆ, ನಾನಾ ವಿಮರ್ಶೆ, ವಾದ ಪ್ರತಿವಾದ, ಒಣ ಪ್ರತಿಷ್ಠೆಯು ಬೆಟ್ಟಿಂಗ್ ಕಟ್ಟಿಕೊಳ್ಳಲು ಕಾರಣವಾಗಿದೆ.

ಬಿಜೆಪಿ ಪರ ಬೆಟ್ಟಿಂಗ್ ಜೋರು: ಇದುವರೆಗೂ ಕ್ಷೇತ್ರದಲ್ಲಿ ಬಿಜೆಪಿ ಅರಳಿಲ್ಲ. ಆದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ವಿದ್ಯಮಾನಗಳು, ಹಲವರ ಬೆಂಬಲ, ಮೋದಿ ಅಲೆ ಮತ್ತು ಪ್ರತಿಸ್ಪರ್ಧಿಯ ವಿರೋಧಿ ಅಲೆ ಲೆಕ್ಕಾಚಾರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಗೆಲುವಿನ ಬಗ್ಗೆಯೇ ಹೆಚ್ಚಿನ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಹಾಗೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೊಯ್ಲಿಯ ಕಡೆಗಣನೆಯೂ ಇಲ್ಲ. ಮತದಾನವಾಗುತ್ತಿದ್ದಂತೆ ಕಾರ್ಯಕರ್ತರ ಸಭೆ ನಡೆಸಿದ ನಾಯಕರು, ಗೆಲುವು ನಮ್ಮದೆ ಎಂಬುದಾಗಿ ಹೇಳಿ ಕಳುಹಿಸಿದ್ದಾರೆ. ಇದೇ ಜೋಶ್​ನಲ್ಲಿ ಕಾಂಗ್ರೆಸ್ ಬೆಂಬಲಿತರು ಧೈರ್ಯದಲ್ಲಿ ಬಾಜಿ ಕಟ್ಟುವುದರಲ್ಲಿ ನಿರತರಾಗಿದ್ದಾರೆ.

ಕ್ರಿಕೆಟ್ ಫಸ್ಟ್, ಎಲೆಕ್ಷನ್ ಲಾಸ್ಟ್: ಪ್ರಸ್ತುತ ಜಿಲ್ಲೆಯಲ್ಲಿ ಐಪಿಎಲ್ ಎದುರು ಎಲೆಕ್ಷನ್ ಬೆಟ್ಟಿಂಗ್ ತುಂಬಾ ಕಡಿಮೆ ನಡೆಯುತ್ತಿದೆ. ಪ್ರತಿ ಐಪಿಎಲ್ ಪಂದ್ಯಾವಳಿಗೆ ಅರ್ಧ ಶತಕ, ವಿಕೆಟ್, ಒಟ್ಟು ರನ್, ಸೋಲು ಗೆಲುವಿಗೂ ಬಾಜಿ ಮಾತೇ ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಕನಿಷ್ಠ ಎರಡು ಸಾವಿರ ರೂ.ಗಳಿಂದ ಬೆಟ್ಟಿಂಗ್ ಆರಂಭವಾಗುತ್ತಿದೆ. ಮೊಬೈಲ್, ಉಂಗುರ, ಚೈನು ಸೇರಿ ನಾನಾ ವಸ್ತುಗಳನ್ನು ಪಣಕ್ಕಿಡಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ರೈತರು, ಮೆಕಾನಿಕ್​ಗಳೇ ಬಹುಪಾಲು ಹೆಚ್ಚು.

ಸಾಲ ಶೂಲದ ಕಾಟ: ಹೆಚ್ಚಿನ ಹಣ ಗಳಿಕೆಯ ವಿಶ್ವಾಸದಲ್ಲಿ ಹಲವರು ಬೆಟ್ಟಿಂಗ್ ಕಟ್ಟಿ ಸಾಲದ ಕೂಪಕ್ಕೆ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಬಾರಿ ಐಪಿಎಲ್ ಅವಧಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ನಂದಿಯ ಯುವಕ ಮತ್ತು ಎಸ್​ಜೆಸಿಐಟಿ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ಇನ್ನು ಹಲವೆಡೆ ಮಕ್ಕಳ ಸಾಲದ ಗಲಾಟೆಗೆ ಪಾಲಕರು ಕಿರಿಕಿರಿ ಅನುಭವಿಸಿ ಕೊನೆಗೆ ಹಣ ಪಾವತಿಸಿದ ಪ್ರಕರಣಗಳು ವರದಿಯಾಗಿದ್ದವು. ಇದೆಲ್ಲದರ ಅರಿವಿದ್ದರೂ ಬೆಟ್ಟಿಂಗ್ ಮಾತ್ರ ನಿಂತಿಲ್ಲ. ಪೊಲೀಸರ ಹದ್ದಿನ ಕಣ್ಣು ಬಾಜಿಯಾಟದ ಎದುರು ಕೆಲಸ ಮಾಡುತ್ತಿಲ್ಲ.

ಒಬ್ಬರಿಂದ ಒಬ್ಬರು ಬೆಟ್ಟಿಂಗ್ ಕಟ್ಟೋದರಲ್ಲಿ ನಿರತರಾಗಿದ್ದಾರೆ. ಮೊದಲು ಗೆಳೆಯರು ಹುರಿದುಂಬಿಸಿದ ಹಿನ್ನೆಲೆಯಲ್ಲಿ ಕಟ್ಟಿದ ಬೆಟ್ಟಿಂಗ್​ಗೆ 5 ಸಾವಿರ ರೂ. ಲಾಭ ಬಂತು. ಬಳಿಕ ಕಳೆದುಕೊಂಡಿದ್ದೇ ಹೆಚ್ಚು. ಈಗ ಬಾಜಿ ಕಟ್ಟುತ್ತಿಲ್ಲ.

| ಸಂತೋಷ್,  ಮೆಕಾನಿಕ್, ಚಿಕ್ಕಬಳ್ಳಾಪುರ

ಬೆಟ್ಟಿಂಗ್ ದಂಧೆಯ ಬಗ್ಗೆ ಎಚ್ಚರ ವಹಿಸಲು ಈಗಾಗಲೇ ಸೂಚಿಸಲಾಗಿದೆ. ಯಾರಾದರೂ ಮಾಹಿತಿ ನೀಡಿದರೂ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಸಂತೋಷ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *