More

  ಐದು ಲಕ್ಷಕ್ಕೂ ಅಧಿಕ ಭಕ್ತರಿಂದ ಶಿರಸಿ ಶ್ರೀ ಮಾರಿಕಾಂಬೆ ದೇವಿ ದರ್ಶನ

  ಶಿರಸಿ: ರಾಜ್ಯದ ಪ್ರಸಿದ್ಧ ಮಾರಿಕಾಂಬಾ ಜಾತ್ರೆಗೆ ಭಾನುವಾರ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ.

  ಶನಿವಾರ ಸಂಜೆಯಿಂದ ಭಕ್ತರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಭಾನುವಾರ ರಾತ್ರಿಯ ವೇಳೆಗೆ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇದರಿಂದ ಭಾರಿ ನೂಕುನುಗ್ಗಲು ಉಂಟಾಗಿ ವಾಹನ ದಟ್ಟಣೆ ಸಮಸ್ಯೆ ಉಲ್ಬಣಿಸಿತ್ತು.

  ರಜೆಯಿರುವ ಕಾರಣ ದೂರದ ಊರುಗಳಿಂದ ಪ್ರವಾಸಿಗರು, ಭಕ್ತರು, ನೌಕರ ವರ್ಗದವರು ಆಗಮಿಸಿದ್ದ ಪರಿಣಾಮ ಎಲ್ಲಿ ನೋಡಿದರಲ್ಲಿ ಜನವೋ ಜನ ಎಂಬಂತಾಗಿತ್ತು. ಜಾತ್ರಾ ಪೇಟೆ ಅಕ್ಷರಶಃ ಜನಸಾಗರವಾಗಿ ಗಿಜಿಗುಡುತಿತ್ತು. ಭಾನುವಾರ ಬೆಳಗ್ಗಿನ ಜಾವ 3 ಗಂಟೆಯವರೆಗೆ ಜಾತ್ರಾ ಪೇಟೆಯಲ್ಲಿ ಜನಸಂದಣಿ ತುಂಬಿ ತುಳುಕುತ್ತಿತ್ತು. ಯಥಾ ಪ್ರಕಾರ ಮುಂಜಾನೆಯಿಂದಲೇ ಜನಸಾಗರ ಜಾತ್ರೆಗೆ ಹರಿದು ಬಂದಿದ್ದು, ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಉಂಟಾಗಿ ಜನ ತೀವ್ರ ಪರದಾಡಿದರು. ಶನಿವಾರ ಸಂಜೆಯಿಂದ ಆರಂಭವಾದ ಟ್ರಾಫಿಕ್ ಜಾಮ್ ಭಾನುವಾರವಿಡಿ ಮುಂದುವರೆದಿತ್ತು. ಶಿರಸಿ-ಸಿದ್ದಾಪುರ ರಸ್ತೆ, ಕುಮಟಾ ರಸ್ತೆ, ಯಲ್ಲಾಪುರ ರಸ್ತೆ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ಅತಿಯಾದ ಟ್ರಾಫಿಕ್​ನಿಂದಾಗಿ ವಾಹನ ಸವಾರರು ಸಾಲುಗಟ್ಟಿ ಗಂಟೆಗಟ್ಟಲೆ ರಸ್ತೆಯ ಮೇಲೆ ಕಾದು ಸುಸ್ತಾದರು. ನಗರದ ನಿಲೇಕಣಿ, ಐದು ರಸ್ತೆ ಸರ್ಕಲ್, ಕೋಟೆಕೆರೆ ರಸ್ತೆ, ಬನವಾಸಿ ರೋಡ್, ಅಶ್ವಿನಿವೃತ್ತ ಸೇರದಂತೆ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಪೊಲೀಸರು ಸುಗಮ ಸಂಚಾರ ಮಾಡಲು ಹರಸಾಹಸ ಪಟ್ಟರು. ಕೆಲವೇ ಕೆಲವು ಪ್ರದೇಶಗಳಲ್ಲಿ ಪೊಲೀಸರಿದ್ದುದು ಬಿಟ್ಟರೆ ಉಳಿದಂತೆ ಎಲ್ಲೂ ಪೊಲೀಸರಿಲ್ಲ ಕಾರಣ ಜನ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪರದಾಡಿದರು.

  ಖಾಲಿಯಾದ ಲಡ್ಡು: ಶನಿವಾರ ಲಕ್ಷಾಧಿಕ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆಯಾಗಿದ್ದು, ಭಾನುವಾರ ಲಡ್ಡು ಪ್ರಸಾದ ಖಾಲಿಯಾದ ಪರಿಣಾಮ ಭಕ್ತರು 3 ಗಂಟೆಗೂ ಹೆಚ್ಚು ಅವಧಿ ಪ್ರಸಾದಕ್ಕಾಗಿ ಕಾದುಕುಳಿತ ಘಟನೆ ನಡೆಯಿತು. ತಕ್ಷಣ ಎಚ್ಚೆತ್ತ ಆಡಳಿತ ಮಂಡಳಿ ಲಡ್ಡು ಪ್ರಸಾದ ವ್ಯವಸ್ಥೆ ಮಾಡಿಸಿ ಭಕ್ತರನ್ನು ಸಂತುಷ್ಟಗೊಳಿಸಿತು. ಸಂಜೆಯ ವೇಳೆಗೆ 1 ಲಕ್ಷಕ್ಕೂ ಹೆಚ್ಚಿನ ಲಡ್ಡುಗಳು ಮಾರಾಟವಾಗಿದ್ದು, ಸೋಮವಾರ ಕೂಡ ಸಾಕಷ್ಟು ಲಡ್ಡು ಪ್ರಸಾದ ವಿತರಿಸಲು ಸಿದ್ಧತೆ ನಡೆದಿದೆ.

  ಲಾಭದತ್ತ ಅಂಗಡಿಗಳು: ಕಳೆದ ಮೂರು ದಿನಗಳಿಂದ ನಷ್ಟದಲ್ಲಿದ್ದ ವಿವಿಧ ಅಂಗಡಿಗಳಿಗೆ ಭಾನುವಾರ ಸಾಕಷ್ಟು ಸಂಖ್ಯೆಯ ಗ್ರಾಹಕರು ಆಗಮಿಸಿದ್ದರು. ಮಹಿಳೆಯರು ಬಳೆ, ಸರ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಿ ಸಂಭ್ರಮಿಸಿದರು. ಮೂರು ದಿನಗಳಿಂದ ಹೆಚ್ಚಿನ ಗ್ರಾಹಕರನ್ನು ಕಾಣದೆ ಕಂಗಾಲಾಗಿದ್ದ ಅಂಗಡಿಕಾರರು ರಜೆಯ ಮೂಡಿನಲ್ಲಿ ಜಾತ್ರೆಗೆ ಆಗಮಿಸಿದ್ದ ಗ್ರಾಹಕರನ್ನು ಕಂಡು ಖುಷಿಪಟ್ಟರು. ಬಹುತೇಕ ಮನೋರಂಜನಾ ಆಟಗಳಿಗೆ ನಿರಂತರವಾಗಿ ಜನರು ಆಗಮಿಸಿದ ಪರಿಣಾಮ ಬರಿದಾಗಿದ್ದ ಜೇಬನ್ನು ವ್ಯಾಪಾರಿಗಳು ತುಂಬಿಸಿಕೊಂಡರು.

  ಸಂಘಟನೆಗಳಿಂದ ಪಾನಕ, ಮಜ್ಜಿಗೆ: ಜಾತ್ರೆಗೆ ಬರುವ ಭಕ್ತರ ಬಾಯಾರಿಕೆ ನೀಗಲು ಕಳೆದ 5 ದಿನಗಳಿಂದ ವಿವಿಧ ಸಂಘಟನೆಗಳು ಪಾನಕ, ಮಜ್ಜಿಗೆ ವಿತರಿಸುತ್ತಿವೆ. ಹಿಂದೂ ಜಾಗರಣ ವೇದಿಕೆ, ಬಾರ್ ಬೆಂಡಿಂಗ್ ಅಸೋಸಿಯೇಶನ್, ಅಲ್ಟ್ರಾಟೆಕ್ ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಬೆಳಗಿನಿಂದ ಸಂಜೆಯವರೆಗೂ ಪಾನೀಯ ವಿತರಿಸಿ ಜನ ಪ್ರಶಂಸೆಗೆ ಪಾತ್ರವಾಗಿವೆ. ಜತೆ, ವಿವಿಧೆಡೆಗಳಲ್ಲಿ ಅನ್ನ ಪ್ರಸಾದ ವಿತರಣೆಯೂ ನಡೆದಿದ್ದು, ನಿತ್ಯ 75 ಸಾವಿರಕ್ಕೂ ಹೆಚ್ಚಿನ ಭಕ್ತರು ಉಚಿತ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ.

  ಜಾತ್ರೆ ವೇಳೆ ಆಹಾರ ಸುರಕ್ಷತೆಯ ಹಿನ್ನೆಲೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಅಂಗಡಿಕಾರರಿಗೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ನೇತೃತ್ವದಲ್ಲಿ ಎಚ್ಚರಿಕೆ ನೀಡುವ ಕಾರ್ಯ ನಡೆದಿದೆ. ಸ್ಥಳಕ್ಕಾಗಮಿಸಿ ಆಹಾರದ ಗುಣಮಟ್ಟ, ಶುದ್ಧತೆ ಪರೀಕ್ಷಿಸುವ ಕಾರ್ಯವಾಗುತ್ತಿದೆ.

  ಗಣ್ಯರ ಭೇಟಿ: ಜಾತ್ರಾ ಗದ್ದುಗೆಯಲ್ಲಿ ಕುಳಿತ ಮಾರಿಯಮ್ಮನ ದರ್ಶನಕ್ಕೆ ಶಾಸಕರಾದ ಆರ್.ವಿ.ದೇಶಪಾಂಡೆ, ದಿನಕರ ಶೆಟ್ಟಿ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿದಂತೆ ಇತರರು ಆಗಮಿಸಿದ್ದರು. ಜತೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಮನೋಹರ ಸೇರಿ ಜಿಲ್ಲೆಯ 40ಕ್ಕೂ ಹೆಚ್ಚಿನ ನ್ಯಾಯಾಧೀಶರು ದೇವಿ ದರ್ಶನ ಪಡೆದು ಧನ್ಯರಾದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts