ಹಿರೀಸಾವೆ: ಇನ್ನೂ ಮೂರೂವರೇ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಹೋಬಳಿಯ ಬಾಳಗಂಚಿ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಕೆರೆಗೆ ಗುರುವಾರ ಬಾಗಿನ ಸಮರ್ಪಿಸಿ, ಗಂಗೆಪೂಜೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಘೋಷಿಸಿ ನೀಡುತ್ತಿರುವ ಐದು ಗ್ಯಾರಂಟಿಗಳ ಬಗ್ಗೆ ಯಾವುದೇ ಆತಂಕ ಬೇಡ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನತೆಯ ಮೇಲೆ ಕಾಳಜಿ ಇದೆ. ಬಡವರ ಬದುಕನ್ನು ಮೇಲೆತ್ತುವ ಆಸಕ್ತಿ ಇದೆ. ಹಸಿದವರಿಗೆ ಮೂರು ಹೊತ್ತು ಅನ್ನ ನೀಡಲೇಬೇಕು ಎಂಬ ಹಂಬಲವಿದೆ ಎಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆದುಕೊಳ್ಳುತ್ತಿದ್ದು, ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಕಟ್ಟಕಡೆಯ ಫಲಾನುಭವಿಗೂ ತಲುಪುತ್ತಿವೆ ಎಂದರು.
ತಾಲೂಕಿನ ಏತನೀರಾವರಿ ಯೋಜನೆ ಸಲುವಾಗಿ ಹಿರೀಸಾವೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದು, ಕಾಂಗ್ರೆಸ್ ಮುಖಂಡರು ಎಂಬುದು ಜನತೆಗೆ ಗೊತ್ತಿದೆ. ಅದರ ಫಲವಾಗಿ ಏತನೀರಾವರಿ ಯೋಜನೆಗಳು ಅನುಷ್ಠಾನಗೊಂಡು ಇಂದು ತಾಲೂಕಿನ ಸಾಕಷ್ಟು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಮದನೆ ಹಾಗೂ ಮತಿಘಟ್ಟ ಗ್ರಾಮದ ಕೆರೆಗಳಿಗೆ ಬಾಗಿನ ಅರ್ಪಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಮಂಜೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್, ಚನ್ನರಾಯಪಟ್ಟಣ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಮಂಜುನಾಥ್, ಪ್ರಮುಖರಾದ ಉದಯಕುಮಾರ್, ಕಿರಣ್, ಹೊನ್ನಶೆಟ್ಟಿಹಳ್ಳಿ ಮಂಜೇಗೌಡ, ಬ್ಯಾಡರಹಳ್ಳಿ ಯೋಗೇಶ್, ಯುವರಾಜ್, ಮತಿಘಟ್ಟ ರಂಗಸ್ವಾಮಿ ಇತರರು ಇದ್ದರು.