Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಐತಿಹಾಸಿಕ ಟೆಸ್ಟ್​ಗೆ ಚಿನ್ನಸ್ವಾಮಿ ಸಜ್ಜು

Wednesday, 13.06.2018, 3:04 AM       No Comments

ಬೆಂಗಳೂರು: ಆತಿಥೇಯ ಭಾರತ ಮತ್ತು ಪ್ರವಾಸಿ ಅಫ್ಘಾನಿಸ್ತಾನ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಗುರುವಾರ ಆರಂಭವಾಗಲಿರುವ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸ್ಪರ್ಧಾತ್ಮಕ ಪಿಚ್ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಕಳೆದೊಂದು ವಾರದಿಂದ ನಗರದಲ್ಲಿ ಬಿರುಸಾಗಿ ಸುರಿಯುತ್ತಿರುವ ಮಳೆ ಹಾಗೂ ಬಿಸಿಲಿಲ್ಲದ ಕಾರಣ ಪಿಚ್​ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಆದರೆ ಭಾನುವಾರ ಸಿಬ್ಬಂದಿ ಪಿಚ್​ಗೆ ಶಾಮಿಯಾನ ಮುಚ್ಚಿ ಸಜ್ಜುಗೊಳಿಸಿದ್ದಾರೆ. ಇದೊಂದು ಉತ್ತಮ ಪಿಚ್ ಆಗಿರಲಿದೆ. ನಾವು ಭಾರತ ಅಥವಾ ಅಫ್ಘಾನಿಸ್ತಾನ ತಂಡಕ್ಕೆ ಅನುಕೂಲಕರವಾಗಿ ಪಿಚ್ ಸಿದ್ಧಪಡಿಸಿಲ್ಲ. ಒಂದು ಸ್ಪರ್ಧಾತ್ಮಕ ಕ್ರಿಕೆಟ್ ಆಟಕ್ಕೆ ತಕ್ಕಂತೆ ಸಜ್ಜಾಗಿದೆ. ಇದು ಪೂರ್ತಿ 5 ದಿನಗಳ ಪಂದ್ಯದ ಹೋರಾಟದ ಪಿಚ್ ಆಗಿರಲಿದೆ. ಸ್ವಲ್ಪ ಹುಲ್ಲು ಇದೆ. ಸಿದ್ಧತೆಗೆ ಮಳೆ ಅಡ್ಡಿಪಡಿಸಿದರೂ ಯಾವುದೇ ತೊಡಕಿಲ್ಲದೆ ಸಿದ್ಧಪಡಿಸಿದ್ದೇವೆ ಎಂದು ಕೆಎಸ್​ಸಿಎ ಪಿಚ್ ಕ್ಯುರೇಟರ್ ಕೆ. ಶ್ರೀರಾಮ್ ತಿಳಿಸಿದ್ದಾರೆ.

ಭಾರತದ ಬಹುತೇಕ ಪಿಚ್​ಗಳು ಸ್ವಾಭಾವಿಕವಾಗಿ ಸ್ಪಿನ್ ಸ್ನೇಹಿಯಾಗಿರುವ ಕಾರಣ ಅಫ್ಘಾನಿಸ್ತಾನ ತಂಡ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಸೇರಿದಂತೆ ನಾಲ್ವರು ಸ್ಪಿನ್ನರ್​ಗಳೊಂದಿಗೆ ಅಜಿಂಕ್ಯ ರಹಾನೆ ಸಾರಥ್ಯದ ಭಾರತ ತಂಡಕ್ಕೆ ಸವಾಲು ನೀಡಲು ಸಜ್ಜಾಗಿದೆ. ಚಿನ್ನಸ್ವಾಮಿಯಲ್ಲಿ ಇದುವರೆಗೆ ನಡೆದಿರುವ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಗಮನಿಸಿದರೆ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್​ಗೆ ನೆರವೀಯುತ್ತದೆ. ಕಳೆದ ವರ್ಷ ಇಲ್ಲಿ ನಡೆದ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್​ಗಳೇ ಮೇಲುಗೈ ಸಾಧಿಸಿದ್ದರಲ್ಲದೆ, ವಿರಾಟ್ ಕೊಹ್ಲಿ ಟೀಮ್ ನಾಲ್ಕೇ ದಿನಗಳಲ್ಲಿ 75 ರನ್​ಗಳಿಂದ ಜಯಿಸಿತ್ತು. ಆ ಪಂದ್ಯದಲ್ಲಿ ಸ್ಪಿನ್ನರ್​ಗಳಾದ ಆರ್ ಅಶ್ವಿನ್ 10, ರವೀಂದ್ರ ಜಡೇಜಾ 7 ಮತ್ತು ಆಸೀಸ್ ಸ್ಪಿನ್ನರ್ ನಥಾನ್ ಲ್ಯಾನ್ ಒಂದೇ ಇನಿಂಗ್ಸ್​ನಲ್ಲಿ 8 ವಿಕೆಟ್ ಕಬಳಿಸಿದ್ದರು.

ಹೆಚ್ಚಿನ ಅನುಭವ ನಮ್ಮ ಬಲ

ಅಫ್ಘಾನಿಸ್ತಾನ ತಂಡವನ್ನು ದಿಟ್ಟವಾಗಿ ಎದುರಿಸಲು ಭಾರತಕ್ಕೆ ಅನುಭವ ನೆರವಾಗಲಿದೆ ಎಂದು ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ‘ಅಂತಿಮವಾಗಿ ಅನುಭವಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ. ನೀವು ಕಳೆದ ಐಪಿಎಲ್​ನಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಉದಾಹರಣೆಯಾಗಿ ನೋಡಬಹುದು. ನಮ್ಮಲ್ಲಿ ಟೆಸ್ಟ್ ಪಂದ್ಯ ಮಾತ್ರವಲ್ಲ, ಸಾಕಷ್ಟು ದೇಶೀಯ ಕ್ರಿಕೆಟ್ ಹಾಗೂ ಚತುರ್ದಿನ ಪಂದ್ಯಗಳನ್ನಾಡಿದವರು ಇದ್ದಾರೆ’ ಎಂದು ದಿನೇಶ್ ಕಾರ್ತಿಕ್ ಹೇಳಿದರು. ತಂಡದಲ್ಲಿರುವ ಅನುಭವಿ ಸ್ಪಿನ್ನರ್​ಗಳಾದ ಆರ್. ಅಶ್ವಿನ್(311 ವಿಕೆಟ್) ಮತ್ತು ರವೀಂದ್ರ ಜಡೇಜಾ(165 ವಿಕೆಟ್) ಟೆಸ್ಟ್​ನಲ್ಲಿ ಒಟ್ಟಾರೆ 476 ವಿಕೆಟ್ ಕಬಳಿಸಿರುವ ಅನುಭವಿಗಳು ಎಂದು ದಿನೇಶ್ ಕಾರ್ತಿಕ್ ಹೇಳಿದರು. ಅಫ್ಘಾನಿಸ್ತಾನದ ಕ್ರಿಕೆಟ್ ಬೆಳವಣಿಗೆಯನ್ನು ಪ್ರಶಂಸಿದ ದಿನೇಶ್, ಆಫ್ಘನ್ ಬಿಳಿ ಚೆಂಡಿನಲ್ಲಿ ಉತ್ತಮ ಸುಧಾರಣೆ ಕಂಡಿದ್ದು, ಟೆಸ್ಟ್​ನಲ್ಲೂ ಇಂಥದ್ದೇ ನಿರ್ವಹಣೆ ನಿರೀಕ್ಷಿಸಬಹುದು. ಅವರ ಕ್ರಿಕೆಟ್ ಪ್ರಯಾಣ ಅದ್ಭುತವಾಗಿದೆ. ಐಸಿಸಿಯಿಂದ ಟೆಸ್ಟ್ ರಾಷ್ಟ್ರ ಎನಿಸಿಕೊಳ್ಳಲು ಆಫ್ಘನ್ ಪಟ್ಟ ಪ್ರಯತ್ನ ಗಮನಾರ್ಹ. ಇನ್ನಿತರ ರಾಷ್ಟ್ರಗಳು ಆಫ್ಘನ್ ತಂಡವನ್ನು ನೋಡಿ ಕಲಿತುಕೊಳ್ಳಬಹುದು ಎಂದು ಹೇಳಿದರು.

ಭಾರತದೆದುರು ಟೆಸ್ಟ್ ಎಂಟ್ರಿ, ಆಫ್ಘನ್ 4ನೇ ತಂಡ

ಕ್ರಿಕೆಟ್ ಜನಕ ಇಂಗ್ಲೆಂಡ್ ವಿರುದ್ಧ 1932ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಕಾಲಿಟ್ಟ ಭಾರತ ಈಗ 521 ಟೆಸ್ಟ್ ಆಡಿರುವ ಅನುಭವಿ. ಇದೀಗ ಅಫ್ಘಾನಿಸ್ತಾನ 12ನೇ ತಂಡವಾಗಿ ಟೆಸ್ಟ್ ಪದಾರ್ಪಣೆ ಮಾಡುತ್ತಿದೆ. ಭಾರತ ತಂಡ ಟೆಸ್ಟ್ ಕ್ರಿಕೆಟ್​ಗೆ ಪರಿಚಯಿಸುತ್ತಿರುವ 4ನೇ ತಂಡ ಆಫ್ಘನ್. ಈ ಹಿಂದೆ 3 ತಂಡಗಳು ಭಾರತ ವಿರುದ್ಧವೇ ಟೆಸ್ಟ್ ಪದಾರ್ಪಣೆ ಮಾಡಿದ್ದವು. ಅದರ ಸಂಕ್ಷಿಪ್ತ ವಿವರ ಇಲ್ಲಿದೆ…

1952: ಪಾಕಿಸ್ತಾನ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ 1952ರ ಅಕ್ಟೋಬರ್ 16ರಿಂದ 19ರವರೆಗೆ ಪಾಕಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಭಾರತ ವಿರುದ್ಧ ಆಡಿತ್ತು. ಭಾರತದ ಸ್ಪಿನ್ ಮೋಡಿಗೆ ನಲುಗಿದ ಪಾಕ್ ಉಭಯ ಇನಿಂಗ್ಸ್​ಗಳಲ್ಲಿ 150 ಮತ್ತು 152 ರನ್​ಗೆ ಸರ್ವಪತನ ಕಂಡಿತು. ಭಾರತ 372 ರನ್ ಪೇರಿಸಿತ್ತು. ಇನಿಂಗ್ಸ್ ಮತ್ತು 70 ರನ್​ಗಳಿಂದ ಭಾರತ ಜಯಿಸಿತು. 2ನೇ ಟೆಸ್ಟ್ ನಲ್ಲಿ ಪಾಕ್ ತಿರುಗೇಟು ನೀಡಿದ್ದರೂ, ಭಾರತ 2-1ರಿಂದ ಸರಣಿ ಜಯಿಸಿತು.

1992: ಜಿಂಬಾಬ್ವೆ

ಹರಾರೆಯಲ್ಲಿ 1992ರ ಅಕ್ಟೋಬರ್ 18ರಿಂದ 22ರವರೆಗೆ ಜಿಂಬಾಬ್ವೆ ತಂಡ ಭಾರತದೆದುರು ಟೆಸ್ಟ್ ಪದಾರ್ಪಣೆ ಮಾಡಿತ್ತು. ಜಿಂಬಾಬ್ವೆ ಮೊದಲ ಇನಿಂಗ್ಸ್ ನಲ್ಲಿ 456 ರನ್ ಪೇರಿಸಿತು. ಇದು ಚೊಚ್ಚಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತವೆನಿಸಿದೆ. ಸಂಜಯ್ ಮಂಜ್ರೇಕರ್ ಶತಕದ ನಡುವೆ ಭಾರತ 307 ರನ್​ಗೆ ಆಲೌಟಾಗಿ ಇನಿಂಗ್ಸ್ ಹಿನ್ನಡೆ ಕಂಡರೆ, ಜಿಂಬಾಬ್ವೆ 2ನೇ ಸರದಿಯಲ್ಲಿ 4 ವಿಕೆಟ್​ಗೆ 146 ರನ್ ಪೇರಿಸಿ ಡ್ರಾ ಸಾಧಿಸಿತು.

2000: ಬಾಂಗ್ಲಾದೇಶ

ಢಾಕಾದಲ್ಲಿ 2000ದ ನವೆಂಬರ್ 10ರಿಂದ 13ರವರೆಗೆ ನಡೆದ ಟೆಸ್ಟ್ ನಲ್ಲಿ ಬಾಂಗ್ಲಾದೇಶ 10ನೇ ತಂಡವಾಗಿ ಟೆಸ್ಟ್ ಪದಾರ್ಪಣೆ ಮಾಡಿತ್ತು. ಬಾಂಗ್ಲಾ ಮೊದಲ ಇನಿಂಗ್ಸ್​ನಲ್ಲಿ ಭರ್ತಿ 400 ರನ್ ಪೇರಿಸಿತು. ಪ್ರತಿಯಾಗಿ ಭಾರತ 429 ರನ್ ಗಳಿಸಿತು. ಬಾಂಗ್ಲಾ 2ನೇ ಇನಿಂಗ್ಸ್ ನಲ್ಲಿ ಕೇವಲ 91 ರನ್​ಗೆ ಕುಸಿದರೆ, ಭಾರತ 1 ವಿಕೆಟ್​ಗೆ 64 ರನ್ ಗಳಿಸಿ ನಾಲ್ಕೇ ದಿನದಲ್ಲಿ ಪಂದ್ಯ ಮುಗಿಸಿತು. ಕನ್ನಡಿಗ ಸುನೀಲ್ ಜೋಶಿ 8 ವಿಕೆಟ್ ಕಬಳಿಸಿದ್ದಲ್ಲದೆ, 92 ರನ್ ಸಿಡಿಸಿ ಮಿಂಚಿದರು.

Leave a Reply

Your email address will not be published. Required fields are marked *

Back To Top