ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಸಿಎಂ

ಸೊರಬ: ಐಟಿ ದಾಳಿಗೆ ಹೆದರಿ ಹಣ ಸಾಗಿಸಿದ ಕುಮಾರಸ್ವಾಮಿ ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗ ಬಿಜೆಪಿ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ 54 ಲಕ್ಷ ಕೋಟಿ ರೂ. ಸಾಲ ತೀರಿಸಿ ಬೇರೆ ದೇಶಗಳಿಗೆ ಸಾಲ ಕೊಡುವ ಹಾಗೆ ದೇಶವನ್ನು ಕಟ್ಟಿದ್ದಾರೆ. ಮೋದಿ ಎಲ್ಲ ರೈತರಿಗೂ 6 ಸಾವಿರ ರೂ., ಕೃಷಿ ಅಭಿವೃದ್ಧಿಗೆ ನದಿ ಜೋಡಣೆ, ಶುದ್ಧ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ 6 ಸಾವಿರ ಕಿಮೀ ಹೆದ್ದಾರಿ ನಿರ್ವಿುಸುವ ಚಿಂತನೆ ಹೊಂದಿದ್ದಾರೆ ಎಂದರು.

ಮಹಿಳೆಯರು ಕೈಗಾರಿಕೆ ತೆರೆಯಲು 50 ಲಕ್ಷ ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಕಾಂಗ್ರೆಸ್-ಜೆಡಿಎಸ್ ಮತದಾರರನ್ನು ಪರಿವರ್ತಿಸಿ ಬಿಜೆಪಿಯನ್ನು ಹೆಚ್ಚು ಅಂತರದಿಂದ ಗೆಲ್ಲಿಸಬೇಕು. ಮೋದಿ ದೇಶದ ಆರ್ಥಿಕ ಬಲವರ್ಧನೆಯ ಕನಸು ಕಂಡಿದ್ದು ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದರು.

ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಸೊರಬ ತಾಲೂಕು ಬಿಜೆಪಿಯ ಭದ್ರಕೋಟೆ. ಈ ಬಾರಿಯೂ ತಾಲೂಕಿನ ಮತದಾರರು ಕೈಹಿಡಿಯಲಿದ್ದಾರೆ. ಉಜ್ವಲ, ಕೃಷಿ ಸಮ್ಮಾನ್ ಇತರೆ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಮೋದಿ ಅವರು ಒತ್ತು ನೀಡಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲೆಗೆ ಹೊಸ ರೈಲು ಒದಗಿಸಲಾಗಿದೆ. ಕೃಷಿಗೆ ಅನುಕೂಲವಾಗಲು ಇಂಟಿಗ್ರೇಟೆಡ್ ವಿವಿ ನಿರ್ವಣಕ್ಕೆ ಹಾಗೂ 456 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆಗೆ ಒತ್ತು ನೀಡಲಾಗಿದೆ. ಗುಡುವಿ ಪಕ್ಷಿಧಾಮ ಅಭಿವೃದ್ಧಿ ಪಡಿಸಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಮೋದಿ ಪ್ರಧಾನಿ ಮಾಡಲು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಶಾಸಕ ಎಚ್.ಹಾಲಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಈಡಿಗ ಸಮುದಾಯ ಭವನಕ್ಕೆ ಯಡಿಯೂರಪ್ಪ ಅವರು 3 ಕೋಟಿ ರೂ. ನೀಡಿ ಸಮುದಾಯಕ್ಕೆ ಒತ್ತು ನೀಡಿದ್ದಾರೆ. ಬಂಗಾರಪ್ಪ ಅವರ ಸಮಾಧಿ ಹಾಗೂ ಪುತ್ಥಳಿ ನಿರ್ವಿುಸುವುದವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೆ? ಈಡಿಗ ಸಮಾಜಕ್ಕೆ ಬಿಜೆಪಿ ಕೊಡುಗೆ ಅಪಾರ ಎಂದರು.

ನಟಿ ಶ್ರುತಿ ಮಾತನಾಡಿ, ಮೋದಿ ಯೋಜನೆಗಳು ರಾಷ್ಟ್ರ ಮಟ್ಟದಿಂದ ಗ್ರಾಮೀಣ ಮಟ್ಟದವರೆಗೆ ತಲುಪಿವೆ. ಜಾತಿ, ಧರ್ಮ ಲೆಕ್ಕಿಸದೆ ಶ್ರೀಸಾಮಾನ್ಯನವರೆಗೂ ಮೋದಿ ಕೊಡುಗೆಗಳನ್ನು ನೀಡಿದ್ದಾರೆ. ಭ್ರಷ್ಟಾಚಾರ ನಿಮೂಲನೆ ಹಾಗೂ ದೇಶ ರಕ್ಷಣೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹಾಗಾಗಿ ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ರುದ್ರೇಗೌಡ, ಎಸ್.ದತ್ತಾತ್ರಿ, ವಾಮನಾಚಾರ್, ಎಸ್.ಎಲ್.ಗಂಗಾಧರಪ್ಪ, ಪಾಣಿ ರಾಜಪ್ಪ, ಶ್ರೀಪಾದ ಹೆಗಡೆ ನಿಸರಾಣಿ, ಪುರುಷೋತ್ತಮ, ಎಂ.ಡಿ.ಉಮೇಶ್, ನಾಗರಾಜ್ ಚಿಕ್ಕಸವಿ, ನಿರಂಜನ ಕುಪ್ಪಗಡ್ಡೆ, ಟಿ.ಡಿ.ಮೇಘರಾಜ್, ಲಕ್ಷ್ಮಣಪ್ಪ ಇತರರಿದ್ದರು.

Leave a Reply

Your email address will not be published. Required fields are marked *