ಧಾರವಾಡ: ಪತ್ತಿನ ಸಹಕಾರ ಸಂಘಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಆಗುತ್ತಿರುವ ಕಿರುಕುಳ ತಡೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಹಕಾರ ಕ್ಷೇತ್ರಕ್ಕೆ 115 ವರ್ಷಗಳ ಇತಿಹಾಸವಿದೆ. ಸಂಘಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಆರ್ಥಿಕ ನೆರವು ಒದಗಿಸುತ್ತಿವೆ. ಆದರೆ, ಸಹಕಾರ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಕಾಯ್ದೆಗಳು ಮಾರಕವಾಗಿ ಪರಿಣಮಿಸಿವೆ. ಇದರಿಂದ ಸಹಕಾರ ಸಂಘಗಳು ಕಾರ್ಯನಿರ್ವಹಿಸಲು ಅಡಚಣೆಯಾಗುತ್ತಿದೆ. ನೋಟು ರದ್ದತಿ ಸಂದರ್ಭದಲ್ಲಿ ಸಂಗ್ರಹಿಸಿದ ಹಣಕ್ಕೆ ಅಧಿಕ ದಂಡ ಹಾಗೂ ಸಂಘಗಳ ಆದಾಯದ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನಗರದ ಕಡಪಾ ಮೈದಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಮತ್ತು ಧಾರವಾಡ ಜಿಲ್ಲಾ ಪತ್ತಿನ ಸಹಕಾರ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಉಮೇಶ ಬಾಳಿ, ಗುರುರಾಜ ಹುಣಸಿಮರದ, ಸಹಕಾರಿಗಳು, ಸಹಕಾರ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.