ಐಟಿ ಉದ್ಯಮವೊಂದನ್ನೇ ನೆಚ್ಚುವ ಪರಿಪಾಠ ಬೇಡ

| ಜೆ ಕೃಷ್ಣಕುಮಾರ್​

ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬರುತ್ತಿದ್ದಾರಾದರೂ, ಉದ್ಯಮ ಕ್ಷೇತ್ರದ ಸವಾಲುಗಳನ್ನು ಎದುರಿಸಬಲ್ಲ ಸಾಮರ್ಥ್ಯವಾಗಲೀ, ವಿಷಯಜ್ಞಾನವಾಗಲೀ ಬಹುತೇಕರಲ್ಲಿ ಇರುವುದಿಲ್ಲ. ಕಾಲೇಜುಗಳಲ್ಲಿನ ಪ್ರವೇಶಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸುವುದರ ಜತೆಗೆ, ಉದ್ಯಮಶೀಲತೆ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು.

 

ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಬಗೆಗಿನ ನಕಾರಾತ್ಮಕ ಸುದ್ದಿಯ ಹರಿವು ಅಂತ್ಯಗೊಳ್ಳುತ್ತಿಲ್ಲ. ಕೆಲವೇ ದಿನಗಳ ಹಿಂದೆ, ಐಟಿ ಉದ್ಯೋಗಿಯೊಬ್ಬ ಕೆಲಸ ಕಳೆದುಕೊಳ್ಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ದುಃಖಕರ ಸುದ್ದಿಯೊಂದು ವರದಿಯಾಯಿತು. ಇತ್ತೀಚೆಗೆ ಟೆಕಿಯೊಬ್ಬನನ್ನು ಕೆಲಸದಿಂದ ವಜಾಮಾಡಿದ್ದರ ಕುರಿತಾದ ಆಡಿಯೋ ತುಣುಕೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತೀಯ ಐಟಿ ಉದ್ಯಮವು ತನ್ನ ಉದ್ಯೋಗಿಗಳ ಪಾಲಿಗೆ ಅತ್ಯಂತ ಕಠೋರವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಈ ವರ್ಷ ಏನಿಲ್ಲವೆಂದರೂ 1 ಲಕ್ಷದಷ್ಟು ಉದ್ಯೋಗಿಗಳನ್ನು ಅದು ವಜಾಗೊಳಿಸಬಹುದೆಂಬ ಸಂಗತಿ ವರದಿಯಾಗಿರುವುದೇ ಈ ಅಭಿಪ್ರಾಯಕ್ಕೆ ಕಾರಣ. ಜತೆಗೆ, ಉದ್ಯಮವು ‘ಉಬರೈಸೇಷನ್’ (ಅಂದರೆ, ಶಾಶ್ವತ ಉದ್ಯೋಗಿಗಳ ಬದಲಾಗಿ ಫ್ರೀಲಾನ್ಸ್ ಅಥವಾ ಸ್ವತಂತ್ರ ಉದ್ಯೋಗಿಗಳನ್ನು ಬಳಸಿಕೊಳ್ಳುವಿಕೆ) ಪರಿಪಾಠಕ್ಕೆ ಮೊರೆಹೋಗಬಹುದೆಂಬ ಗ್ರಹಿಕೆಯೂ ಟೆಕಿಗಳಲ್ಲಿ ಆತಂಕ ಉಂಟುಮಾಡಿದೆ ಎನ್ನಬೇಕು. ಆದರೆ, ಇಂಥದೊಂದು ಪ್ರಕ್ಷುಬ್ಧ ಪರಿಸ್ಥಿತಿ ಹೊರತಾಗಿಯೂ, ಐಟಿ ಉದ್ಯೋಗಗಳು ಇನ್ನೂ ಹೆಚ್ಚು ಬೇಡಿಕೆಯಲ್ಲಿವೆ. 40 ಲಕ್ಷ ಜನರಿಗೆ ಅಥವಾ ಸಂಘಟಿತ ಕಾರ್ಯಪಡೆಯ ಶೇಕಡ 5-6 ಮಂದಿಗೆ ಪ್ರತ್ಯಕ್ಷ ಉದ್ಯೋಗಾವಕಾಶ ಒದಗಿಸಬಲ್ಲ ದೇಶದ ಐಟಿ ಉದ್ಯಮ, ಸುಮಾರು 1.4 ಕೋಟಿಯಷ್ಟು ಮಾಹಿತಿ-ತಂತ್ರಜ್ಞಾನ ಪರಿಣತರಿಗೆ ಪರೋಕ್ಷ ಉದ್ಯೋಗವನ್ನೂ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಎಂಬುದಿಲ್ಲಿ ಉಲ್ಲೇಖನೀಯ.

ಐಟಿ ಉದ್ಯಮಕ್ಕಿರುವ ಸವಾಲುಗಳು: ಇಷ್ಟಾಗಿಯೂ ಐಟಿ ಉದ್ಯೋಗಿಗಳ ‘ವಜಾಪರ್ವ’ಕ್ಕೆ ಕಾರಣವೇನು ಎಂಬ ಪ್ರಶ್ನೆಯಿಲ್ಲಿ ಉದ್ಭವಿಸಬಹುದು. ಬೇರೆ ದೇಶಗಳಿಂದ ಸಿಗುತ್ತಿದ್ದ ಹೊರಗುತ್ತಿಗೆ ಕಾರ್ಯಗಳಲ್ಲಿ ಇಳಿಕೆಯಾಗಿರುವುದು ಒಂದು ಕಾರಣವಾದರೆ, ಉತ್ತಮ ಉತ್ಪಾದನಾ ಸಾಮರ್ಥ್ಯದ ಅವಶ್ಯಕತೆ ಮನಗಂಡು ಕಾರ್ಯಚಟುವಟಿಕೆ ನಿರ್ವಹಣೆಯನ್ನು ‘ಆಟೋಮೇಷನ್’ ಸ್ವರೂಪಕ್ಕೆ (ಅಂದರೆ, ಉದ್ಯೋಗಿಗಳ ಬದಲಿಗೆ ರೋಬೋಟ್​ಗಳನ್ನು ಬಳಸುವಿಕೆ) ಬದಲಾಯಿಸುವ ಚಿಂತನೆ ಐಟಿ ಉದ್ಯಮಿಗಳಲ್ಲಿ ಹರಳುಗಟ್ಟುತ್ತಿರುವುದು ಮತ್ತೊಂದು ಕಾರಣ ಎನ್ನಲಡ್ಡಿಯಿಲ್ಲ. ಇಂಥ ಬೆಳವಣಿಗೆಗಳು ಉದ್ಯೋಗಸ್ಥ ಐಟಿ ಪರಿಣತರನ್ನು ನಿರುದ್ಯೋಗಿಗಳಾಗಿಸುವುದರ ಜತೆಗೆ, ಕೆಲಸಕ್ಕಾಗಿ ಎದುರುನೋಡುತ್ತಿರುವ ಪ್ರತಿಭಾವಂತ ಟೆಕಿಗಳಲ್ಲಿ ಅನಿಶ್ಚಿತತೆ ಹುಟ್ಟುಹಾಕಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಜತೆಗೆ ಉದ್ಯಮವನ್ನು ಲಾಭದಾಯಕವಾಗಿ ನಡೆಸುವುದು ಐಟಿ ಕಂಪನಿಗಳ ಪಾಲಿನ ಅತಿದೊಡ್ಡ ಸವಾಲಾಗಿಬಿಟ್ಟಿದೆ.

ಕಳೆದ 2 ದಶಕಗಳಲ್ಲಿ ಐಟಿ ಉದ್ಯಮ ಎರಡು ಪ್ರಮುಖ ಕುಸಿತಗಳನ್ನು ಎದುರಿಸಬೇಕಾಗಿ ಬಂತು. ಅವೆಂದರೆ, 2000-01ರ ವರ್ಷಾವಧಿಯಲ್ಲಿ ಕಂಡುಬಂದ ‘ಡಾಟ್​ಕಾಂ ಬಬಲ್’ ಮತ್ತು 2008-09ರಲ್ಲಿನ ಜಾಗತಿಕ ಹಿಂಜರಿತ. 2017-18ರ ವರ್ಷಾವಧಿ ಇಂಥ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗುವುದೇ ಎಂಬುದು ಸದ್ಯಕ್ಕೆ ಮುನ್ನೆಲೆಗೆ ಬಂದಿರುವ ಆತಂಕ. ಈ ರೀತಿ, ಐಟಿ ಉದ್ಯಮ ಪ್ರತಿ 8 ವರ್ಷಕ್ಕೊಮ್ಮೆ ಕುಸಿತ ಕಂಡಿರುವುದು ಕಾಕತಾಳೀಯವೂ ಅಗಿರಬಹುದು. ಹಿಂದಿನ ಎರಡು ಕುಸಿತದ ಸಂದರ್ಭಗಳಲ್ಲಿ ಉದ್ಯಮ ಪ್ರತಿಕೂಲ ಪರಿಸ್ಥಿತಿಯನ್ನು ಜಯಿಸಿ ಉತ್ತಮವಾಗಿ ಬೆಳೆದದ್ದು ಸಾಮಾನ್ಯ ವಿಷಯವೇನಲ್ಲ. ಕೇಂದ್ರ ಮಾಹಿತಿ-ತಂತ್ರಜ್ಞಾನ ಸಚಿವರಾದ ರವಿಶಂಕರ್ ಪ್ರಸಾದ್ ಅವರು, ಐಟಿ ವಲಯದಲ್ಲಿ ಇಂಥ ಯಾವುದೇ ಕುಸಿತವಾಗುವ ಸಾಧ್ಯತೆ ತಳ್ಳಿಹಾಕಿರುವುದರ ಜತೆಗೆ, ಮುಂದಿನ 5 ವರ್ಷಗಳಲ್ಲಿ ಈ ವಲಯಕ್ಕೆ 30 ಲಕ್ಷ ಉದ್ಯೋಗಿಗಳ ಸೇರ್ಪಡೆಯಾಗಬಹುದು ಎಂಬ ಭರವಸೆಯನ್ನಿತ್ತಿದ್ದಾರೆ.

ಮರುಕೌಶಲ ಅತ್ಯಗತ್ಯ: ಮಾಹಿತಿ-ತಂತ್ರಜ್ಞಾನ ಉದ್ಯಮಕ್ಕೆ ಮರುಕೌಶಲ ಬಹಳ ಮುಖ್ಯ. ವೇಗವಾಗಿ ಬದಲಾಗುವ ತಂತ್ರಜ್ಞಾನ ಕಾರ್ಯಕ್ಷೇತ್ರದಲ್ಲಿ ಉದ್ಯೋಗಿಗಳು ಮರುಕೌಶಲ ಸಾಮರ್ಥ್ಯ ಹೊಂದಿರದಿದ್ದಲ್ಲಿ ಅಪ್ರಸ್ತುತರಾಗುತ್ತಾರೆ. ಅಲ್ಲದೆ, ಭಾರತದ ಐಟಿ ಉದ್ಯಮಕ್ಕೆ ಮರುಕೌಶಲ ಪರಿಕಲ್ಪನೆ ಹೊಸದೇನಲ್ಲ. 1998-99ರಲ್ಲಿ ಸಾವಿರಾರು ಜನ ್ಗಓ ವಿಷಯದಲ್ಲಿ ತರಬೇತಿ ಪಡೆದಿದ್ದರು. 2000-01ರ ನಂತರ, ಅದೇ ರೀತಿಯಲ್ಲಿ ಟೆಕಿಗಳು ಮರುಕೌಶಲಕ್ಕೆ ಒಡ್ಡಿಕೊಂಡು ಹೊಸ ತಂತ್ರಜ್ಞಾನಗಳನ್ನು ಪಳಗಿಸಿಕೊಂಡರು, ತಮ್ಮದಾಗಿಸಿಕೊಂಡರು. ಕಳೆದ ಕೆಲ ವರ್ಷಗಳಲ್ಲಿ ಆನ್​ಲೈನ್ ವಿಡಿಯೋ ಟ್ಯುಟೋರಿಯಲ್​ಗಳು, Mಣಣಇ (Mಚಠಠಜಿಡಛ್ಝಿಢ ಣಟಛ್ಞಿ ಣ್ಞ್ಝ್ಞ ಇಟ್ಠ್ಟಛಿ), ಮೊಬೈಲ್ ಅಪ್ಲಿಕೇಷನ್​ಗಳು ಮುಂತಾದ ಆನ್​ಲೈನ್ ಪ್ಲ್ಯಾಟ್​ಫಾರಂಗಳ ಹಾಗೂ ಬ್ರಾಡ್​ಬ್ಯಾಂಡ್ ಅಂತರ್ಜಾಲ ಸೌಲಭ್ಯದ ಸುಲಭ ಲಭ್ಯತೆಯಿಂದಾಗಿ ಆಸಕ್ತಿ ಇರುವ ಉದ್ಯೋಗಿಗಳು ಮರುಕೌಶಲದಲ್ಲಿ ತೊಡಗಿಸಿಕೊಂಡು ಶ್ರೇಷ್ಠ ಇಂಜಿನಿಯರ್​ಗಳಾಗಿರುವ ನಿದರ್ಶನಗಳಿವೆ.

ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮರುಕೌಶಲದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕಳೆದ 1-2 ವರ್ಷದಲ್ಲಿ ಕಂಡುಬಂದಿರುವ ಬೆಳವಣಿಗೆ. ಘಅಖಖಇಣM (ಐಟಿ ಉದ್ಯಮ ಮಂಡಳಿ)ನ ವರದಿಯೊಂದರ ಪ್ರಕಾರ, ಭಾರತದ ಐಟಿ ಕಾರ್ಯಪಡೆಯ ಶೇ. 40ರಷ್ಟು ಜನ ಮರುಕೌಶಲ ಹೊಂದಬೇಕಿರುವುದು ಅನಿವಾರ್ಯವಾಗಿದೆ. ವಿವಿಧ ತಂತ್ರಜ್ಞಾನ ವೈಶಿಷ್ಟ್ಯಗಳು ಅನ್ವಯವಾಗಬಲ್ಲ 55 ಹೊಸ ಕಾರ್ಯಕ್ಷೇತ್ರಗಳನ್ನು ಐಟಿ ಉದ್ಯಮ ಮಂಡಳಿಯ ವರದಿ ಗುರುತಿಸಿದೆ.

ಕಳೆದ 15 ವರ್ಷಗಳಲ್ಲಿ, ತಂತ್ರಾಂಶದ ಯಂತ್ರೀಕರಣ (ಆಟೋಮೇಷನ್)ವು, ವಿಶೇಷವಾಗಿ ಸಾಫ್ಟ್​ವೇರ್ ಪರೀಕ್ಷೆ (ಟೆಸ್ಟಿಂಗ್) ಕ್ಷೇತ್ರಗಳಲ್ಲಿ ದಕ್ಷತೆ ಹೆಚ್ಚಿಸುವಲ್ಲಿ ನೆರವಾಯಿತು. ತಂತ್ರಜ್ಞಾನ ಪರಿಣತರು ದೂರದ ಸ್ಥಳದಲ್ಲಿದ್ದುಕೊಂಡೇ ಕೆಲಸ ಮಾಡುವುದಕ್ಕೆ ‘ಸಹಯೋಗದ ಪ್ಲ್ಯಾಟ್​ಫಾರಂಗಳು’ ಅವಕಾಶ ಮಾಡಿಕೊಡುತ್ತವೆ. ಇಲ್ಲಿ ಪರಿಣತ ಟೆಕಿಗಳ ಲಭ್ಯತೆಯನ್ನು ಅತಿಕಡಿಮೆ ಸಮಯದಲ್ಲಿ (ಒಠಠಿಜ್ಞಿಠಿಜಿಞಛಿ) ಒದಗಿಸುವಲ್ಲಿ ‘ಉಬರೈಸೇಷನ್’ ಪ್ರಮುಖ ಪಾತ್ರ ವಹಿಸಬಹುದು; ಆದರೆ ಇಂಥ ವ್ಯವಸ್ಥೆಯ ಯಶಸ್ಸಿಗೆ ಸಂಸ್ಥೆ ಮತ್ತು ಟೆಕಿಗಳ ಪರಿಪಕ್ವತೆಯ ಅಗತ್ಯವಿದೆ.

ಇಂಜಿನಿಯರ್​ಗಳ ಗುಣಮಟ್ಟ: ಮರುಕೌಶಲ ಮತ್ತು ಉಬರೈಸೇಷನ್ ಮೂಲಕ ಐಟಿ ಉದ್ಯಮ ತನ್ನದೇ ಆದ ಮಾಗೋಪಾಯ ಕಂಡುಕೊಳ್ಳುತ್ತಿದ್ದರೂ, ನಮ್ಮ ಮುಂದೆ ಮತ್ತೊಂದು ಸವಾಲಿದೆ- ಅದು ಇಂಜಿನಿಯರಿಂಗ್ ಕಾಲೇಜುಗಳಿಂದ ಹೊಬರುತ್ತಿರುವ ಪ್ರತಿಭೆಗಳ ಗುಣಮಟ್ಟದ ಸಮಸ್ಯೆ. ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿವರ್ಷ ಏನಿಲ್ಲವೆಂದರೂ 8 ಲಕ್ಷ ವಿದ್ಯಾರ್ಥಿಗಳು ಹೊರಬರುತ್ತಾರೆ ಮತ್ತು ಇವರಲ್ಲಿ ಶೇ. 55ರಷ್ಟು ಮಂದಿ ಸಾಫ್ಟ್​ವೇರ್ ಉದ್ಯೋಗದಲ್ಲಿ ಆಸಕ್ತಿ ಹೊಂದಿರುತ್ತಾರೆ. ಆದರೆ ಇವರ ಪೈಕಿ ಶೇ. 3ರಷ್ಟು ಮಂದಿ ಮಾತ್ರವೇ ಈ ಉದ್ಯೋಗಕ್ಕೆ ಸಮರ್ಥರಾಗಿರುತ್ತಾರೆ ಎಂಬುದು ಕಹಿವಾಸ್ತವ. ಕಳೆದ 15-20 ವರ್ಷಗಳಲ್ಲಿ ಐಟಿ ಉದ್ಯಮವನ್ನಷ್ಟೇ ಅನುಸರಿಸಿ ಹತ್ತು ಹಲವು ಇಂಜಿಯರಿಂಗ್ ಕಾಲೇಜುಗಳು ನಿರಂಕುಶವಾಗಿ ಬೆಳೆದವು; ಆದರೆ ಇಂಥ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಇಂಜಿಯರಿಂಗ್ ಪದವೀಧರರ ಗುಣಮಟ್ಟದಲ್ಲೇನೂ ಅಗಾಧ ಸುಧಾರಣೆಯಾಗಿಲ್ಲ. ಆದ್ದರಿಂದ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಪ್ರವೇಶ ಪ್ರಕ್ರಿಯೆ ಮತ್ತಷ್ಟು ಬಿಗಿಗೊಳಿಸಬೇಕು. ಅಷ್ಟೇ ಅಲ್ಲ, ಇಂಥ ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯದ ನವೀಕರಣ ಹಾಗೂ ಸಮರ್ಥ ಬೋಧನಾ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸುವುದರ ವಿಷಯದಲ್ಲೂ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಐಟಿ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳು ಪರಸ್ಪರ ಕೈಜೋಡಿಸಿ ಕೆಲಸ ಮಾಡಬೇಕಿರುವುದು ಪ್ರಸ್ತುತ ಆಗಬೇಕಿರುವ ಮತ್ತೊಂದು ಮಹತ್ತರ ಕಾರ್ಯ. ವಿದ್ಯಾರ್ಥಿಗಳು ಉದ್ಯಮದಲ್ಲಿನ ಇತ್ತೀಚಿನ ಸುಧಾರಣೆಗಳ ಬಗ್ಗೆ ತಿಳಿದುಕೊಂಡು ಸಾಮರ್ಥ್ಯವರ್ಧನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಖಂಡಿತವಾಗಿಯೂ ನೆರವಾಗುತ್ತದೆ.

ಉದ್ಯಮಶೀಲತೆ: ಭಾರತವು ಐಟಿ ಉದ್ಯಮವೊಂದನ್ನೇ ನೆಚ್ಚುವ ಪರಿಪಾಠ ನಿಲ್ಲಬೇಕು. ಆದರೆ, ಹೀಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡುವಂಥ ಮತ್ತೊಂದು ಪರ್ಯಾಯ ಉದ್ಯಮ ನಮ್ಮ ದೇಶದಲ್ಲಿ ಬಹುತೇಕ ಇಲ್ಲದಿರುವುದೇ ನಮ್ಮೆದುರಿನ ಮತ್ತೊಂದು ಸವಾಲು. ಭಾರತದ ‘ಜನಸಂಖ್ಯಾ ಲಾಭಾಂಶ’ (ಡೆಮಾಗ್ರಫಿಕ್ ಡಿವಿಡೆಂಡ್) ಒಂದು ಹೆಮ್ಮೆಯ ವಿಷಯ ಎಂಬುದೇನೋ ಸರಿ; 2020ರ ವೇಳೆಗೆ ಸರಾಸರಿ 29ರ ವಯೋಮಾನದವರ ಕಾರ್ಯಪಡೆಯಿಂದ ಭಾರತ ಸಮೃದ್ಧವಾಗಲಿದೆ ಎಂಬುದೂ ನಿಜವೇ. ಆದರೆ, ಇದರ ಲಾಭ ಪಡೆದುಕೊಳ್ಳಲು ಭಾರತವು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮತ್ತು ಹತ್ತು ಹಲವು ಉದ್ಯಮಕ್ಷೇತ್ರಗಳಲ್ಲಿ ಉದ್ಯೋಗಸೃಷ್ಟಿಗೆ ಮುಂದಾಗದಿದ್ದಲ್ಲಿ, ಸದರಿ ಜನಸಂಖ್ಯಾ ಲಾಭಾಂಶವೇ ಜನಸಂಖ್ಯಾ ವಿಪತ್ತಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ.

ಆದ್ದರಿಂದ, ಕೈಗಾರಿಕೆ, ಉತ್ಪಾದನೆ, ಮೂಲಭೂತ ಸೌಕರ್ಯ ಅಥವಾ ಕೃಷಿಯಂಥ ಪರ್ಯಾಯ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಸೃಷ್ಟಿ ಇಂದಿನ ಅಗತ್ಯ. ಜತೆಗೆ, ಜನಸಂಖ್ಯಾ ಲಾಭಾಂಶದ ಪ್ರಯೋಜನ ಪರಿಪೂರ್ಣವಾಗಿ ಪಡೆದು ಕೊಳ್ಳುವಂತಾಗಲು ಉದ್ಯಮಶೀಲತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಅಗತ್ಯವಿದೆ. ಉದ್ಯೋಗಸೃಷ್ಟಿಗೆ ಉದ್ಯಮಶೀಲತೆಯೇ ಬಲವಾದ ಆಧಾರ ಎಂಬ ವಾಸ್ತವವನ್ನು ಮುಂದುವರಿದ ದೇಶಗಳಲ್ಲಿ ಕಂಡುಕೊಂಡಿದ್ದಾರೆ. ಆದರೆ ನಮ್ಮಲ್ಲಿ ಈ ಪರಿಕಲ್ಪನೆಗೆ ಇನ್ನಷ್ಟೇ ಒತ್ತಾಸೆ ದಕ್ಕಬೇಕಿದೆ.

ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಕೇಂದ್ರ ಸರ್ಕಾರದ ‘ಮುದ್ರಾ’ ಯೋಜನೆಯಡಿಯಲ್ಲಿ 7 ಕೋಟಿ ಜನರಿಗೆ 3.2 ಲಕ್ಷ ಕೋಟಿ ರೂ. ನೆರವು ನೀಡಿರುವುದು ಉತ್ತಮ ನಡೆಯೇ ಸರಿ. ಆದರೆ ಉದ್ಯಮಶೀಲತೆ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಯುವಪೀಳಿಗೆಯನ್ನು ಆಕರ್ಷಿಸುವ ಸಲುವಾಗಿ ಈ ಯೋಜನೆ ಮೂಲಕ ಸೃಷ್ಟಿಯಾಗುವ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

(ಲೇಖಕರು ಬೆಂಗಳೂರಿನ ಸೆಂಟರ್ ಫಾರ್ ಎಜುಕೇಷನಲ್ ಆಂಡ್ ಸೋಷಿಯಲ್ ಸ್ಟಡೀಸ್​ನ ಸಲಹೆಗಾರರು)

Leave a Reply

Your email address will not be published. Required fields are marked *