ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ಲಕ್ಷ್ಮೇಶ್ವರ: ಪ್ರವೇಶಾತಿ ಸಂದರ್ಭದಲ್ಲಿ ಕೊಟ್ಟಿದ್ದ ಎಸ್ಸೆಸ್ಸೆಲ್ಸಿ ಅಂಕ ಪಟ್ಟಿಗಳನ್ನು ಮರಳಿ ಕೊಡುವಂತೆ ಒತ್ತಾಯಿಸಿ ಪಟ್ಟಣದ ಚನ್ನಮ್ಮ ಶೈಕ್ಷಣಿಕ ಹಾಗೂ ವಿವಿಧೋದ್ಧೇಶಗಳ ಸಮಿತಿಯ ಐಟಿಐ ವಿದ್ಯಾರ್ಥಿಗಳು ಪಾಲಕರೊಂದಿಗೆ ಗುರುವಾರ ಕಾಲೇಜ್ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತರು ಆರೋಪಿಸುವಂತೆ ಕಳೆದ 3 ತಿಂಗಳಿಂದ ಅಂಕಪಟ್ಟಿಗಳನ್ನು ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದರೂ ಕಾಲೇಜ್​ನವರು ಅಂಕಪಟ್ಟಿಗಳು ಕಳ್ಳತನವಾಗಿವೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಸಬೂಬು ಹೇಳುತ್ತ ಅಂಕಪಟ್ಟಿ ನೀಡದೇ ಸತಾಯಿಸುತ್ತಿದ್ದಾರೆ. ಇದರಿಂದ 36 ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಾಕಷ್ಟು ತೊಂದರೆಯಾಗಿದೆ. ಇದರಿಂದ ರೋಸಿ ಹೋದ ವಿದ್ಯಾರ್ಥಿಗಳು ಮತ್ತು ಪಾಲಕರು ಅಂಕಪಟ್ಟಿಗಳನ್ನು ಮರಳಿಸುವಂತೆ ಬೀದಿಗಿಳಿದು ಆಡಳಿತ ಮಂಡಳಿ ವಿರುದ್ಧ ಘೊಷಣೆ ಕೂಗಿದರು.

ಈ ವೇಳೆ ಮಾತನಾಡಿದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ. ಸಿದ್ದಲಿಂಗಯ್ಯ ಅವರು ಕಾಲೇಜ್​ನಲ್ಲಿಟ್ಟಿದ್ದ ಅಂಕಪಟ್ಟಿಗಳು ಕಳ್ಳತನವಾಗಿವೆ. ಈ ಕುರಿತು ದೂರು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದೆಂದು ಅಂಕಪಟ್ಟಿಗಳ ನಕಲು ತರಿಸಿಕೊಡಲು ಕಾರ್ಯೋನ್ಮುಖರಾಗಿದ್ದೇವೆ. ಅದಕ್ಕೆ ಕಾನೂನಿನ ಕೆಲ ಪ್ರಕ್ರಿಯೆಗಳಿದ್ದು, ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೊಪ್ಪದ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪಿಎಸ್​ಐ ಪಿ.ಎಂ. ಬಡಿಗೇರ, ಆಡಳಿತ ಮಂಡಳಿಯವರಿಗೆ ಆದಷ್ಟು ಬೇಗ ಅಂಕಪಟ್ಟಿ ತರಿಸಿಕೊಡುವಂತೆ ಹೇಳಿ ವಿದ್ಯಾರ್ಥಿಗಳ ಮನವೊಲಿಸಿದರು.

ಪಾಲಕರಾದ ಮಾಹದೇವಿ ಪೂಜಾರ, ಬಸವರಾಜ ಚಕ್ರಸಾಲಿ, ಪ್ರಕಾಶ ಮಾದನೂರ, ಪ್ರವೀಣ ಆಚಾರ್ಯ, ಈರಣ್ಣ ಪೂಜಾರ, ಅನಿಲ, ನವೀನಕುಮಾರ, ಅರುಣ ಮೆಕ್ಕಿ, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *