ಐಎಸ್​ಎಲ್ 5ನೇ ಆವೃತ್ತಿಗೆ ಆರಂಭೋತ್ಸವ ಇಲ್ಲ!

ನವದೆಹಲಿ: ಕ್ರೀಡಾಕೂಟಗಳೆಂದರೆ ವರ್ಣರಂಜಿತ ಉದ್ಘಾಟನಾ ಸಮಾರಂಭ ಸಾಮಾನ್ಯ. ಆದರೆ ಫುಟ್​ಬಾಲ್​ನಲ್ಲಿ ಇಂಥ ಸಂಪ್ರದಾಯಗಳು ಕಡಿಮೆ. ಇದಕ್ಕೆ ಕಾರಣ, ಜಾಗತಿಕ ಫುಟ್​ಬಾಲ್ ಆಡಳಿತ ಸಂಸ್ಥೆ ಫಿಫಾದ ನಿಲುವು. ಉದ್ಘಾಟನಾ ಸಮಾರಂಭಕ್ಕೆ ದುಂದುವೆಚ್ಚ ಮಾಡುವ ಬದಲು ಅದನ್ನು ಕ್ರೀಡೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ವಿಶ್ವಕಪ್ ಸಹಿತ ಫಿಫಾದ ಯಾವುದೇ ಟೂರ್ನಿಗೆ ವರ್ಣರಂಜಿತ ಆರಂಭೋತ್ಸವಗಳಿಲ್ಲ. ಇದೀಗ ಭಾರತದ ಫುಟ್​ಬಾಲ್ ಟೂರ್ನಿ ‘ಇಂಡಿಯನ್ ಸೂಪರ್ ಲೀಗ್’ (ಐಎಸ್​ಎಲ್) ಕೂಡ ಇದನ್ನೇ ಅನುಸರಿಸಲು ಮುಂದಾಗಿದೆ. ಇದರಿಂದಾಗಿ ಮುಂಬರುವ ಐಎಸ್​ಎಲ್ 5ನೇ ಆವೃತ್ತಿಗೆ ಆರಂಭೋತ್ಸವ ಇರುವುದಿಲ್ಲ. ಫುಟ್​ಬಾಲ್ ಆಟದತ್ತ ಮಾತ್ರ ಗಮನ ಕೇಂದ್ರೀಕರಿಸಬೇಕೆಂದು ಐಎಸ್​ಎಲ್ ಸಂಘಟಕರು ನಿರ್ಧರಿಸಿದ್ದಾರೆ. ಕಳೆದ 4 ಆವೃತ್ತಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಬಾಲಿವುಡ್ ತಾರೆಯರು ನರ್ತಿಸಿದ್ದರು. 10 ತಂಡಗಳ ಐಎಸ್​ಎಲ್ 5ನೇ ಆವೃತ್ತಿಗೆ ಸೆಪ್ಟೆಂಬರ್ 29ರಂದು ಚಾಲನೆ ಸಿಗಲಿದೆ.

ಮುಂಬೈ ಸಿಟಿ ಎಫ್​ಸಿಗೆ ಬೆಂಗಳೂರಿನ ವಿಘ್ನೇಶ್

ಮುಂಬೈ: ಭಾರತ 23 ವಯೋಮಿತಿ ತಂಡದ ಆಟಗಾರ, ಬೆಂಗಳೂರಿನ 20 ವರ್ಷದ ವಿಘ್ನೇಶ್ ದಕ್ಷಿಣಮೂರ್ತಿ ಮುಂಬರುವ ಇಂಡಿಯನ್ ಸೂಪರ್ ಲೀಗ್ ಫುಟ್​ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್​ಸಿ (ಎಂಸಿಎಫ್​ಸಿ) ಪರ ಆಡಲು ಸಹಿ ಹಾಕಿದ್ದಾರೆ. ಆ ಮೂಲಕ ಎಂಸಿಎಫ್​ಸಿ, ಐಎಸ್​ಎಲ್ ಋತುವಿಗೆ ತನ್ನೆಲ್ಲ ಒಪ್ಪಂದ ಗಳನ್ನು ಮುಕ್ತಾಯ ಗೊಳಿಸಿದೆ. 3 ವರ್ಷಗಳ ಹಿಂದೆ ಆರಂಭವಾದ ಓಜೋನ್ ಅಕಾಡೆಮಿಯ ಭಾಗವಾಗಿದ್ದ ವಿಘ್ನೇಶ್, 17 ವರ್ಷದಲ್ಲೇ ಓಜೋನ್​ನ ಮೊದಲ ದರ್ಜೆಯ ತಂಡಕ್ಕೆ ಆಡುವ ಅರ್ಹತೆ ಪಡೆದುಕೊಂಡಿದ್ದರು. 23 ವಯೋಮಿತಿ ಭಾರತ ತಂಡದ ಭಾಗವಾಗಿದ್ದಾರೆ.