ಏ. 4ರಂದು ಶಿವಕುಮಾರ ಉದಾಸಿ ನಾಮಪತ್ರ ಸಲ್ಲಿಕೆ

ವಿಜಯವಾಣಿ ಸುದ್ದಿಜಾಲ ಹಾವೇರಿ
ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಏ. 4ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು, ಅಂದು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಘೊಷಣೆಯಾದ ಬಳಿಕ, ನಗರದ ಹುಕ್ಕೇರಿಮಠಕ್ಕೆ ಭೇಟಿ ನೀಡಿ ಸದಾಶಿವ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತತ ಮೂರನೇ ಬಾರಿಗೆ ಗೆಲುವು ಸಾಧಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಯವರು ಅವಕಾಶ ಕಲ್ಪಿಸಿದ್ದಾರೆ ಎಂದರು.

ಈ ಬಾರಿಯು ಕ್ಷೇತ್ರದ ಜನತೆ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ಜೆಡಿಎಸ್​ಗೆ ಇಲ್ಲಿ ಅಸ್ತಿತ್ವವಿಲ್ಲ. ನಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ. 50 ವರ್ಷದಲ್ಲಿ ಕಾಂಗ್ರೆಸ್ ಮಾಡದ ಸಾಧನೆಯನ್ನು ಐದು ವರ್ಷದಲ್ಲಿ ಮೋದಿ ಸರ್ಕಾರ ಮಾಡಿದೆ. ದೇಶಾದ್ಯಂತ ಕಡುಬಡವರು ಸರ್ಕಾರದ ನೇರ ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬರೀ ಘೊಷಣೆಗಳನ್ನು ಮಾಡುತ್ತಿತ್ತು. ಅವು ಅನುಷ್ಠಾನಕ್ಕೆ ಬರುತ್ತಿರಲಿಲ್ಲ. ಮೋದಿಯವರು ಹೇಳಿದಂತೆ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಹಾವೇರಿ ಕ್ಷೇತ್ರದಲ್ಲಿ ರೈಲ್ವೆ, ರಸ್ತೆ, ಉಜ್ವಲ ಯೋಜನೆ ಸೇರಿ ಅನೇಕ ಯೋಜನೆಗೆ ಕೋಟ್ಯಂತರ ರೂಪಾಯಿ ಅನುದಾನ ತರಲಾಗಿದೆ. ಪ್ರಧಾನ ಮಂತ್ರಿಗಳು ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಕ್ಷೇತ್ರದಲ್ಲಿನ ಪಕ್ಷದ ಎಲ್ಲ ಮುಖಂಡರು ಸಭೆ ನಡೆಸಿ ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ರೂಪಿಸುತ್ತೇವೆ ಎಂದರು.

ಕಾಂಗ್ರೆಸ್ ಸದಸ್ಯನಿಂದ ಬಿಜೆಪಿ ವಿಜಯೋತ್ಸವಕ್ಕೆ ಹಣ…
ಪ್ರಧಾನಿಯವರ ಯೋಜನೆಗಳನ್ನು ವಿಪಕ್ಷದವರು ಮೆಚ್ಚಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಅಭಿನಂದನ್ ಬಿಡುಗಡೆಗೊಂಡ ಸಮಯದಲ್ಲಿ ವಿಜಯೋತ್ಸವ ಆಚರಿಸಲು ರಾಣೆಬೆನ್ನೂರ ನಗರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಣ ನೀಡಿದ್ದರು. ಯಾಕಪ್ಪಾ ನೀನೇ ವಿಜಯೋತ್ಸವ ಮಾಡಬಹುದಿತ್ತಲ್ಲಾ ಎಂದಾಗ, ‘ನಮ್ಮ ಪಕ್ಷದಲ್ಲಿ ಇದನ್ನು ಸಹಿಸುವುದಿಲ್ಲ. ಹೀಗಾಗಿ ನೀವು ವಿಜಯೋತ್ಸವ ಆಚರಿಸಿ ನಾನು ಖುಷಿಪಡುತ್ತೇನೆ. ಲೋಕಸಭೆಯಲ್ಲಿ ಮೋದಿಯವರನ್ನು ಬೆಂಬಲಿಸುತ್ತೇನೆ’ ಎಂದಿದ್ದಾರೆ ಎಂದು ಶಿವಕುಮಾರ ಉದಾಸಿ ಹೇಳಿದರು.