ಏಳು ಸಂಸದರನ್ನು ಕಂಡ ಕೋಲಾರ ಕ್ಷೇತ್ರ

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರವೇ ಹಾಗೆ, ಒಮ್ಮೆ ಸಂಸದರಾಗಿ ಆಯ್ಕೆ ಮಾಡಿದವರನ್ನೇ ಮತದಾರ ಮತ್ತೆ ಮತ್ತೆ ಆಯ್ಕೆ ಮಾಡುತ್ತಾ ಬಂದಿದ್ದಾನೆ. ಈವರೆಗೆ ನಡೆದ ಒಟ್ಟು 16 ಚುನಾವಣೆಗಳಲ್ಲಿ ಎರಡು ಪಕ್ಷಗಳಿಂದ 7 ಮಂದಿಯನ್ನಷ್ಟೇ ಆಯ್ಕೆ ಮಾಡಿರುವ ಮತದಾರನ ತೀರ್ಮಾನ ಈ ಬಾರಿ ಏನಿದ್ದೀತು ಎಂಬ ಕುತೂಹಲ ಜನಸಾಮಾನ್ಯರದ್ದು.

ಗೆದ್ದವರ್ಯಾರು?:ಭಾರತೀಯ ಚುನಾವಣಾ ಆಯೋಗ 1951ರ ಡಿಸೆಂಬರ್​ನಲ್ಲಿ ಪ್ರಥಮ ಲೋಕಸಭೆ ಚುನಾವಣೆ ಘೊಷಿಸಿತ್ತು. ಆಗ ಕರ್ನಾಟಕ ಅಂದಿನ ಮೈಸೂರು ರಾಜ್ಯಕ್ಕೆ ಒಳಪಟ್ಟಿತ್ತು. ಮೊದಲ ಚುನಾವಣೆಗೆ ಕೋಲಾರ ಲೋಕಸಭೆ ದ್ವಿಸದಸ್ಯತ್ವ ಕ್ಷೇತ್ರ (ಸಾಮಾನ್ಯ)ವಾಗಿತ್ತು.

ದ್ವಿಸದಸ್ಯತ್ವ ಆಯ್ಕೆಯಲ್ಲಿ ಪ್ರಥಮ ವಿಜೇತರಾಗಿ ದೊಡ್ಡತಿಮ್ಮಯ್ಯ (ಕಾಂಗ್ರೆಸ್) ಹಾಗೂ 2ನೇ ವಿಜೇತರಾಗಿ ಕ್ಷೀರಕ್ರಾಂತಿಕಾರ ಎಂ.ವಿ.ಕೃಷ್ಣಪ್ಪರನ್ನು ಮತದಾರರು ಆರಿಸಿದ್ದರು. 1957ರಲ್ಲಿ ದ್ವಿಸದಸ್ಯತ್ವ ಕ್ಷೇತ್ರದಿಂದ ಹೊಸ ಮುಖ ಕೆ.ಸಿ.ರೆಡ್ಡಿ (ಕಾಂ)ಗೆ ಮತದಾರ ಮಣೆ ಹಾಕಿದರೆ ದೊಡ್ಡತಿಮ್ಮಯ್ಯ (ಕಾಂ) ಗೆದ್ದಿದ್ದರು. 1962ರಲ್ಲಿ ದೊಡ್ಡತಿಮ್ಮಯ್ಯ ಅವರನ್ನು ಮತದಾರ ಮರು ಆಯ್ಕೆ ಮಾಡಿದ್ದ.

1967ರಲ್ಲಿ ಹಳಬರ್ಯಾರೂ ಸ್ಪರ್ಧಿಸದ ಕಾರಣ ಮತದಾರ ಹೊಸಮುಖ ಜಿ.ವೈ.ಕೃಷ್ಣನ್ (ಕಾಂ) ಅವರನ್ನು ಆಯ್ಕೆ ಮಾಡಿದರೆ, 1971ರಲ್ಲಿ ಸಿಪಿಎಂನಿಂದ 2ನೇ ಬಾರಿ ಸ್ಪರ್ಧಿಸಿದ್ದ ಜಿ. ನಾರಾಯಣಸ್ವಾಮಿಗೆ ಮತದಾರರು ಅವಕಾಶ ನೀಡದೆ ಜಿ.ವೈ. ಕೃಷ್ಣನ್ ಅವರನ್ನೇ ಆಯ್ಕೆ ಮಾಡಿದ್ದರು. 1977 ಮತ್ತು 1980ರಲ್ಲೂ ಜಿ.ವೈ.ಕೃಷ್ಣನ್ ಮತದಾರನ ಒಲವು ಗಳಿಸಿ ಸೈ ಎನಿಸಿಕೊಂಡಿದ್ದರು.

1984ರ ಚುನಾವಣೆಗೂ ಜಿ.ವೈ. ಕೃಷ್ಣನ್ ಸ್ಪರ್ಧಿಸಿದ್ದರಾದರೂ ಮತದಾರ ಹೊಸ ಮುಖಕ್ಕೆ ಮಣೆ ಹಾಕಿ ವಿ.ವೆಂಕಟೇಶ್ (ಜನತಾ ಪಕ್ಷ) ಅವರನ್ನು ಭಾರೀ ಮತಗಳಿಂದ ಗೆಲ್ಲಿಸಿ ಹೊಸ ಇತಿಹಾಸ ಬರೆದರೆ, ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕಂಡ ಮೊದಲ ಸೋಲು ಅದಾಗಿತ್ತು.

1989ರ ಚುನಾವಣೆಗೆ ವಿ.ವೆಂಕಟೇಶ್ ಸ್ಪರ್ಧಿಸಿದ್ದರೆ ಮರು ಆಯ್ಕೆಯಾಗುತ್ತಿದ್ದರೋ ಏನೋ. ಸ್ಪರ್ಧಿಸದ ಹಿನ್ನೆಲೆಯಲ್ಲಿ ಮತದಾರರು ಮತ್ತೆ ಕಾಂಗ್ರೆಸ್ಸನ್ನು ಅಪ್ಪಿಕೊಂಡು ಅಭ್ಯರ್ಥಿ ವೈ.ರಾಮಕೃಷ್ಣಯ್ಯರನ್ನು ಗೆಲ್ಲಿಸಿದರು.

1991ರಲ್ಲಿ ಪ್ರಥಮ ಬಾರಿಗೆ ಕೆ.ಎಚ್.ಮುನಿಯಪ್ಪ (ಕಾಂ)ನಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು. ಅಲ್ಲಿಂದೀಚೆಗೆ ಕ್ಷೇತ್ರದ ಮತದಾರ ಮುನಿಯಪ್ಪ ಕೈ ಬಿಟ್ಟಿಲ್ಲ. 1996, 98, 99, 2004, 2009, 2014 ಹೀಗೆ 7 ಅವಧಿಯಿಂದ ಮರು ಆಯ್ಕೆ ಆಗುತ್ತಾ ಬಂದಿದ್ದಾರೆ.

ಜನರ ಒಲವು-ನಿಲುವು: ಕೋಲಾರ ಕ್ಷೇತ್ರಕ್ಕೆ 1951ರಿಂದ 2014ರವರೆಗೆ ನಡೆದ 16 ಚುನಾವಣೆಗಳಲ್ಲಿ ದೊಡ್ಡತಿಮ್ಮಯ್ಯ 3 ಅವಧಿ, ಎಂ.ವಿ.ಕೃಷ್ಣಪ್ಪ ಮತ್ತು ಕೆ.ಸಿ ರೆಡ್ಡಿ, ವೆಂಕಟೇಶ್, ವೈ.ರಾಮಕೃಷ್ಣ ತಲಾ ಒಂದೊಂದು ಬಾರಿ, ಜಿ.ವೈ. ಕೃಷ್ಣನ್ 4 ಬಾರಿ ಸಂಸದರಾದರೆ, ಕೆ.ಎಚ್.ಮುನಿಯಪ್ಪ ಸತತ 7 ಬಾರಿ ಸಂಸದರಾಗಿದ್ದಾರೆ. ಸರಿಸುಮಾರು ಏಳು ದಶಕಗಳಿಂದ 7 ಸಂಸದರನ್ನಷ್ಟೇ ಕೋಲಾರ ಲೋಕಸಭಾ ಕ್ಷೇತ್ರ ಕಂಡಿದೆ. ಅದೂ ಒಂದೇ ಒಂದು ಬಾರಿ ಜನತಾ ಜನಾರ್ದನ ಜನತಾಪಕ್ಷಕ್ಕೆ ಒಲಿದಿದ್ದ. ಉಳಿದ 15 ಚುನಾವಣೆಗಳಲ್ಲೂ ಕಾಂಗ್ರೆಸ್ಸನ್ನೇ ಮತದಾರ ಬೆಂಬಲಿಸುತ್ತ ಬಂದಿದ್ದಾನೆ.

ಈ ಬಾರಿ ಯಾರಿಗೆ ಮಣೆ?: ಲೋಕಸಭೆ ಚುನಾವಣೆ ಏ.18ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕಾಂಗ್ರೆಸ್​ನ ಕೆ.ಎಚ್.ಮುನಿಯಪ್ಪ 8ನೇ ಬಾರಿಗೆ ಮೈತ್ರಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದರೆ, ಬಿಜೆಪಿಯಿಂದ ಎಸ್.ಮುನಿಸ್ವಾಮಿ ಅಭ್ಯರ್ಥಿ. ಪಕ್ಷೇತರರ ನಡುವೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಮತದಾರ ಮತ್ತೆ ಹಳಬರಿಗೇ ಮಣೆ ಹಾಕುತ್ತಾನೋ ಬದಲಾವಣೆ ತರುತ್ತಾನೋ ಕಾದುನೋಡಬೇಕು.