ಏಕ ವಿದ್ಯಾರ್ಥಿನಿ ಶಾಲೆಗೆ ಶಾಸಕ ಭೇಟಿ

ಶ್ರೀನಿವಾಸಪುರ: ಒಬ್ಬ ವಿದ್ಯಾರ್ಥಿನಿಗೆ ಒಬ್ಬ ಶಿಕ್ಷಕಿ ಪಾಠ ಮಾಡುತ್ತಿರುವ ತಾಲೂಕಿನ ಓಬೇನಹಳ್ಳಿ ಸರ್ಕಾರಿ ಶಾಲೆಗೆ ಮಾಜಿ ಸಚಿವ, ಬೆಂಗಳೂರಿನ ರಾಜಾಜಿನಗರ ಶಾಸಕ ಎಸ್.ಸುರೇಶ್​ಕುಮಾರ್ ಸೋಮವಾರ ಭೇಟಿ ನೀಡಿ ಮಗುವಿನ ಜತೆ ಕಾಲ ಕಳೆದು ಮಗುವಿನ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಗೆ ಮಕ್ಕಳು ದಾಖಲಾಗದಿರುವ ಮಾಹಿತಿ ಪಡೆದರು.

ಸೆ.20ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಏಕ ವಿದ್ಯಾರ್ಥಿ ಶಾಲೆ ಅಂದ್ರೆ ಇದಪ್ಪ!’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಸುರೇಶ್​ಕುಮಾರ್ ಅಧಿಕಾರಿಗಳಿಗೆ ಮಾಹಿತಿ ನೀಡದೆ ನೇರವಾಗಿ ಶಾಲೆಗೆ ಅವರ ಸ್ನೇಹಿತರೊಂದಿಗೆ ಭೇಟಿ ನೀಡಿ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯಿಂದ ಮಾಹಿತಿ ಕೇಳಿದರು.

ಭೇಟಿ ನೀಡಿದ ದಿನವೇ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕಿ ಕೋಮಲಾ ತರಬೇತಿ ನಿಮಿತ್ತ ಶ್ರೀನಿವಾಸಪುರಕ್ಕೆ ತೆರಳಿದ್ದರು. ಪಕ್ಕದ ಗ್ರಾಮವಾದ ಮೀಸಗಾನಹಳ್ಳಿ ಶಾಲೆ ಶಿಕ್ಷಕ ಎನ್.ವಿ. ನಾರಾಯಣಸ್ವಾಮಿ ಎಂಬುವವರನ್ನು ನಿಯೋಜಿಸಲಾಗಿತ್ತು. ಸುರೇಶ್ ಕುಮಾರ್ ಭೇಟಿ ನೀಡಿದಾಗ ಶಿಕ್ಷಕ ನಾರಾಯಣಸ್ವಾಮಿ ಗಲಿಬಿಲಿಗೊಂಡರು.

ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಈ ಶಾಲೆ ವೀಕ್ಷಣೆಗಾಗಿ ಬಂದಿದ್ದೇನೆ ಎಂದು ತಿಳಿಸಿದ ಶಾಸಕರು 5ನೇ ತರಗತಿಯ ನಂದಿತಾಳೊಂದಿಗೆ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು.

ವಿದ್ಯಾರ್ಥಿನಿಯ ದಿನನಿತ್ಯದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂದಿತಾಳಂತಹ ಮಕ್ಕಳ ಬೆಳವಣಿಗೆ ಕುರಿತು ನಾವೆಲ್ಲರೂ ಗಂಭೀರವಾಗಿ ಯೋಚನೆ ಮಾಡಬೇಕು. ಶಿಕ್ಷಣ ತಜ್ಞರು ಮನಸ್ಸು ಮಾಡಿದರೆ ನಂದಿತಾಳಂತಹ ಅನೇಕ ವಿದ್ಯಾರ್ಥಿಗಳಿಗೆ ಪರಿಹಾರ ಸಿಗುತ್ತದೆ. ಆ ಎಳೆಯ ಮನಸ್ಸುಗಳು ಸಂತಸದಿಂದ ಇರುವಂತಾಗಬೇಕು. ಈ ಕುರಿತು ನಾನು ಸಂಬಂಧಪಟ್ಟವರ ಜತೆ ವಿಷಯ ಪ್ರಸ್ತಾಪಿಸಲಿದ್ದೇನೆ. ಪರಿಹಾರ ದೊರಕಿಸಲು ಪ್ರಯತ್ನ ನಡೆಸಲಿದ್ದೇನೆ.

| ಎಸ್.ಸುರೇಶ್ ಕುಮಾರ್, ಶಾಸಕ

ಶಾಸಕರು ಶಾಲೆಗೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದರು. ಶಿಕ್ಷಕಿಗೆ ಪ್ರತಿದಿನ ಆಗುವ ಮಾನಸಿಕ ಸ್ಥಿತಿಗತಿ ಮತ್ತು ಗ್ರಾಮದಲ್ಲಿ ಶಾಲೆಗೆ ಮಕ್ಕಳು ದಾಖಲಾಗದೆ ಇರುವುದರ ಬಗ್ಗೆ ಮಾಹಿತಿ ಪಡೆದರು. ನಂದಿತಾಳ ಶೈಕ್ಷಣಿಕ ಪ್ರಗತಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

| ಎನ್.ವಿ. ನಾರಾಯಣಸ್ವಾಮಿ, ಮೀಸಗಾನಹಳ್ಳಿ ಶಾಲೆ ಶಿಕ್ಷಕ