ಯಾವುದೇ ಮಗು ಕಲಿಕೆಯಿಂದ ತಪ್ಪಿಸಿಕೊಳ್ಳಬಾರದೆಂಬ ಇಲಾಖೆಯ ಸದಾಶಯಕ್ಕೆ ಎಲ್ಲರ ಶ್ಲಾಘನೆ
ಶಿರಾ: ಬಾಲಕಿಯೊಬ್ಬಳ ಶಿಕ್ಷಣಕ್ಕೆ ತೊಂದರೆಯಾಗ ಬಾರದೆಂಬ ಏಕೈಕ ಉದ್ದೇಶದಿಂದ ಜಪಾನ್ನ ಹೊಕೈಡೋದಲ್ಲಿರುವ ಕಮಿಶಿರಾಟಾಕಿ ರೈಲು ನಿಲ್ದಾಣಕ್ಕೆ ಮೂರು ವರ್ಷಗಳ ಕಾಲ ಪ್ರಯಾಣಿಕರಿಲ್ಲದಿದ್ದರೂ ರೈಲು ಬರುತ್ತಿತ್ತು ಎಂಬ ಸುದ್ದಿ ಕೇಳಿರಬಹುದು. ಶಿಕ್ಷಣಕ್ಕೆ ಆ ದೇಶ ನೀಡಿದ ಮಹತ್ವವನ್ನು ನೆನಪಿಸುವಂತೆ ಇಲ್ಲೊಂದು ಸರ್ಕಾರೀ ಶಾಲೆ 1 ನೇ ತರಗತಿಗೆ ದಾಖಲಾದ ಏಕೈಕ ಮಗುವಿಗಾಗಿಯೇ ಮುಚ್ಚದೇ ಮುಂದುವರಿದಿದೆ. ಆ ಮೂಲಕ ಶಿಕ್ಷಣ ಇಲಾಖೆ ಪ್ರಜಾಪ್ರಭುತ್ವಕ್ಕೂ, ಯಾವುದೇ ಮಗು ಕಲಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂಬ ಸದಾಶಯಕ್ಕೂ ಪುಷ್ಟಿ ನೀಡಿದೆ.
ಶಿರಾ ತಾಲೂಕು ಮದ್ದೇವಳ್ಳಿಯಲ್ಲಿ 1ರಿಂದ 5ನೇ ತರಗತಿವರೆಗೂ ಕಲಿಯಲು ಅವಕಾಶವಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತವಾದ ಕಟ್ಟಡ, ಬಿಸಿಯೂಟ ಕೊಠಡಿ, ಶೌಚಗೃಹ ಸೇರಿ ಎಲ್ಲ ರೀತಿಯ ಮೂಲ ಸೌಕರ್ಯಗಳಿವೆ. ಆದರೆ ವಿದ್ಯಾರ್ಥಿಗಳೇ ಇಲ್ಲ. ಹಾಗೆಂದು ಊರಲ್ಲಿ ಮಕ್ಕಳಿಲ್ಲ ಎಂದೇನಿಲ್ಲ. ಪಾಲಕರ ಖಾಸಗಿ ಪ್ರೇಮದಿಂದಾಗಿ ಈ ಶಾಲೆಗೆ ದಾಖಲಾತಿಯಿಲ್ಲ. ಇನ್ನೇನು ವಿದ್ಯಾರ್ಥಿಗಳೇ ಇಲ್ಲದೆ ಶಾಲೆ ಮುಚ್ಚಿಯೇ ಹೋಗುತ್ತದೆ ಎಂಬ ಸ್ಥಿತಿ ಇದ್ದಾಗ 1ನೇ ತರಗತಿಗೆ ಮಾನಸಾ ಎಂಬ ವಿದ್ಯಾರ್ಥಿನಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಈ ಶಾಲೆ ಸದ್ಯ ಉಳಿದುಕೊಂಡಿದೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಉಳಿಸಿಕೊಳ್ಳಲು ಮಗಳು ಮಾನಸಾಳನ್ನು ದಾಖಲಿಸಿ ಶಾಲೆಯನ್ನು ಕಾಪಾಡಿರುವ ಅಕ್ಷರ ದಾಸೋಹ ಯೋಜನೆ ಅಡುಗೆ ತಯಾರಕಿಯ ಕಾರ್ಯಕ್ಕೆ ಶ್ಲಾನೆ ವ್ಯಕ್ತವಾಗಿದೆ.
ಮದ್ದೇವಳ್ಳಿ ಶಾಲೆಗೆ ಕಳೆದ ಮೂರು ವರ್ಷದಲ್ಲಿ ಒಬ್ಬ ವಿದ್ಯಾರ್ಥಿ ಕೂಡ ದಾಖಲಾಗಿರಲಿಲ್ಲ. ಶಾಲೆಯನ್ನು ಮುಚ್ಚುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಶಾಲೆಯನ್ನು ಉಳಿಸಬೇಕು ಎನ್ನುವ ಸಂಕಲ್ಪದಿಂದ ಶಿಕ್ಷಕಿ ಪದ್ಮಾ ಹಾಗೂ ಅಡುಗೆ ಸಹಾಯಕಿ ಸಂಕಲ್ಪದಿಂದ ಶಾಲೆ ತಾತ್ಕಾಲಿಕವಾಗಿ ಉಳಿದಿದೆ. ಉಚಿತ ಶಿಕ್ಷಣದ ಜತೆಗೆ ಬಿಸಿಯೂಟ, ಸಮವಸ್ತ್ರ ಶೂ, ಸಾಕ್ಸ್ ಪುಸ್ತಕ ಉಚಿತವಾಗಿ ನೀಡಿದರೂ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು ಆತಂಕ ಮೂಡಿಸಿದೆ. ಮದ್ದೇವಳ್ಳಿಯಲ್ಲಿ 12 ವರ್ಷದೊಳಗಿನ 15ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅವರೆಲ್ಲ ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ.
ಶಿರಾ ತಾಲೂಕಿನ ಮದ್ದೇವಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಒಂದು ಮಗು ಮಾತ್ರ ಕಲಿಯುತ್ತಿದ್ದು, ಯಾವುದೇ ಮಗು ಕಲಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಶಾಲೆ ಉಳಿಸಿಕೊಳ್ಳಲಾಗಿದೆ. ಬೇರೆ ಮಕ್ಕಳೊಂದಿಗೆ ಈ ಮಗುವೂ ಕಲಿಯಲಿ ಎಂಬ ಉದ್ದೇಶದಿಂದ ಪಕ್ಕದ ಶಾಲೆಗೆ ಮಗು ದಾಖಲಿಸುವಂತೆ ಆಕೆಯ ಪಾಲಕರಲ್ಲಿ ಮನವಿ ಮಾಡಿದರೂ ಅವರು ಒಪ್ಪಿಲ್ಲ. ಈ ಶಾಲೆಯಲ್ಲೀಗ ಒಬ್ಬರು ಶಿಕ್ಷಕಿಯಿದ್ದಾರೆ. ಒಬ್ಬ ಸಿಬ್ಬಂದಿ ಹಾಗೂ ಒಂದು ಮಗು ಇದೆ.
| ಸಿ.ಎನ್.ಕೃಷ್ಣಪ್ಪ ಬಿಇಒ, ಶಿರಾ