ಏಕಾಏಕಿ ಬಾಯಿಬಿಟ್ಟ ರಾಜ್ಯ ಹೆದ್ದಾರಿ!

ನರಗುಂದ: ಪಟ್ಟಣದ ಅರ್ಭಾಣ ಬಡಾವಣೆ ಹತ್ತಿರದ ಸವದತ್ತಿ, ಮುನವಳ್ಳಿ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಭೂಕುಸಿತ ಸಂಭವಿಸಿ ಬೃಹತ್ ಗುಂಡಿಯೊಂದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ರಜಾಕ ಸಕಲಿ ಮತ್ತು ದೇವೆಂದ್ರಪ್ಪ ಕಮ್ಮಾರ ಎಂಬುವರ ಮನೆಯ ಹತ್ತಿರದ ಸವದತ್ತಿ, ಮುನವಳ್ಳಿ ರಸ್ತೆ ಮಧ್ಯದಲ್ಲಿಯೇ ಗುಂಡಿ ಬಿದ್ದಿದ್ದು, 10 ಅಡಿ ಉದ್ದ, 6 ಅಡಿ ಅಗಲ ಇದೆ. ಗುಂಡಿಯಲ್ಲಿ ಸುಮಾರು ನಾಲ್ಕೈದು ಅಡಿಯಷ್ಟು ನೀರು ಸಂಗ್ರಹಗೊಂಡಿದೆ.

ಈ ರಸ್ತೆ ಮಾರ್ಗವಾಗಿ ನರಗುಂದದಿಂದ ನಿತ್ಯ ತಾಲೂಕಿನ ಚಿಕ್ಕನರಗುಂದ, ಬೆನಕನಕೊಪ್ಪ, ಸಂಕದಾಳ, ಯಲ್ಲಮ್ಮನಗುಡ್ಡ, ಯರಗಟ್ಟಿ, ಗೋಕಾಕ, ಬೆಳಗಾವಿ ಸೇರಿದಂತೆ ವಿವಿಧೆಡೆ ನೂರಾರು ವಾಹನಗಳು ಸಂಚರಿಸುತ್ತವೆ. ಗುಂಡಿ ಬಿದ್ದ ವೇಳೆ ಯಾವುದೇ ವಾಹನಗಳು ಸಂಚರಿಸದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಾರ್ವಜನಿಕರಿಂದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗುಂಡಿಯನ್ನು ಮುಚ್ಚಿಸಿದರು. ಈ ಹಿಂದೆ ಪಟ್ಟಣದ ಕಸಬಾ, ಅರ್ಭಾಣ, ಲೋಧಿಗಲ್ಲಿ, ದೇಸಾಯಿ ಬಾವಿ ಓಣಿಯಲ್ಲಿ ಸಾಕಷ್ಟು ಭೂಕುಸಿತಗಳು ಸಂಭವಿಸಿವೆ. ಆದರೆ, ಇದುವರೆಗೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗದ ಕಾರಣ ಬಡಾವಣೆಯ ಜನರು ಆತಂಕ ಪಡುವಂತಾಗಿದೆ.

Leave a Reply

Your email address will not be published. Required fields are marked *