Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಏಕಲವ್ಯ ಮತ್ತು ದ್ರೋಣಾಚಾರ್ಯ

Thursday, 14.09.2017, 3:00 AM       No Comments

ದ್ರೋಣರ ವಿದ್ಯಾಕೇಂದ್ರದಿಂದ ಹಿಂತಿರುಗಿದ ಏಕಲವ್ಯ ದ್ರೋಣಾಚಾರ್ಯರನ್ನೇ ತನ್ನ ಗುರುಗಳೆಂದು ಭಾವಿಸಿ ಅರಣ್ಯದಲ್ಲಿ ಅವರ ಮಣ್ಣಿನ ಮೂರ್ತಿಯನ್ನು ನಿರ್ವಿುಸಿ ಅದರ ಮುಂದೆ ಗುರುಭಕ್ತಿಯಿಂದ ತಾನೇ ಸ್ವಯಂ ವಿದ್ಯಾಭ್ಯಾಸ ಮಾಡಿದ. ದ್ರೋಣರ ಅನುಗ್ರಹ ಮತ್ತು ತನ್ನ ಗುರುಭಕ್ತಿಯಿಂದ ಧನುರ್ವಿದ್ಯೆಯಲ್ಲಿ ಅಸಾಧಾರಣ ಪರಿಣತಿ ಪಡೆದ. ಗುರಿಯಿಟ್ಟು ಬಾಣ ಬಿಡುವ ಕಲೆಯಲ್ಲಿ ಇವನನ್ನು ಮೀರಿಸುವವರೇ ಮತ್ತೊಬ್ಬರಿಲ್ಲದಂತೆ ತಯಾರಾದ. ಆದರೆ ದ್ರೋಣಾಚಾರ್ಯರು ಅರ್ಜುನನಿಗೆ ‘ಬಿಲ್ಗಾರರಲ್ಲೇ ನಿನ್ನನ್ನು ಶ್ರೇಷ್ಠನನ್ನಾಗಿ ಮಾಡುತ್ತೇನೆ’ ಎಂದು ಮಾತು ಕೊಟ್ಟಿದ್ದರು.

ಹೀಗಿರಬೇಕಾದರೆ ಒಮ್ಮೆ ಪಾಂಡವರೆಲ್ಲ ಅರಣ್ಯದಲ್ಲಿ ಸಂಚರಿಸುತ್ತಿದ್ದರು. ಪಾಂಡವರ ಜತೆಯಲ್ಲಿದ್ದ ನಾಯಿ ಮುಂದೆಮುಂದೆ ಹೋಗುತ್ತಿತ್ತು. ಆ ನಾಯಿ ಏಕಲವ್ಯನ ಆಶ್ರಮದ ಸಮೀಪಕ್ಕೆ ಬಂದಾಗ ಅದರ ಬೊಗಳುವ ಶಬ್ದ ಕೇಳಿದ ಏಕಲವ್ಯ ಆ ಶಬ್ದಕ್ಕೆ ಸರಿಯಾಗಿ ಗುರಿಯಿಟ್ಟು ಬಾಣಗಳನ್ನು ಪ್ರಯೋಗಿಸಿದ. ಏಕಲವ್ಯ ಬಿಟ್ಟ ಬಾಣಗಳು ನಾಯಿಯ ಬಾಯಿ ಸೇರಿದ್ದರಿಂದ ಅದಕ್ಕೆ ಬೊಗಳಲು ಸಾಧ್ಯವಾಗಲಿಲ್ಲ! ಹಾಗೆಯೇ ನೇರವಾಗಿ ಪಾಂಡವರ ಬಳಿ ಬಂದು ನಿಂತಿತು. ನಾಯಿಯ ಬಾಯಲ್ಲಿದ್ದ ಬಾಣಗಳನ್ನು ಕಂಡು ಪಾಂಡವರಿಗೆ ಆಶ್ಚರ್ಯ. ಬಿಲ್ಲುಗಾರ ಕಾಣುತ್ತಿಲ್ಲ, ಆದರೆ ಗುರಿಯಿಟ್ಟು ಬಾಣ ಬಿಟ್ಟಿದ್ದಾನೆ. ಇದೆಂತಹ ಅದ್ಭುತ! ಎಂದು ಅದನ್ನು ದ್ರೋಣಾಚಾರ್ಯರಿಗೆ ತೋರಿಸಿ, ‘ನಮಗಿನ್ನೂ ಕರಗತವಾಗದ ಶಬ್ದವೇಧಿ ವಿದ್ಯೆಯನ್ನು ಯಾರೋ ಒಬ್ಬ ಕಲಿತಿದ್ದಾನೆ ನೋಡಿ’ ಎಂದರು. ಅನಂತರ ಎಲ್ಲರೂ ಆ ವ್ಯಕ್ತಿಯನ್ನು ಹುಡುಕಿಕೊಂಡ ಹೊರಟರು. ಏಕಲವ್ಯ ಸಿಕ್ಕಿದ. ‘ನೀನಾರು’ ಎಂದು ಕೇಳಿದಾಗ ‘ನಾನು ದ್ರೋಣರ ಶಿಷ್ಯ, ನನಗೆ ಇಷ್ಟೆಲ್ಲ ವಿದ್ಯೆ ದೊರೆತದ್ದು ದ್ರೋಣರಿಂದ’ ಎಂದನು.

ಅರ್ಜುನನಿಗೆ ಕೋಪ ತಡೆಯಲಾಗಲಿಲ್ಲ. ದ್ರೋಣರ ಬಳಿ ಹೋಗಿ ಕೇಳಿದನು, ‘‘ನಿನ್ನನ್ನು ಎಲ್ಲರಿಗಿಂತಲೂ ಶ್ರೇಷ್ಠ ಬಿಲ್ಗಾರನನ್ನಾಗಿ ಮಾಡುತ್ತೇನೆ’’ ಎಂದು ನನಗೆ ಭರವಸೆ ನೀಡಿ ನನಗೇ ಗೊತ್ತಾಗದಂತೆ ಮತ್ತೊಬ್ಬನಿಗೆ ಪಾಠ ಹೇಳಿಕೊಡುತ್ತಿರುವಿರಲ್ಲ? ಅವನು ನನಗಿಂತಲೂ ಒಂದು ಹೆಜ್ಜೆ ಮುಂದಿದ್ದಾನೆ, ನನಗೆ ತಿಳಿಯದ ಶಬ್ದವೇಧಿ ವಿದ್ಯೆಯನ್ನು ಅವನು ಕಲಿತಿದ್ದಾನೆ. ಹೀಗೇಕೆ ಮಾಡಿದಿರಿ?’ ಎಂದು ಕೇಳಿದನು.

ದ್ರೋಣಾಚಾರ್ಯರಿಗೂ ಆಶ್ಚರ್ಯವಾಯಿತು. ಬಂದು ನೋಡಿದರು. ‘ಯಾರು ನೀನು?’ ಎಂದು ಕೇಳಿದಾಗ, ಏಕಲವ್ಯ, ‘ನಾನು ನಿಮ್ಮ ಶಿಷ್ಯನೇ. ಅಂದು ತಾವೇ ನನ್ನನ್ನು ಅನುಗ್ರಹಿಸಿ ಕಳುಹಿಸಿದ್ದಿರಲ್ಲವೆ? ಅಂದಿನಿಂದಲೂ ನಾನು ನಿಮ್ಮ ಪ್ರತಿಮೆಯನ್ನಿಟ್ಟುಕೊಂಡು ನಿಮ್ಮನ್ನೇ ಗುರುವೆಂದು ಭಾವಿಸಿ ವಿದ್ಯಾಭ್ಯಾಸ ಮಾಡಿ ಸಿದ್ಧಿ ಪಡೆದಿದ್ದೇನೆ’ ಎಂದನು. ದ್ರೋಣಾಚಾರ್ಯರಿಗೂ ಸ್ವಲ್ಪ ಗಾಬರಿಯಾಯಿತು. ‘ಅರ್ಜುನನಿಗೆ ಮಾತು ಕೊಟ್ಟಿದ್ದೇನೆ. ಇವನು ಬೇರೆ ನನಗೇ ತಿಳಿಯದೆ ನನ್ನ ಶಿಷ್ಯ ಎಂದು ಹೇಳಿಕೊಂಡು ಇಷ್ಟೆಲ್ಲ ಸಿದ್ಧಿ ಪಡೆದಿದ್ದಾನೆ, ಈಗೇನು ಮಾಡುವುದು?’ ಎಂದು ಚಿಂತಿತರಾದರು. ಒಮ್ಮೆಲೇ ಏನು ಮಾಡಬೇಕೆಂದು ತೋಚದೆ ಏಕಲವ್ಯನ ಬಳಿ ಕೇಳಿದರು, ‘ನೀನು ನನ್ನ ಶಿಷ್ಯ ಎಂದಾದರೆ ಗುರುಗಳಿಗೆ ಗುರುದಕ್ಷಿಣೆ ನೀಡಬೇಕಲ್ಲವೇ?’ ಏಕಲವ್ಯನೆಂದ, ‘ಅಪ್ಪಣೆ! ಗುರುಗಳೆ! ತಾವು ಹೇಳಿದ ಗುರುದಕ್ಷಿಣೆ ನೀಡಲು ನಾನು ಸಿದ್ಧನಿದ್ದೇನೆ.’ ಆಗ ದ್ರೋಣಾಚಾರ್ಯರು ‘ನಿನ್ನ ಹೆಬ್ಬೆರಳನ್ನೇ ನನಗೆ ಗುರುದಕ್ಷಿಣೆಯಾಗಿ ಕೊಡು’ ಎಂದು ಕೇಳಿಬಿಟ್ಟರು. ಧನುರ್ವಿದ್ಯೆಯ ಮೂಲವಾದ ಅಂಗುಷ್ಠವನ್ನೇ ಕತ್ತರಿಸಿಬಿಟ್ಟರೆ ಧನುರ್ವಿದ್ಯೆಯ ಚಾತುರ್ಯವೇ ನಾಶವಾಗಿಬಿಡುತ್ತದೆ ಎಂದು ಗೊತ್ತಿದ್ದರೂ ಏಕಲವ್ಯ ತತ್​ಕ್ಷಣವೇ ತನ್ನ ಹೆಬ್ಬೆರಳನ್ನು ತುಂಡರಿಸಿ ಕೊಟ್ಟುಬಿಟ್ಟನು. ಇದನ್ನು ಕಂಡು ದ್ರೋಣಾಚಾರ್ಯರಿಗೇ ಗಾಬರಿಯಾಯಿತಂತೆ.

ಈ ಸಂದರ್ಭದಲ್ಲಿ ಏಕಲವ್ಯನ ಮನಃಸ್ಥಿತಿ ಹೇಗಿತ್ತು ಎಂಬುದನ್ನು ವ್ಯಾಸರು ನಿರೂಪಿಸುತ್ತಾರೆ: ‘ಏಕಲವ್ಯ ಪ್ರಸನ್ನ ಮುಖವುಳ್ಳವನಾಗಿ ಮನಸ್ಸಿನಲ್ಲಿ ಸ್ವಲ್ಪವೂ ದೈನ್ಯಭಾವನೆ ತೋರದೆ ತನ್ನ ಹೆಬ್ಬೆರಳನ್ನು ಕತ್ತರಿಸಿ ದ್ರೋಣಾಚಾರ್ಯರಿಗೆ ಕೊಟ್ಟನು. (ತಥೈವ ಹೃಷ್ಟವದನಃ ತಥೈವಾದೀನಮಾನಸಃ | ಛಿತ್ವಾವಿಚಾರ್ಯ ತಂ ಪ್ರಾದಾತ್ ದ್ರೋಣಾಯಾಂಗುಷ್ಠಮಾತ್ಮನಃ || ಮ.ಭಾ.: 70.40)

ಏಕಲವ್ಯನ ಬೆರಳು ತುಂಡಾದದ್ದು ಲೋಕದ ಹಿತ ದೃಷ್ಟಿಯಿಂದ ಅತ್ಯಂತ ಒಳ್ಳೆಯದೇ ಆಯಿತು. ಏಕಲವ್ಯ ಮಹಾ ಗುರುಭಕ್ತನೇನೋ ನಿಜ. ಗುರುಗಳು ಕೇಳಿದ ಕೂಡಲೇ ಹಿಂದುಮುಂದೆ ನೋಡದೆ ತನ್ನ ಬೆರಳನ್ನೇ ಕತ್ತರಿಸಿಕೊಟ್ಟ ದೊಡ್ಡ ತ್ಯಾಗಿ. ಆದರೆ ಇಷ್ಟರಿಂದಲೇ ಏಕಲವ್ಯನನ್ನು ಒಳ್ಳೆಯವನೆಂದು ತಿಳಿಯಬಾರದು. ಆತ್ಮಹತ್ಯಾದಳದವರು ತಮ್ಮ ಧರ್ಮಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಷ್ಟರಿಂದಲೇ ಅವರನ್ನು ದೊಡ್ಡವರೆಂದು ಹೇಳಲಾಗುತ್ತದೆಯೇ? ಇಲ್ಲ. ಏಕೆಂದರೆ ಇದರ ಹಿಂದಿನ ಉದ್ದೇಶ – ಮುಗ್ಧಜನರನ್ನು ಹಿಂಸಿಸುವ ದುಷ್ಟ ಮನೋವೃತ್ತಿ. ಮೇಲ್ನೋಟಕ್ಕೆ ನೋಡುವಾಗ ಒಂದು ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆಂದು ಕಂಡುಬರುತ್ತದೆ. ಆದರೆ ಇಷ್ಟರಿಂದಲೇ ಅವರನ್ನು ಒಳ್ಳೆಯವರೆಂದು ಹೇಳಲಾಗದು. ಅದರ ಹಿಂದಿನ ಉದ್ದೇಶ ಒಳ್ಳೆಯದೋ ಕೆಟ್ಟದ್ದೋ ಎಂದು ಗಮನಿಸಬೇಕು.

ಏಕಲವ್ಯನ ವಿಷಯದಲ್ಲಂತೂ ನಮ್ಮ ಸಮಾಜದಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದೆ. ವೈದಿಕಧರ್ಮದ ಬಗ್ಗೆ ಟೀಕೆ ಮಾಡುವ ಮಂದಿ ಇದನ್ನೇ ದೊಡ್ಡ ಅಸ್ತ್ರವನ್ನಾಗಿಟ್ಟುಕೊಂಡು, ‘ದ್ರೋಣಾಚಾರ್ಯರು ಒಬ್ಬ ಹಿಂದುಳಿದ ವರ್ಗದ ಬಾಲಕ ವಿದ್ಯಾಭ್ಯಾಸಕ್ಕೆಂದು ಬಂದರೆ ವಿದ್ಯಾಭ್ಯಾಸ ಮಾಡಿಸಲಿಲ್ಲ. ಆ ಬಾಲಕ ತನ್ನ ಸ್ವಯಂಶಕ್ತಿಯಿಂದ ವಿದ್ಯೆ ಸಂಪಾದಿಸಿದರೆ ಅವನ ಅಂಗುಷ್ಠವನ್ನೇ ಕತ್ತರಿಸಿ ವಂಚಿಸಿದ್ದಾರೆ! ಇದು ದ್ರೋಣಾಚಾರ್ಯರು ಹಿಂದುಳಿದ ಜನಾಂಗಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂಬುದಾಗಿ.

ಒಮ್ಮೆ ಸಭೆಯೊಂದರಲ್ಲಿ ರಾಜಕೀಯ ಧುರೀಣರೊಬ್ಬರು ‘ಏಕಲವ್ಯನ ವಿಷಯದಲ್ಲಿ ದ್ರೋಣಾಚಾರ್ಯರು ಮಾಡಿದ್ದು ಸರಿಯೇ? ಉತ್ತರಿಸಿ. ಇದು ವೈದಿಕ ಸಮಾಜದವರು ಹಿಂದುಳಿದ ವರ್ಗಕ್ಕೆ ಮಾಡಿದ ಅನ್ಯಾಯವಲ್ಲವೇ?’ ಎಂದು ಆಕ್ಷೇಪಿಸಿದರು.

ವಸ್ತುಸ್ಥಿತಿ ಏನು ಎಂಬುದನ್ನು ಸ್ವಲ್ಪ ವಿವೇಚಿಸಿ ನೋಡಿದರೆ ಏಕಲವ್ಯನ ವ್ಯಕ್ತಿತ್ವ ಎಂತಹದ್ದು ಎಂದು ತಿಳಿಯುತ್ತದೆ. ‘ಏಕಲವ್ಯನ ಗುರುಭಕ್ತಿ ಅತ್ಯಂತ ಪ್ರಶಂಸನೀಯವಾದದ್ದು. ಗುರುಗಳು ಕೇಳಿದ ಕೂಡಲೇ ತನ್ನ ಅಂಗುಷ್ಠವನ್ನೇ ಕತ್ತರಿಸಿಕೊಟ್ಟದ್ದು ಸಾಮಾನ್ಯ ಕೆಲಸವಲ್ಲ. ಇಂತಹ ಒಳ್ಳೆಯ ಗುಣ ತೋರಿಸಿದ್ದರೂ ಈತ ಮೂಲತಃ ಜರಾಸಂಧನ ಅನುಯಾಯಿ. ಒಳ್ಳೆಯವನಲ್ಲ. ಜರಾಸಂಧನ ಸೈನ್ಯದಲ್ಲಿದ್ದುಕೊಂಡು ಅವನು ಮಾಡುವ ದೇಶದ್ರೋಹ ಕಾರ್ಯಗಳಿಗೆಲ್ಲ ಕೈಜೋಡಿಸಿದ್ದನು. ಜರಾಸಂಧ ಸಹಸ್ರಾರು ಮಂದಿ ರಾಜಕುಮಾರರನ್ನು ಬಂಧಿಸಿ ನರಬಲಿಕೊಡಬೇಕೆಂದು ಪ್ರಯತ್ನಿಸಿದವ. ಇಡೀ ಜಗತ್ತನ್ನೇ ತನ್ನ ಸ್ವಾಧೀನದಲ್ಲಿ ಇಟ್ಟುಕೊಳ್ಳಬೇಕೆಂದು ದೊಡ್ಡ ಹತ್ಯಾಕಾಂಡವನ್ನೇ ಮಾಡಿದ ಸಾಮ್ರಾಜ್ಯಶಾಹಿಯಾಗಿದ್ದ ದುಷ್ಟರಾಜ. ಇಂತಹ ಜರಾಸಂಧ ಕೃಷ್ಣನ ವಿರುದ್ಧ ಹೋರಾಡುವ ಪ್ರತಿಯೊಂದು ಯುದ್ಧದಲ್ಲಿಯೂ ಏಕಲವ್ಯ ಸಹಭಾಗಿಯಾಗಿದ್ದನು. ಆದರೆ ದುಷ್ಟರೂ ಯಾವುದೋ ಒಂದು ದೈವೀಶಕ್ತಿಯ ಆವೇಶದಿಂದ ಒಂದೊಂದು ಸಲ ಬಹಳ ಒಳ್ಳೆಯವರಂತೆ ವರ್ತಿಸುತ್ತಾರೆ. ಮಧ್ವಾಚಾರ್ಯರು ಗೀತೆಗೆ ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ಹೇಳಿದಂತೆ, ‘ದುಷ್ಟರಿಗೆ ಅನ್ಯಾಯವಾದರೂ ಅದರಿಂದ ಲೋಕಕ್ಕೆ ಒಳಿತೇ ಆಗುವುದರಿಂದ ಏಕಲವ್ಯನ ಬೆರಳು ಹೋದದ್ದು ಅವನಿಗೆ ನಷ್ಟವಾದರೂ ಅದರಿಂದ ಜಗತ್ತಿಗೆ ಲಾಭವೇ ಆಗಿದೆ. ಅವನ ಬೆರಳು ನಾಶವಾಗದಿದ್ದರೆ ಜರಾಸಂಧನಿಗೆ ಸಹಾಯ ಮಾಡಿ ಮತ್ತಷ್ಟು ದೌಷ್ಟ್ಯನ್ನೇ ತೋರಿಸುತ್ತಿದ್ದ’ ಎಂಬುದನ್ನು ಇಲ್ಲಿ ಗಮನಿಸಬೇಕು. ಇದೆಲ್ಲವನ್ನೂ ಗಮನಿಸಿದಾಗ ಏಕಲವ್ಯನ ವಿಚಾರವನ್ನು ಇಷ್ಟು ಗಂಭೀರವಾಗಿ ಪರಿಗಣಿಸಬೇಕಾದ ಆವಶ್ಯಕತೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

 

 

 

Leave a Reply

Your email address will not be published. Required fields are marked *

Back To Top