ಮಹಾಲಿಂಗಪುರ: ದೇಶದ ಜನ ಬದಲಾವಣೆ ಬಯಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಗೆ ದೇಶದ ಬಹುತೇಕ ಜನರು ಸಹಮತ ವ್ಯಕ್ತಪಡಿಸುತ್ತಿದ್ದಾರೆ ಎಂದು ಶ್ರೀ ರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ನಾಗರಿಕ ಸಂಹಿತೆಗೆ ನಾವು ಬೆಂಬಲ ಸೂಚಿಸುತ್ತೇವೆ. ಇದು ಜಾರಿಗೆ ಬರಬೇಕು. ಇದಕ್ಕಾಗಿ ರಾಜ್ಯಾದ್ಯಂತ ಜು.18 ರಂದು ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಭಿಯಾನ ಆರಂಭವಾಗುತ್ತಿದ್ದು, ಐದು ಲಕ್ಷ ಜನರ ಸಹಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು.
1889ರಲ್ಲಿ ಗೋವಾದಲ್ಲಿ ಪೋರ್ಚುಗೀಸರು ಕಾಮನ್ ಸಿವಿಲ್ ಕೋಡ್ ಜಾರಿಗೆ ತಂದರು. 1961ರಲ್ಲಿ ಗೋವಾ ವಿಮೋಚನೆಗೊಂಡ ಬಳಿಕವೂ ಈ ಕಾಯ್ದೆ ಜಾರಿಯಲ್ಲಿದೆ. ಅದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರೃ ಬಂದು 76 ವರ್ಷವಾದರೂ ಸಮಾನ ಕಾನೂನು ಬಂದಿಲ್ಲ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದಿಂದ ಸಮಾನ ಕಾನೂನು ಜಾರಿಯಾಗಿಲ್ಲ. 20 ವರ್ಷಗಳಿಂದ ಹೈಕೋರ್ಟ್, ಸುಪ್ರೀಂಕೋರ್ಟ್ ಸಹ ಈ ಕಾನೂನು ಜಾರಿ ಬಗ್ಗೆ ಹೇಳುತ್ತ ಬಂದಿವೆ. ಈಗ ಅದರ ಜಾರಿ ಅವಶ್ಯಕತೆ ಇದೆ ಎಂದರು.
ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿ, ಯಾವ ದೇಶದಲ್ಲಿಯೂ ಎರಡು ಕಾನೂನು ಇಲ್ಲ. ನಮ್ಮ ದೇಶದಲ್ಲಿ ಮಾತ್ರ ಎರಡು ರೀತಿಯ ಕಾನೂನುಗಳಿವೆ. ಇವತ್ತು ಇಡೀ ದೇಶದಲ್ಲಿ ಯುಸಿಸಿ ಬಗ್ಗೆ ಸಕಾರಾತ್ಮಕ ಚರ್ಚೆ ಶುರುವಾಗಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಶ್ರೀ ರಾಮಸೇನಾ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ತಾನಾಜಿ ಕಿರಿಕಿರಿ, ನಗರ ಘಟಕದ ಅಧ್ಯಕ್ಷ ಸಿದ್ದು ಖೋತ, ಮಹಾಂತೇಶ ಬುಡೇಜಾಡರ, ವಿಷ್ಣುಗೌಡ ಪಾಟೀಲ, ಯಮನಪ್ಪ ಕೋರಿ, ಗಂಗಾಧರ ಗರವ, ಮಹಾಲಿಂಗ ಹೊಸಪೇಟಿ ಇತರರಿದ್ದರು.