ಏಕತಾ ಪ್ರತಿಮೆ ಅನಾವರಣ

ಅಹಮದಾಬಾದ್: ವಿಶ್ವದ ಅತಿದೊಡ್ಡ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಕೊಡುಗೆ ನೆನೆದ ಪ್ರಧಾನಿ, ಅವರು ಇಲ್ಲದಿದ್ದರೆ ಭಾರತದೊಳಗೆ ಓಡಾಡಲೂ ವೀಸಾ ಬೇಕಾಗುತ್ತಿತ್ತು. ಸೋಮನಾಥ ದೇವಸ್ಥಾನಕ್ಕೆ ಹೋಗಲು, ಗಿರ್ ಅಭಯಾರಣ್ಯಕ್ಕೆ ಬರಲು, ಚಾರ್​ವಿುನಾರ್ ಸ್ಥಳಕ್ಕೆ ಹೋಗಲೂ ವೀಸಾ ಬೇಕಾಗುತ್ತಿತ್ತು. ಏಕ ಭಾರತ, ಶ್ರೇಷ್ಠ ಭಾರತ ದೃಷ್ಟಿಕೋನ ಹೊಂದಿದ್ದ ವ್ಯಕ್ತಿಯನ್ನು ಸ್ಮರಿಸಿದರೆ ರಾಜಕೀಯ ಕನ್ನಡಕ ಹಾಕಿಕೊಂಡು ಲೇವಡಿ ಮಾಡುತ್ತಾರೆ. ದೇಶ ಕಟ್ಟಿದ ಮಹಾಪುರುಷರನ್ನು ನೆನಪಿಸಿಕೊಳ್ಳುವುದು ತಪ್ಪೇ ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು. ಈ ಪ್ರತಿಮೆ ದೇಶದ ಏಕತೆಯನ್ನು ಸಾರಲಿದೆ. ಪಟೇಲರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಿದೆ. ಏಕ ಭಾರತ, ಶ್ರೇಷ್ಠ ಭಾರತ ಎನ್ನುವ ಅವರ ಕನಸನ್ನು ನನಸಾಗಿಸಬೇಕಿದೆ. ಭಾರತವನ್ನು ಟೀಕಿಸುವ, ಮೂದಲಿಸುವರಿಗೆ ಈ ಪ್ರತಿಮೆಯು ಉತ್ತರವಾಗಿದೆ. ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಟೀಕಾಕಾರರಿಗೆ ಮೋದಿ ಉತ್ತರಿಸಿದರು. ಕಳೆದ ನಾಲ್ಕೂವರೆ ವರ್ಷದಲ್ಲಿ ಎನ್​ಡಿಎ ಸರ್ಕಾರ ದೇಶದ ಮಹಾನ್ ನಾಯಕರನ್ನು ಸ್ಮರಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಪಂಚತೀರ್ಥ ಹಾಗೂ ಸ್ಮಾರಕ, ಛತ್ರಪತಿ ಶಿವಾಜಿ ಪ್ರತಿಮೆ, ನೇತಾಜಿ ಸುಭಾಷ್​ಚಂದ್ರ ಬೋಸ್ ವಸ್ತು ಸಂಗ್ರಹಾಲಯ ನಿರ್ವಿುಸಲಾಗಿದೆ. ಆದಾಗ್ಯೂ ರಾಜಕೀಯ ದೃಷ್ಟಿಕೋನದಲ್ಲೇ ನೋಡುತ್ತಾರೆ ಎಂದು ಮೋದಿ ಹೇಳಿದರು. ದೇಶ ಒಡೆಯುವ ಷಡ್ಯಂತ್ರಕ್ಕೆ ಪಟೇಲ್ ಅಡ್ಡಿಯಾಗಿ ನಿಂತರು. ದೇಶವನ್ನು ಒಗ್ಗೂಡಿಸಿ ಮುನ್ನಡೆಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಮ್ಮ ಸರ್ಕಾರ ಸಾಗಿದ್ದು, ದೇಶದ ತೆರಿಗೆ ವ್ಯವಸ್ಥೆಯನ್ನು ಏಕೀಕೃತಗೊಳಿಸಿ ಜಿಎಸ್​ಟಿ ಜಾರಿ ಮಾಡಲಾಗಿದೆ. ಕೇಂದ್ರದ ಪ್ರತಿ ಯೋಜನೆಗಳು ದೇಶದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿದೆ ಎಂದು ಪ್ರಧಾನಿ ಹೇಳಿದರು.

ಗೈರಾದ ಬಿಜೆಪಿ ಉಕ್ಕಿನ ಮನುಷ್ಯ!

ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಏಕತಾ ಪ್ರತಿಮೆ ಲೋಕಾರ್ಪಣೆಗೆ ಗುಜರಾತ್ ಸಂಸದರೂ ಆಗಿರುವ ಬಿಜೆಪಿ ಉಕ್ಕಿನ ಮನುಷ್ಯ ಎಲ್.ಕೆ. ಆಡ್ವಾಣಿ ಗೈರಾಗಿದ್ದರು. ಆದರೆ ಅವರು ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜನಾಥ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಪಾಲ್ಗೊಂಡಿದ್ದರು.

50 ಲಕ್ಷ ಕೆ.ಜಿ ಉಕ್ಕು ಸಂಗ್ರಹ

ಸಾರ್ವಜನಿಕರಿಂದ ಸುಮಾರು 50 ಲಕ್ಷ ಕೆ.ಜಿ ಉಕ್ಕು ಸಂಗ್ರಹಿಸಲಾಗಿದೆ. ಇದನ್ನು ಹೊರತುಪಡಿಸಿ 24 ಸಾವಿರ ಟನ್ ಉಕ್ಕು, 2.25 ಕೋಟಿ ಕೆ.ಜಿ ಸಿಮೆಂಟ್, 3550 ಟನ್ ಕಂಚನ್ನು ಬಳಸಲಾಗಿದೆ. ಪ್ರತಿಮೆ ನಿರ್ವಣವನ್ನು 3 ವರ್ಷ 9 ತಿಂಗಳಲ್ಲಿ ಒಟ್ಟಾರೆ 2,989 ಕೋಟಿ ರೂ. ವಿನಿಯೋಗಿಸಿ ಅಂತಿಮ ರೂಪ ನೀಡಲಾಗಿದೆ.

93 ವರ್ಷದ ವ್ಯಕ್ತಿಯಿಂದ ವಿನ್ಯಾಸ!

ಪಟೇಲರ ಏಕತಾ ಪ್ರತಿಮೆಯನ್ನು 93 ವರ್ಷದ ರಾಮ್ ವಾಂಜಿ ಸುತಾರ್ ವಿನ್ಯಾಸಗೊಳಿಸಿದ್ದಾರೆ. ಪಟೇಲರ ಸುಮಾರು 2 ಸಾವಿರಕ್ಕೂ ಅಧಿಕ ಚಿತ್ರಗಳನ್ನು ಗಮನಿಸಿ ಈ ವಿನ್ಯಾಸ ಅಂತಿಮಗೊಳಿಸಲಾಗಿದೆ. ಸುಮಾರು 50ಕ್ಕೂ ಅಧಿಕ ಬೃಹತ್ ಪ್ರತಿಮೆಗಳ ವಿನ್ಯಾಸ ಮಾಡಿರುವ ಇವರಿಗೆ 1999ರಲ್ಲಿ ಪದ್ಮಶ್ರೀ ಹಾಗೂ 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಬಂದಿದೆ. ಸಂಸತ್ ಭವನದಲ್ಲಿರುವ ಗಾಂಧಿ ಪ್ರತಿಮೆಯ ವಿನ್ಯಾಸವನ್ನೂ ಇವರೇ ಮಾಡಿರುವುದು ವಿಶೇಷ.

ದಾವಣಗೆರೆ ಇಂಜಿನಿಯರ್

ಏಕತಾ ಪ್ರತಿಮೆ ನಿರ್ವಣದ ಹಿಂದೆ ಕನ್ನಡಿಗನೊಬ್ಬನ ಶ್ರಮವೂ ಇದೆ. ದಾವಣಗೆರೆ ವಿದ್ಯಾನಗರದ ಸಿವಿಲ್ ಇಂಜಿನಿಯರ್ ಕೆ.ಎಂ. ಜಗದೀಶ್ ಪ್ರತಿಮೆ ನಿರ್ವಣದಲ್ಲಿ ಭಾಗಿಯಾಗಿದ್ದಾರೆ. ಕಳೆದೊಂದು ವರ್ಷದಿಂದ ಅವರು ಗುಜರಾತ್​ನಲ್ಲಿದ್ದಾರೆ. ಪ್ರತಿಮೆಗೆ ಬೇಕಾದ ಪರಿಕರಗಳ ಗುಣಮಟ್ಟ ಪರಿಶೀಲಿಸುವ ಹೊಣೆ ಅವರದ್ದಾಗಿತ್ತು. ಗುಜರಾತ್ ಗಾಂಧಿನಗರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್, ಕಂಪ್ಯೂಟರ್ ವಿನ್ಯಾಸ ಮಾಡಿ ಸಲಹೆ ನೀಡುತ್ತಿದ್ದರು. ಒಟ್ಟಾರೆ ಏಕತಾ ಮೂರ್ತಿ ಸ್ಥಾಪನೆಗೆ 250 ಇಂಜಿನಿಯರ್​ಗಳು ಹಾಗೂ 3400 ಕಾರ್ವಿುಕರು ಶ್ರಮಿಸಿದ್ದಾರೆ.