ಎ.ಮಂಜುಗೆ ಪರೋಕ್ಷ ಬೆಂಬಲ

ಅರಕಲಗೂಡು: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಎ.ಮಂಜು ಅವರನ್ನು ಹಿಂಬಾಲಿಸಲು ಅವರ ತವರು ತಾಲೂಕಿನ ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಪಡೆ ನಿರ್ಧರಿಸಿದ್ದು, ಕೆಲವರು ಮಾತ್ರ ಕಾಂಗ್ರೆಸ್‌ನಲ್ಲಿಯೇ ಉಳಿದು ಪರೋಕ್ಷವಾಗಿ ಬೆಂಬಲಿಸುವ ನಡೆ ಅನುಸರಿಸಲು ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪರ್ಧಿಸಿದರಷ್ಟೇ ಬೆಂಬಲ ನೀಡುವುದಾಗಿ ಘೋಷಿಸಿದ್ದ ಮಂಜು, ಗೌಡರ ಮೊಮ್ಮಗ ಪ್ರಜ್ವಲ್ ಕಣಕ್ಕಿಳಿಯುವುದನ್ನು ಬಲವಾಗಿ ವಿರೋಧಿಸುತ್ತಲೇ ಇದ್ದರು. ಇದೀಗ ಪ್ರಜ್ವಲ್ ಅಭ್ಯರ್ಥಿ ಎಂಬುದು ಘೋಷಣೆಯಾದ ಬಳಿಕ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಿಜೆಪಿ ಸೇರಿದ್ದಾರೆ.

ಅವರು ತವರು ತಾಲೂಕು ಅರಕಲಗೂಡಿನಲ್ಲಿ ಕಾಂಗ್ರೆಸ್‌ನ ದೊಡ್ಡ ವರ್ಗ ಎ.ಮಂಜು ಅವರನ್ನು ಅನುಸರಿಸಿ ಬಿಜೆಪಿಗೆ ಜಿಗಿಯಲು ಸಿದ್ಧವಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಜು ಅವರನ್ನು ಬೆಂಬಲಿಸಿ ಪೋಸ್ಟ್‌ಗಳ ಮಹಾಪೂರವೇ ಹರಿಯುತ್ತಿದೆ.

ಇನ್ನೊಂದೆಡೆ ಕೆಲವು ಮುಖಂಡರು ಅಧಿಕೃತವಾಗಿ ಕಾಂಗ್ರೆಸ್ ತೊರೆಯುವುದರಿಂದ ಭವಿಷ್ಯದಲ್ಲಿ ಒಂದು ವೇಳೆ ಮಂಜು ಅವರಿಗೆ ಹಿನ್ನಡೆಯಾದರೆ ತಾವೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎನ್ನುವ ಕಾರಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಒಳಏಟು ನೀಡಿ, ಮಂಜು ಗೆಲುವಿಗೆ ಸಹಕಾರ ನೀಡುವ ತಂತ್ರ ಅನುಸರಿಸುವ ಚಿಂತನೆಯಲ್ಲಿದ್ದಾರೆ.

ಈ ಗುಂಪಿನಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅವರು ಈಗ ಪಕ್ಷಾಂತರ ಮಾಡಲು ಮುಂದಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಚುನಾವಣೆ ಎದುರಿಸಬೇಕಾಗುತ್ತದೆ. ಲೋಕಸಭೆ ಚುನಾವಣೆಗಾಗಿ ಮತ್ತೊಂದು ತೊಂದರೆ ಮೈಮೇಲೆ ಎಳೆದುಕೊಳ್ಳಲು ಬಯಸದ ಅವರು ಮುಸುಕಿನ ಮರೆಯಲ್ಲಿ ಮಂಜು ಬೆಂಬಲಿಸಲು ನಿರ್ಧರಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮೇಲೂ ಗಟ್ಟಿ ಹಿಡಿತ ಸಾಧಿಸಿದ್ದ ಎ.ಮಂಜು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪರೋಕ್ಷವಾಗಿ ಮೈತ್ರಿ ವಿರುದ್ಧ ಅಪಸ್ವರ ಎತ್ತುತ್ತಲೇ ಇದ್ದರು.

ಅವರನ್ನು ಬೆಂಬಲಿಸಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರೂ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಮೈತ್ರಿ ವಿರೋಧಿಸುವ ಎ.ಮಂಜು ಕೈಗೊಳ್ಳುವ ತೀರ್ಮಾನ ಬೆಂಬಲಿಸಲು ಕಾತರರಾಗಿದ್ದರು. ಹೀಗಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿರಳವಾಗಿತ್ತು. ಕೆಲವು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಶಾಸಕರ ಸಮ್ಮುಖದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ಹೊರ ಹೋಗಿದ್ದರು. ಆರಂಭದಿಂದಲೂ ಮುನಿಸಿನಿಂದಲೇ ಕಾಲ ದೂಡುತ್ತಿದ್ದ ಎರಡು ಪಕ್ಷಗಳ ಮುಖಂಡರು ಇದೀಗ ಎ. ಮಂಜು ಅವರ ಬಿಜೆಪಿ ಸೇರ್ಪಡೆಯಿಂದಾಗಿ ಪೂರ್ತಿಯಾಗಿ ಬೇರ್ಪಟ್ಟ ವಾತಾವರಣ ಗೋಚರಿಸಲಾರಂಭಿಸಿದೆ.

ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ಶಾಸಕರಾಗಿದ್ದರೂ ತಾಲೂಕಿನ ಬಹುತೇಕ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅರಕಲಗೂಡು ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಕಾಂಗ್ರೆಸ್ ತೆಕ್ಕೆಯಲ್ಲಿವೆ. ಒಟ್ಟು 36 ಗ್ರಾಮ ಪಂಚಾಯಿತಿಗಳಲ್ಲಿ 30ಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಚುನಾವಣೆಯಲ್ಲಿ ಎ. ಮಂಜು ಅವರ ಪರ ಒಲವು ವ್ಯಕ್ತಪಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.