ಎಸ್.ಬಂಗಾರಪ್ಪ ಪುತ್ಥಳಿಗೆ ಶಂಕುಸ್ಥಾಪನೆ

ಸೊರಬ: ಜನರ ಬಹುದಿನಗಳ ಅಪೇಕ್ಷೆಯಂತೆ ರಾಜ್ಯದಲ್ಲಿಯೆ ಪ್ರಥಮವಾಗಿ ಪಟ್ಟಣದ ಮುಖ್ಯವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ಥಳಿ ನಿರ್ವಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಅತೀವ ಸಂತೋಷ ನೀಡಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಸೋಮವಾರ ಪಟ್ಟಣ ಪಂಚಾಯಿತಿ ಮುಂಭಾಗದ ವೃತ್ತದಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಪುತ್ಥಳಿ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಂಗಾರಪ್ಪ ಅವರು ಈ ನಾಡಿನ ಬಡವರ, ಶೋಷಿತರ ಧ್ವನಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ಷಯ, ಆರಾಧನ, ವಿಶ್ವ, ಶುಶ್ರೂಷಾ, ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಬಡವರ ಬಂಧು ಎನಿಸಿಕೊಂಡಿದ್ದರು. ಹೀಗಾಗಿ ಅವರ 9 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಹಾಗೂ ಆ ಸ್ಥಳದಲ್ಲಿ ಉದ್ಯಾನ ನಿರ್ವಣಕ್ಕೆ 1 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಈಗಾಗಲೆ 25 ಲಕ್ಷ ರೂ. ಅನುದಾನವನ್ನು ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ ಮೀಸಲಿಡಲಾಗಿದೆ. ಈ ಕಾರ್ಯ ಇಂದು ಕೈಗೂಡಿರುವುದು ಜನತೆಗೆ ಹಾಗೂ ಅಭಿಮಾನಿಗಳಿಗೆ ಸಂತೋಷ ತಂದಿದೆ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಬಂಗಾರಪ್ಪ ಅವರು ನಾಡಿನ ಜನತೆಗೆ ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ನಾಯಕನ ಪುತ್ಥಳಿಯನ್ನು ಕೆಲವೆ ತಿಂಗಳುಗಳಲ್ಲಿ ನಿರ್ವಿುಸಿ ಆ ಮೂಲಕ ಬಂಗಾರಪ್ಪ ಅವರ ಚಿಂತನೆ, ಆದರ್ಶಗಳನ್ನು ಜನರು ಸ್ಮರಿಸುವುದಕ್ಕೆ ಅನುಕೂಲವಾಗುತ್ತದೆ ಎಂದರು.

ಪಪಂ ಅಧ್ಯಕ್ಷೆ ಬೀಬೀ ಜುಲೇಖಾ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಜಿಪಂ ಸದಸ್ಯ ಸತೀಶ್, ಎಂ.ಅರ್ಜುನಪ್ಪ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಸದಸ್ಯರಾದ ನಾಗರಾಜ್ ಚಿಕ್ಕಸವಿ, ಪುರುಷೋತ್ತಮ್ ಪಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎಂ.ಡಿ.ಉಮೇಶ್, ಮಂಚಿ ಹನುಮಂತಪ್ಪ, ಮಹೇಶ್​ಗೌಳಿ, ಪ್ರಶಾಂತ್ ಮೇಸ್ತ್ರಿ, ಡಿ.ಆರ್.ಶ್ರೀಧರ್, ಮೆಹಬೂಬಿ, ಮುಖ್ಯಾಧಿಕಾರಿ ಜಗದೀಶ್ ನಾಯ್್ಕ ಶೆಲ್ಜಾ, ಕುಮಾರ್ ಬಂಗಾರಪ್ಪ ಅವರ ಪತ್ನಿ ವಿದ್ಯುಲ್ಲತಾ, ಮಗ ಅರ್ಜುನ್, ಮಗಳು ಲಾವಣ್ಯ ಇತರರಿದ್ದರು.