ಎಸ್​ಟಿ ಮತ ಸೆಳೆಯಲು ಲಗ್ಗೆ

ಕುಂದಗೋಳ: ವಾಲ್ಮೀಕಿ ಸಮುದಾಯದ ಮತದಾರರ ಮತ ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಅದೇ ಸಮುದಾಯದ ಮುಖಂಡರು ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ, ಬುಧವಾರ ಮತ ಭೇಟೆ ಆರಂಭಿಸಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ಅಂಚಟಗೇರಿ, ಕರಡಿಕೊಪ್ಪ, ಮಾವನೂರು, ಬೆಟದೂರು ಸೇರಿ ಇತರೆ ಗ್ರಾಮಗಳಿಗೆ ತೆರಳಿ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಮತಬೇಟೆ ಆರಂಭಿಸಿದರು. ಇನ್ನೊಂದೆಡೆ ಸಚಿವ ಸತೀಶ ಜಾರಕಿಹೊಳಿ ಅಂಚಟಗೇರಿ, ಅದರಗುಂಚಿ, ಕುಂದಗೋಳಕ್ಕೆ ತೆರಳಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮತ ಪ್ರಚಾರ ನಡೆಸಿದರು. ಇವರೊಟ್ಟಿಗೆ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ ಆಗಮಿಸಿದ್ದರು. ಕೆಲವೆಡೆ ರೋಡ್ ಶೋ ಹಾಗೂ ಮನೆ ಮನೆಗೆ ಭೇಟಿ ನೀಡಿ, ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಬೆನಕನಹಳ್ಳಿ, ಹಿರೇನರ್ತಿ, ಬಸಾಪುರ, ಸಂಶಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಶುಪತಿಹಾಳ, ಕೆರೆಬೂದಿಹಾಳ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಸಂಸದ ಪ್ರಲ್ಹಾದ ಜೋಶಿ, ಕುಂದಗೋಳದಲ್ಲಿ ರೋಡ್ ಶೋ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಕ್ಷೇತ್ರ ವ್ಯಾಪ್ತಿಯ ರಾಮನಕೊಪ್ಪ ಇತರೆಡೆ ಪ್ರಚಾರ ನಡೆಸಿದರು.

ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಪುತ್ಥಳಿಗೆ ಮಾಲಾರ್ಪಣೆ: ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರಕ್ಕೆ ಬೆಟದೂರಿಗೆ ಆಗಮಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು, ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಗ್ರಾಮದ ಬೀದಿ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೇ ಪ್ರಧಾನಿ ಮೋದಿ ಅವರು ಮಾಡಿದ ಸಾಧನೆಗಳ ಕುರಿತು ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ, ಮುಖಂಡ ಎಂ. ಆರ್. ಪಾಟೀಲ ಜೊತೆಗಿದ್ದರು.

ಶ್ರೀರಾಮುಲುಗೆ ತೀವ್ರ ಜ್ವರ: ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲುಗೆ ತೀವ್ರ ಜ್ವರ, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಟದೂರು ಗ್ರಾಮದಲ್ಲಿ ರೋಡ್ ಶೋ ಕೊನೆಗೊಳಿಸಿದರು. ಮೊದಲು ಅಂಚಟಗೇರಿಯಲ್ಲಿ ಸ್ವಲ್ಪ ಜ್ವರವಿತ್ತು. ಕರಡಿಕೊಪ್ಪ, ಬೆಟದೂರು, ಮಾವನೂರು ಗ್ರಾಮದಲ್ಲಿ ರೋಡ್​ಶೋ ನಡೆಸಿದೆ. ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದು ಬಳ್ಳಾರಿಗೆ ತೆರಳುವೆ. ಎರಡು ದಿನ ಬಿಟ್ಟು ಮತ್ತೆ ಆಗಮಿಸಿ ಚಿಕ್ಕನಗೌಡ್ರ ಪರ ಪ್ರಚಾರ ನಡೆಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.

p>

Leave a Reply

Your email address will not be published. Required fields are marked *