ಎಸ್​ಟಿ ಜನಾಂಗಕ್ಕೆ ಶೇ.7.5 ಮೀಸಲಾತಿಗೆ ಒತ್ತಾಯ

ಶಿರಹಟ್ಟಿ: ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ಪರಿಶಿಷ್ಟ ಪಂಗಡ ಜನಾಂಗಕ್ಕೆ ಶೇ.7.5 ಮೀಸಲಾತಿ ಕಲ್ಪಿಸಬೇಕು ಎಂದು ತಾಲೂಕಿನ ಪರಿಶಿಷ್ಠ ಪಂಗಡದ ಸಮುದಾಯದವರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ, ಮಂಜುನಾಥ ಶಂಕಿನದಾಸರ, ಮಾತನಾಡಿ, 1991ರಲ್ಲಿ ಚೆನ್ನಪ್ಪಗೌಡ ಆಯೋಗದ ವರದಿಯ ಶಿಫಾರಸಿನಂತೆ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಶೇ. 7.5 ಮೀಸಲಾತಿ ಕಲ್ಪಿಸಿದೆ. ಆದರೆ, ರಾಜ್ಯ ಸರ್ಕಾರ ಎಸ್​ಟಿ ಸಮುದಾಯಕ್ಕೆ ರಾಜಕೀಯವಾಗಿ ಮಾತ್ರ ಶೇ. 7.5 ಮೀಸಲಾತಿ ನೀಡುತ್ತಿರುವುದರಿಂದ ಇತರ ಸೌಲಭ್ಯ ಪಡೆಯಲು ದುಸ್ತರವಾಗಿದೆ. ಹೀಗಾಗಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲೂ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಜೂ. 9 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ’ ಎಂದರು.

ಶಿರಸ್ತೇದಾರ ಪಿ.ಎಂ. ಕಲಗುಡಿ ಮನವಿ ಸ್ವೀಕರಿಸಿದರು. ಬಸವರಾಜ ನಾಯ್ಕರ, ಡಿ.ಆರ್. ಕೆಂಚಕ್ಕನವರ, ರಮೇಶ ಗುಳೇದ, ದೇವಪ್ಪ ತಳವಾರ, ಪಕ್ಕಣ್ಣ ಕುಸ್ತಿ, ಮಲ್ಲನಗೌಡ ಪಾಟೀಲ, ಚಂದ್ರು ತಳವಾರ, ಪರಶುರಾಮ ಕಟಗಿ, ಕಿರಣ ಹಾದಿಮನಿ, ಬಸವರಾಜ ಬುರಡಿ, ನಾಗಪ್ಪ ಓಲೇಕಾರ, ಸೋಮಣ್ಣ ಶಿರಹಟ್ಟಿ, ಚಂದ್ರು ಪರಸಣ್ಣವರ ಇತರರು ಇದ್ದರು.

Leave a Reply

Your email address will not be published. Required fields are marked *