ಎಸ್​ಎಸ್​ಎಲ್​ಸಿ ಪರೀಕ್ಷೆ 21ರಿಂದ

ಶಿವಮೊಗ್ಗ: ರಾಜ್ಯಾದ್ಯಂತ ಮಾ.21ರಿಂದ ಏ.4ವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 83 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 24,615 ವಿದ್ಯಾರ್ಥಿಗಳಿದ್ದಾರೆ. 12,446 ವಿದ್ಯಾರ್ಥಿಗಳು ಹಾಗೂ 12,169 ವಿದ್ಯಾರ್ಥಿನಿಯರಿದ್ದಾರೆ.

ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರು ಸೇರಿ ಅಧಿಕಾರಿಗಳ ತಂಡ ರಚಿಸಲಾಗಿದೆ.

ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷಾ ಕಾರ್ಯದ ಸಿಬ್ಬಂದಿ ಗೊಂದಲ ಮಾಡಿಕೊಳ್ಳದೆ ನಿರಾತಂಕವಾಗಿ ಜವಾಬ್ದಾರಿ ನಿರ್ವಹಿಸಲು ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಸಾಮಗ್ರಿಗಳು ಹಾಗೂ ಉತ್ತರ ಪತ್ರಿಕೆಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷೆ ನಡೆಯುವ ದಿನ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಜನರು ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಡಿಸಿ ಕೆ.ಎ.ದಯಾನಂದ ಆದೇಶಿಸಿದ್ದಾರೆ.

ಪರೀಕ್ಷಾರ್ಥಿ, ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳ ಹೊರತುಪಡಿಸಿ ಇತರರು ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಐದು ಹಾಗೂ ಐದಕ್ಕಿಂತ ಹೆಚ್ಚು ಜನರು ನಿಷೇಧಿತ ಪ್ರದೇಶ ವ್ಯಾಪ್ತಿಯಲ್ಲಿ ಸೇರುವುದು ಹಾಗೂ ಯಾವುದೇ ರೀತಿ ಘೊಷಣೆ ಕೂಗುವುದನ್ನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ ಟೈಪಿಂಗ್, ಜೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ತೆರೆಯುವಂತಿಲ್ಲ ಹಾಗೂ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಕ್ಕೆ ಜಾಗೃತ ದಳ:ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳ ಮೊಬೈಲ್ ಸ್ಕಾ್ವಡ್ ಕಾರ್ಯ ನಿರ್ವಹಿಸಲಿದೆ. ಎಲ್ಲ ತಾಲೂಕುಗಳಲ್ಲಿ 7 ಜಿಲ್ಲಾ ಹಂತದ ಜಾಗೃತ ದಳ ನೇಮಿಸಲಾಗಿದೆ. ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ರವಾನೆ ಆಗುವವರೆಗೂ ವಿಡಿಯೋ ಚಿತ್ರೀಕರಣವಾಗುತ್ತದೆ. ಅಕ್ರಮಕ್ಕೆ ಅವಕಾಶವಿಲ್ಲದಂತೆ ಅಗತ್ಯ ವೀಕ್ಷಕರನ್ನು ನೇಮಿಸಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 7 ಮೌಲ್ಯಮಾಪನ ಕೇಂದ್ರಗಳಲ್ಲಿ ವಿಷಯವಾರು ಮೌಲ್ಯಮಾಪನ ಕಾರ್ಯ ನಡೆಯಲಿದೆ. ಜಿಲ್ಲಾ ಹಂತದಲ್ಲಿ ಉತ್ತರ ಪತ್ರಿಕೆಗಳನ್ನು ಭದ್ರತಾ ಕೊಠಡಿಯಲ್ಲಿ ಸಂರಕ್ಷಿಸಲು ಪೊಲೀಸ್ ಬಂದೋಬಸ್ತ್್ತೊಂದಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.