ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಗುಣಾತ್ಮಕ ಕಲಿಕೆಗೆ ಆದ್ಯತೆ: ಪ್ರಶ್ನೆಗಳ ಸಂಖ್ಯೆ 40ರಿಂದ 38ಕ್ಕೆ ಇಳಿಕೆ

ಬೆಂಗಳೂರು: ಗುಣಾತ್ಮಕ ಕಲಿಕೆಗೆ ಒತ್ತು ನೀಡಿ ಸಾಮೂಹಿಕ ನಕಲನ್ನು ತಡೆಯುವ ಉದ್ದೇಶದಿಂದ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್​ಇಇಬಿ) 2020ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಅಲ್ಪಮಟ್ಟಿಗೆ ಬದಲಾವಣೆ ತರಲು ನಿರ್ಧರಿಸಿದೆ.

ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆಯನ್ನು 40ರಿಂದ 38ಕ್ಕೆ ಇಳಿಕೆ ಮಾಡಲಾಗಿದೆ. ಘಟಕವಾರು ಅಂಕಗಳ ಹಂಚಿಕೆ ಪದ್ಧತಿಯನ್ನು ಕೈಬಿಟ್ಟು ಮುಖ್ಯಾಂಶ ಇಲ್ಲವೇ ವಿಷಯಾಧಾರಿತ ಪ್ರಶ್ನೆಪತ್ರಿಕೆಯನ್ನು ರೂಪಿಸಲು ಮಂಡಳಿ ತೀರ್ವನಿಸಿದೆ.

ವಿಷಯಧಾರಿತ ಪತ್ರಿಕೆ: ಈವರೆಗೆ ಘಟಕವಾರು ಪ್ರಶ್ನೆಗಳ ಹಂಚಿಕೆಗೆ ಒತ್ತು ನೀಡಲಾಗುತ್ತಿತ್ತು. ಇದರಿಂದ ಶಿಕ್ಷಕರು ಕಡಿಮೆ ಅಂಕಗಳ ಬದಲಿಗೆ ಹೆಚ್ಚು ಅಂಕಗಳಿಗೆ ಕೇಳುವ ಪ್ರಶ್ನೆಗಳ ಪಾಠಗಳನ್ನು ಮಾತ್ರವೇ ಬೋಧಿಸುತ್ತಿದ್ದರು. 2020ರಿಂದ ವಿಷಯಾಧಾರಿತ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಜ್ಞಾನ ಗ್ರಹಣ ಮತ್ತು ಪಠ್ಯಕ್ಕೆ ಸಂಬಂಧಿಸಿದ ಸ್ಮರಣೆ, ಗ್ರಹಿಕೆ, ಅಭಿವ್ಯಕ್ತಿ ಮತ್ತು ಬರವಣಿಗೆಯ ಕೌಶಲ, ಪ್ರಶಂಸೆ, ಅನ್ವಯ ತಿಳಿವಳಿಕೆಗೆ ಮಹತ್ವ ನೀಡಲಾಗುತ್ತದೆ. ಹೊಸ ಪದ್ಧತಿಯಲ್ಲಿ ಎಲ್ಲ ಪಾಠಗಳಿಗೂ ಪ್ರಾಮುಖ್ಯತೆ ನೀಡಿರುವುದರಿಂದ ಶಿಕ್ಷಕರು ಎಲ್ಲ ಪಾಠಗಳನ್ನು ಬೋಧನೆ ಮಾಡಬೇಕಾಗುತ್ತದೆ.

ಕಂಠಪಾಠಕ್ಕೆ ಮುಕ್ತಿ: ಪ್ರಮುಖವಾಗಿ ಕಂಠಪಾಠ ಮಾಡುವ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಮುಕ್ತಿ ನೀಡಿ, ರ್ತಾಕ ಚಿಂತನೆಯನ್ನು ಮೂಡಿಸಲು ಈ ಪದ್ಧತಿ ಸಹಾಯ ಮಾಡಲಿದೆ. ಅಲ್ಲದೆ, ಸಾಮೂಹಿಕ ನಕಲನ್ನು ತಡೆಯಬಹುದಾಗಿದೆ. ಬರವಣಿಗೆಯ ಕೌಶಲ, ಅಭಿವ್ಯಕ್ತಿ ಕೌಶಲ ಬೆಳವಣಿಗೆಗೆ ಕಾರಣವಾಗಲಿದೆ. ಶಿಕ್ಷಕರಲ್ಲೂ ಬೋಧನಾ ನಾವೀನ್ಯತೆ ಬಳಸಿ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಿದೆ.

5 ಅಂಕದ ಪ್ರಶ್ನೆ ಸೇರ್ಪಡೆ

ಬಹು ಆಯ್ಕೆಯ ಪ್ರಶ್ನೆಗಳು, ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 2 ಅಂಕದ ಪ್ರಶ್ನೆಯ ಸಂಖ್ಯೆಯನ್ನು 8ರಿಂದ 4ಕ್ಕೆ ಮತ್ತು 3 ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಹೆಚ್ಚಳ ಮಾಡಿದೆ. ಹೊಸದಾಗಿ 5 ಅಂಕದ ಪ್ರಶ್ನೆ ಸೇರಿಸಲಾಗಿದೆ. ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *