ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 21ರಿಂದ ಆರಂಭವಾಗಿ ಏ. 4ರ ವರೆಗೂ ನಡೆಯಲಿದ್ದು, ಪರೀಕ್ಷಾ ದಿನಗಳಂದು ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ಸಾಗಿಸಲು ಈಗಾಗಲೇ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ 24,416 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಪಾರದರ್ಶಕತೆ ಕಾಪಾಡಲು ಚಿತ್ರದುರ್ಗ ಜಿಪಂ ಕಚೇರಿಯಲ್ಲಿ ಕೇಂದ್ರೀಕೃತ ವೀಕ್ಷಣಾ ಘಟಕ ಸ್ಥಾಪಿಸಲಾಗಿದೆ. ಇಲ್ಲಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 24 ಅಧಿಕಾರಿ, ಸಿಬ್ಬಂದಿ ಒಳಗೊಂಡ ನೋಡಲ್ ಅಧಿಕಾರಿಗಳು ಮತ್ತು ವೀಕ್ಷಕರ ತಂಡ ರಚಿಸಲಾಗಿದೆ. ಇದರ ಜೊತೆಗೆ ತಾಂತ್ರಿಕ ಸಹಾಯಕರನ್ನು ಕೂಡ ನಿಯೋಜಿಸಲಾಗಿದೆ. 82 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1,135 ಕೊಠಡಿಗಳಿವೆ. ಎಲ್ಲೆಡೆ ವೆಬ್‌ಕಾಸ್ಟಿಂಗ್‌ಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ವಿತರಣೆ, ಉತ್ತರ ಪತ್ರಿಕೆಗಳನ್ನು ಹಿಂಪಡೆದು ಸೂಕ್ತ ಸ್ಥಳಕ್ಕೆ ರವಾನಿಸಲು 35 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಭದ್ರತೆಗಾಗಿ ಈ ತಂಡಕ್ಕೆ ಸಶಸ್ತ್ರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ತಜ್ಞರನ್ನು ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯೊಂದಿಗೆ ನಿಯೋಜಿಸಲಾಗಿದೆ. ಸುರಕ್ಷತಾ ಹಿತದೃಷ್ಟಿ, ಅಕ್ರಮ ತಡೆಯಲು ಜಿಲ್ಲೆಯ ಎಲ್ಲ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಸಮಯದಲ್ಲಿ ವಿದ್ಯುತ್ ಅಡಚಣೆ ಆಗದಂತೆ ಬೆಸ್ಕಾಂಗೆ ನಿರ್ದೇಶಿಸಲಾಗಿದೆ. ಸುಗಮ, ವ್ಯವಸ್ಥಿತ ರೀತಿಯಲ್ಲಿ ನಡೆಸುವ ಉದ್ದೇಶದಿಂದ ಗೊಂದಲಕ್ಕೆ ಅವಕಾಶವಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಕೈಗೊಂಡು ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.
ವೇಳಾಪಟ್ಟಿ: ಮಾ. 21ರಂದು ಪ್ರಥಮ ಭಾಷೆ. 24ರಂದು ಗಣಿತ, 26ರಂದು ಇಂಗ್ಲೀಷ್, 29ರಂದು ಸಮಾಜ ವಿಜ್ಞಾನ, ಏ. 2ರಂದು ವಿಜ್ಞಾನ, 4ರಂದು ಹಿಂದಿ+ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬೆಳಗ್ಗೆ 10ರಿಂದ ಆರಂಭವಾಗಲಿದೆ.
ತಾಲೂಕುವಾರು ಅಂಕಿ-ಅಂಶ: ತಾಲೂಕು, ಪರೀಕ್ಷಾ ಕೇಂದ್ರ, ವಿದ್ಯಾರ್ಥಿಗಳ ಸಂಖ್ಯೆಯ ಮಾಹಿತಿ ಇಲ್ಲಿದೆ. ಚಳ್ಳಕೆರೆ-20-5,472. ಚಿತ್ರದುರ್ಗ-22-6,635. ಹಿರಿಯೂರು-13-3,677. ಹೊಳಲ್ಕೆರೆ-08-2,854. ಹೊಸದುರ್ಗ-11-3,195. ಮೊಳಕಾಲ್ಮೂರು-08-2,583.
