ರೋಣ: ಮಾರ್ಚ್ ಕೊನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ‘ಓದಿನ ಮನೆ’ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ.
ಶಾಲಾ ಬಿಡುವಿನ ಸಮಯ ಮತ್ತು ರಾತ್ರಿ ವೇಳೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಓದುವ ಸಲುವಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಓದಿನ ಮನೆ ಯೋಜನೆ ಕಾರ್ಯರೂಪಕ್ಕೆ ತಂದಿದೆ. ಪಟ್ಟಣದ ಶರಣ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಹಗಲು-ರಾತ್ರಿ ‘ಓದಿನ ಮನೆ’ ಕಾರ್ಯಾರಂಭಿಸಿದೆ.
ಶಾಲೆಯಲ್ಲಿ ಬೆಳಗ್ಗೆ 9ರಿಂದ 10 ಗಂಟೆಯವರೆಗೆ ವಿಶೇಷ ತರಗತಿ, ಸಂಜೆ 7ರಿಂದ 9 ಗಂಟೆಯವರೆಗೆ ಗುಂಪು ಅಧ್ಯಯನ ನಡೆಸಲಾಗುತ್ತದೆ. ಈ ಓದಿನ ಮನೆಗೆ ಡಿಡಿಪಿಐ ನಾಗನೂರ ಖುದ್ದಾಗಿ ಭೇಟಿ ನೀಡಿ ಪರೀಕ್ಷೆಗೆ ಯಾವ ರೀತಿ ಪೂರ್ವತಯಾರಿ ಮಾಡಬೇಕು ಎಂಬ ಕುರಿತು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಸಂಜೆ ವೇಳೆ ಕೆಲವರ ಮನೆಗಳಲ್ಲಿ ವಿದ್ಯುತ್ ಹಾಗೂ ಇನ್ನಿತರ ಸಮಸ್ಯೆಗಳು ಸಹಜ. ಅದರಲ್ಲೂ ಧಾರಾವಾಹಿಗಳ ಕಿರಿಕಿರಿ ಬೇರೆ. ಹೀಗಾಗಿ ಮಕ್ಕಳ ಅಧ್ಯಯನಕ್ಕೆ ಶಾಲೆಗಳಲ್ಲಿಯೇ ಮಕ್ಕಳ ಓದಿಗಾಗಿ ‘ಓದಿನ ಮನೆ’ ಹೆಸರಲ್ಲಿ ಕೊಠಡಿ ಸ್ಥಾಪಿಸಿ ಅನುಕೂಲ ಮಾಡಿಕೊಡಲಾಗಿದೆ.
ಶಾಲೆಯ ಬಹುತೇಕ ಶಿಕ್ಷಕರು ತಮ್ಮ ಶಾಲಾವಧಿಯ ಬಳಿಕ ಸೇವಾ ಮನೋಭಾವದಿಂದ ಸ್ವಯಂಪ್ರೇರಿತವಾಗಿ ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದಾರೆ ಎಂದು ಶರಣ ಬಸವೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪಿ.ಎನ್. ಹಿರೇಮಠ ಹೇಳಿದರು.
ಓದಿನ ಮನೆಯಿಂದಾಗಿ ಪರೀಕ್ಷಾ ಭಯ ದೂರವಾಗಿದೆ. ಇಲ್ಲಿ ಕಳೆದ 10 ವರ್ಷಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬಗ್ಗೆ ಗುಂಪು ಚರ್ಚೆ ನಡೆಯುತ್ತದೆ. ಪಾಠ ಪುನರಾವರ್ತನೆ, ಸ್ವಕಲಿಕೆ ಸಹಕಾರಿಯಾಗಿದೆ.
| ಕಾಜಲ್ ಗೌರಾಳ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ
ಜಿಲ್ಲೆಯ ಬಹುತೇಕ ಪ್ರೌಢ ಶಾಲೆಗಳಲ್ಲಿ ‘ಓದಿನ ಮನೆ’ ಪ್ರಾರಂಭವಾಗಿದೆ. ಹೀಗಾಗಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಸುಧಾರಣೆಯಾಗಲಿದೆ ಎಂಬ ಆಶಾಭಾವವಿದೆ.
| ಎನ್. ಎಚ್. ನಾಗನೂರ ಡಿಡಿಪಿಐ