More

    ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಖಂಡಿಸಿ ಪ್ರತಿಭಟನೆ

    ಹಾಸನ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ 11 ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಎಸ್ಸಿ-ಎಸ್ಟಿ ಮೋರ್ಚಾದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಎನ್.ಮಹೇಶ್, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ಧರಣಿ ನಡೆಸಿ ಕಾಂಗ್ರೆಸ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ದಲಿತ ಹಾಗು ಹಿಂದುಳಿದ ವರ್ಗದ ವಿರೋಧಿಯಾಗಿ ವರ್ತನೆ ಮಾಡುತ್ತಿದೆ. ದಲಿತರಿಗೆ ಮೀಸಲಿಟ್ಟ ಹಣವನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ. ಕೂಡಲೇ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಮೀಸಲಿಡುವಂತೆ ಆಗ್ರಹಿಸಿದರು.
    ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಾಗಿ ಶೇ.24.10ರಷ್ಟು ಅಂದರೆ 34,293 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಅನುಷ್ಠಾನ ಸಭೆಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಈ ಅನುದಾನದಲ್ಲಿ 11,144 ಕೋಟಿ ರೂ. ತೆಗೆದಿಟ್ಟಿದ್ದಾರೆ ಎಂದು ಆರೋಪಿದರು.
    ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಇರುವುದು ಎಸ್ಸಿ-ಎಸ್ಟಿ ಸಮುದಾಯಗಳ ಜನರ ಆರ್ಥಿಕ, ಶೈಕ್ಷಣಿಕ, ಮೂಲಭೂತ ಸೌಕರ್ಯ ಒದಗಿಸಲು. ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ಸೀಮಿತವಾಗಿದ್ದು, ಎಸ್ಸಿ-ಎಸ್ಟಿಗಳಿಗೆ ಮಾತ್ರ ಘೋಷಣೆ ಮಾಡಿರುವ ಯೋಜನೆಗಳಲ್ಲ. ಗ್ಯಾರಂಟಿಗಳನ್ನು ನೀವು ಸಾಮಾನ್ಯ ಅನುದಾನದಲ್ಲಿ ಕೊಡಬೇಕಿತ್ತು. ಆದರೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಏಕೆ ಬಳಕೆ ಮಾಡಿಕೊಳ್ಳುತ್ತಿದ್ದೀರಿ, ಇದು ದಲಿತ ಸಮುದಾಯದ ಅಭಿವೃದ್ಧಿಗೆ ಮಾರಕವಾಗುತ್ತದೆ. ಇದು ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಪ್ರಕಾರ ಅಪರಾಧ ಆಗುತ್ತದೆ. ಇದು ಕಾಂಗ್ರೆಸ್ ಸರ್ಕಾರ ದಲಿತರಿಗೆ ಮಾಡುತ್ತಿರುವುದು ಮೋಸ. ಆದ್ದರಿಂದ ಈ ಹಣವನ್ನು ವಾಪಸ್ ನೀಡಬೇಕು ಎಂದು ಒತ್ತಾಯಿಸಿದರು.
    ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದಲ್ಲಿ ದಲಿತರಿಗೆ ಮೋಸ ಮಾಡುವವರು ಯಾರಾದರು ಇದ್ದರೆ ಅದು ಕಾಂಗ್ರೆಸ್‌ನವರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಉದ್ಧಾರ ಆಗುತ್ತಾರೆ ಎಂಬ ನಂಬಿಕೆ ಸುಳ್ಳಾಗಿದೆ. ಎಷ್ಟೋ ದಲಿತ ಯುವಕರು ಉದ್ಯೋಗವಿಲ್ಲದೆ, ಸ್ವ-ಉದ್ಯೋಗ ನಡೆಸಲು ಹಲವು ನಿಗಮ ಮಂಡಳಿಗಳಲ್ಲಿ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಆದರೆ, ಅವರಿಗಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ದಲಿತರ ಪರವಾಗಿದ್ದರೆ 11 ಸಾವಿರ ಕೋಟಿ ರೂ. ಜತೆಗೆ ಇನ್ನೂ 5 ಸಾವಿರ ಕೋಟಿ ರೂ. ಸೇರಿಸಿ ವಾಪಸ್ ಆ ಇಲಾಖೆಗೆ ನೀಡಬೇಕು ಎಂದು ಒತ್ತಾಯಿಸಿದರು.
    ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಒಂದು ಮಾತು, ಇದ್ದಾಗ ಒಂದು ಮಾತು ಆಡುತ್ತಿದೆ. ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆಗೆ ಮಾಡಿ, ದಲಿತರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಬಂಡವಾಳಶಾಹಿಗಳ ಜತೆಗೆ ಸೇರಿಕೊಂಡು ರಾಜ್ಯವನ್ನು ಲೂಟಿ ಮಾಡಲು ನಿಂತಿದೆ. ಗ್ಯಾರಂಟಿಗಳನ್ನು ಘೋಷಣೆ ಮಾಡಿರುವುದು ನಿಮ್ಮ ಜನಪ್ರಿಯತೆಗಾಗಿ ಹೊರತು ಬಡವರ ಉದ್ಧಾರಕ್ಕೆ ಅಲ್ಲ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ತೆಗೆದುಕೊಂಡಿರುವ 11 ಸಾವಿರ ಕೋಟಿ ರೂ. ಹಣವನ್ನು ವಾಪಸ್ ನೀಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು.
    ಪ್ರತಿಭಟನೆಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರು, ಎಸ್ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್, ಜಾನಕೆರೆ ಲೋಕೇಶ್, ಮುಖಂಡರಾದ ವೇಣುಗೋಪಾಲ್, ಲೋಹಿತ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts