ಕೊಡೇಕಲ್: ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮದಲ್ಲಿ ಸವರ್ಣೀಯರು ದಲಿತರ ಮೇಲೆ ಹಾಕಿರುವ ಸಾಮಾಹಿಕ ಬಹಿಷ್ಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ನೇತೃತ್ವದ ಶಾಂತಿಸಭೆಯಲ್ಲಿ ಹಿಂದಕ್ಕೆ ಪಡೆಯುವ ಮೂಲಕ ಯಶಸ್ವಿಯಾಗಿದೆ ಎಂದು ಡಿವೈಎಸ್‌ಪಿ ಜಾವೀದ್ ಇನಾಂದಾರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಸವರ್ಣೀಯರು ದಲಿತರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಭೇಟಿ ನೀಡಿ, ನಡೆಸಿದ ಶಾಂತಿಸಭೆ ಯಶಸ್ವಿಯಾಗಿದೆ. ಸವರ್ಣೀಯರು ಹಾಕಿರುವ ಈ ಬಹಿಷ್ಕಾರ ಹಿಂದಕ್ಕೆ ಪಡೆಯುವ ಮೂಲಕ ಮೊದಲಿನಂತೆ ಅಣ್ಣ-ತಮ್ಮಂದಿರ ಹಾಗೆ ಬಾಳುವುದಾಗಿ ಪರಸ್ಪರ ಎರಡು ಸಮುದಾಯದ ಜನರು ಒಪ್ಪಿಕೊಂಡು ಹಸ್ತಲಾಘವ ಮಾಡಿದ್ದಾರೆ ಎಂದು ಅವರು ಹೇಳಿದರು.
ಶುಕ್ರವಾರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ ಎಸ್‌ಪಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಆರಂಭದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಪಾಲಕರ ಜತೆ ಸುಧೀರ್ಘವಾಗಿ ಸಮಾಲೋಚನೆ ನಡೆಸುವ ಮೂಲಕ ಘಟನೆ ಕುರಿತು ಮಾಹಿತಿ ಕಲೆ ಹಾಕಿದರು. ತಡ ರಾತ್ರಿಯವರೆಗೂ ಸವರ್ಣಿಯರ ಮತ್ತು ದಲಿತ ಸಮುದಾಯ ಪ್ರಮುಖರ ಜತೆ ಘಟನೆಯ ಎಲ್ಲ ಆಯಾಮಗಳನ್ನು ತಿಳಿದುಕೊಂಡರು. ನಂತರ ಎಸ್‌ಪಿ ಸಂಗೀತಾ ನೇತೃತ್ವದಲ್ಲಿ ಎರಡು ಸಮುದಾಯಗಳ ಮುಖಂಡರ ಸಭೆ ನಡೆದು, ಅಲ್ಲಿ ಅವರುಗಳ ಮನವೊಲಿಸುವಲ್ಲಿ ಯಶಸ್ಸಿಯಾಗಿದ್ದು, ನಾಳೆಯಿಂದಲೇ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಇರುವುದಾಗಿ ಶಾಂತಿ ಸಭೆಯಲ್ಲಿ ಒಪ್ಪಿದ್ದಾರೆಂಬ ಮಾಹಿತಿ ಪತ್ರಿಕೆಗೆ ಡಿಎಸ್‌ಪಿ ಹೇಳಿದ್ದಾರೆ.
ಬಪ್ಪರಗಾದ ಬಾಲಕಿ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡಕ್ಕೆ ಅಂಗಲಾಚಿದ ಬಾಲಕಿ ತಾಯಿ ಕೊಡಿಸುವಂತೆ ಅಳುತ್ತ ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಎಸ್‌ಪಿ ಅವರು, ನ್ಯಾಯ ಕೊಡಿಸುವ ಭರವಸೆ ನೀಡಿದರು.
ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಡಿವೈಎಸ್‌ಪಿ ಭರತ್, ಸಿಪಿಐ ಸಚಿನ ಚಲುವಾದಿ, ಸಮಾಜ ಕಲ್ಯಾಣಾಧಿಕಾರಿ ಮಹ್ಮದ್ ಸಲಿಂ, ಸಿಡಿಪಿಒ ಅನಿಲ್ ಕಾಂಬ್ಳೆ, ನಾರಾಯಣಪುರ ಮತ್ತು ಕೊಡೇಕಲ್ ಪೊಲೀಸ್ ಠಾಣೆ ಪಿಎಸ್‌ಐ ಸೇರಿ ಇತರರಿದ್ದರು.
ಘಟನೆ ವಿವರ: ಗ್ರಾಮದ ೧೫ ವರ್ಷ ವಯಸ್ಸಿನ ಬಾಲಕಿಯನ್ನು ಅದೇ ಗ್ರಾಮದ ಸವರ್ಣೀಯ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದರ ಪರಿಣಾಮ ಬಾಲಕಿ ಈಗ ೫ ತಿಂಗಳ ಗರ್ಭೀಣಿಯಾಗಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆಕೆಯನ್ನು ಮದುವೆಯಾಗಲು ಯುವಕ ನಿರಾಕರಿಸಿದ್ದು, ಈ ಕುರಿತು ಕಳೆದ ತಿಂಗಳು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಬಾಲಕಿ ತಾಯಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತಂತೆ ನಮ್ಮಲ್ಲಿ ಬಂದು ಕೇಳಿ ಸಂಧಾನ ಮಾಡಿಕೊಳ್ಳದೆ ನೇರವಾಗಿ ಪೊಲೀಸ್ ಠಾಣೆ ಮೇಟ್ಟಿಲೇರಿ ದೂರು ದಾಖಲಿಸಿದ್ದು, ಸವರ್ಣೀಯರ ಆಕ್ರೋಶಕ್ಕೆ ಕಾರಣವಾಗಿ ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಸದ್ಯ ಬಪ್ಪರಗಿ ಗ್ರಾಮದಲ್ಲಿ ಡಿಆರ್ ಪೊಲೀಸ್ ವ್ಯಾನ್ ಬೀಡು ಬಿಟ್ಟಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.
(ಪೊಟೊ – ಛಲವಾದಿ ನಾರಾಯಣ ಸ್ವಾಮಿ )
ಬಿಜೆಪಿ ಆರೋಪ | ದಲಿತರ ಮೇಲೆ ನಿರಂತರ ದಬ್ಬಾಳಿಕೆ,ಬಹಿಷ್ಕಾರ
ಬಪ್ಪರಗಾಕ್ಕೆ ಛಲವಾದಿ ಭೇಟಿ ೧೭ರಂದು
ಯಾದಗಿರಿ: ಸವರ್ಣಿಯರಿಂದ ಬಹಿಷ್ಕಾರಕ್ಕೊಳಗಾದ ಹುಸಣಗಿ ತಾಲೂಕಿನ ಬಪ್ಪರಗಿಯ ದಲಿತ ಕುಟುಂಬಕ್ಕೆ ಸ್ವಾಂತನ ಹೇಳಿ, ಬೆಂಬಲ ವ್ಯಕ್ತಪಡಿಸಲು ಸೆ.೧೭ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಗಮಿಸಲಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಘಟನೆ ನಿರಂತರವಾಗಿ ನಡೆಯುತ್ತಿವೆ. ಬಪ್ಪರಗಾದಲ್ಲಿ ದಲಿತ ಕುಟುಂಬಗಳಿಗೆ ಸವರ್ಣಿಯರು ಬಹಿಷ್ಕಾರ ಹಾಕಿದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ. ಘಟನೆ ನಡೆದು ೩-೪ ದಿನ ಕಳೆದರೂ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದೇ ದಲಿತರಿಗೆ ಅವಮಾನಿಸಲಾಗಿದೆ. ರಾಜ್ಯ ಸರ್ಕಾರ ದಲಿತರನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಛಲವಾದಿ ಆರೋಪಿಸಿದ್ದಾರೆ.
ಸವರ್ಣಿಯ ಯುವಕನೊಬ್ಬ ೧೫ ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ, ಗರ್ಭಣಿ ಮಾಡಿ ಮದುವೆಗೆ ನಿರಾಕರಿಸಿದ್ದ, ನಂತರ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಘಟನೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಸವರ್ಣಿಯರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ದೈನಂದಿನ ಬದುಕಿಗೆ ದುಸ್ತರ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಕೂಡಲೇ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಸವರ್ಣಿಯರ ಮತ್ತು ದಲಿತರ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು. ಅನ್ಯಾಯಕ್ಕೊಳಗಾದ ಬಾಲಕಿಗೆ ನ್ಯಾಯ ನೀಡಬೇಕು ಮತ್ತು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಮತ್ತೋಮ್ಮೆ ಇಂತಹ ಘಟನೆ ಮರುಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಛಲವಾದಿ ಆಗ್ರಹಿಸಿದ್ದಾರೆ.