ಎಸ್ಪಿ ಎದುರು ಸಮಸ್ಯೆ ಸುರಿಮಳೆ

ಚಾಮರಾಜನಗರ: ನಗರ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಹೆಲ್ಮೆಟ್ ಕಡ್ಡಾಯಗೊಳಿಸಿ, ಸಿಸಿ ಕ್ಯಾಮರಾ ಅಳವಡಿಸಿ, ಕೆಟ್ಟಿರುವ ಸಿಗ್ನಲ್ ಲೈಟ್ ಸರಿಪಡಿಸಿ, ಪಟ್ಟಣದಿಂದ ಹೊರಗೆ ವಾಹನಗಳ ತಪಾಸಣೆ ಮಾಡಿ.

ನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ದೂರುಗಳಿವು.

ಮುಖಂಡ ಮಹಮ್ಮದ್ ಅಜ್ಗರ್ ಮುನ್ನಾ ಮಾತನಾಡಿ, ದೂರುಗಳನ್ನು ನೀಡಲು ಪೊಲೀಸ್ ಠಾಣೆಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ನಗರದ ಒಳಗೆ ವಾಹನಗಳನ್ನು ತಪಾಸಣೆ ಮಾಡುವ ಬದಲೂ 2 ಕಿ.ಮೀ. ದೂರದಲ್ಲಿ ಅಗಲ ಇರುವ ರಸ್ತೆಗಳಲ್ಲಿ ಮಾಡಿದರೆ ಉತ್ತಮ ಎಂದರು.
ಇದಕ್ಕೆ ಉತ್ತರಿಸಿದ ಧರ್ಮೇಂದ್ರಕುಮಾರ್ ಮೀನಾ, ಈ ಕುರಿತು ಸಂಚಾರ ಪೊಲೀಸ್ ಅಧಿಕಾರಿಗೆ ಸೂಚನೆ ನೀಡುತ್ತೇನೆ ಎಂದರು.

ಹೋರಾಟಗಾರ ಸುರೇಶ್ ವಾಜಪೇಯಿ ಮಾತನಾಡಿ, ನಗರದ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುವಂತೆ ಮಾಡಬೇಕು. ಅಲ್ಲದೆ, ದೂರು ನೀಡಿದ ತಕ್ಷಣ ಅದನ್ನು ತನಿಖೆ ಮಾಡದೆ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳುತ್ತಾರೆ. ಅದು ಸುಳ್ಳು ದೂರಾಗಿರುತ್ತದೆ. ಇದನ್ನು ತಪ್ಪಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ, ಸುಳ್ಳು ದೂರು ನೀಡಿದರೆ ಪರಿಶೀಲಿಸಲಾಗುವುದು. ಅದು ಸುಳ್ಳಾದರೆ ಬಿ ರಿಪೋರ್ಟ್ ಹಾಕಲಾಗುವುದು ಎಂದು ತಿಳಿಸಿದರು.

ಹೋರಾಟಗಾರ ಶಾ.ಮುರುಳಿ ಮಾತನಾಡಿ, ಸಣ್ಣ ಪುಟ್ಟ ಪ್ರತಿಭಟನೆಗೆ ಪೊಲೀಸರು ತಡೆವೊಡ್ಡುತ್ತಾರೆ. ನಾವೇನು ಉಗ್ರಗಾಮಿಗಳಲ್ಲ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಅಲ್ಲದೆ, ಪಟ್ಟಣ ಪೊಲೀಸ್ ಠಾಣೆ ಶಿಥಿಲಗೊಂಡಿದ್ದು, ಕುಸಿಯುವ ಹಂತದಲ್ಲಿದೆ. ಇಲ್ಲಿ ಅನಾಹುತವಾಗುವ ಮೊದಲು ಸೂಕ್ತ ಕ್ರಮವಹಿಸಿ ಎಂದರು.

ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿದರೆ ಅಭ್ಯಂತರವಿಲ್ಲ. ಪಟ್ಟಣ ಪೊಲೀಸ್ ಠಾಣೆಗೆ ಸಚಿವರು, ಐಜಿಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಚಿವರ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

ನಗರದ ಗಾಳೀಪುರ ಬಡಾವಣೆಯ ಶಿವಣ್ಣ ಮಾತನಾಡಿ, ಆಟೋಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚು ತುಂಬುತ್ತಾರೆ. ಈ ಕುರಿತು ಶಾಲೆಗಳಿಗೆ ಮೆಮೋ ಕಳಿಸಿ ಎಂದರು.

ಇದಕ್ಕೆ ಎಸ್ಪಿ ಪ್ರತಿಕ್ರಿಯಿಸಿ, ಆಟೋಗಳಲ್ಲಿ 5ಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿದರೆ ಅಪರಾಧವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಹೇಳಿದರು.

ಯಳಂದೂರು ತಾಲೂಕಿನ ಮದ್ದೂರು ಗ್ರಾಪಂ ಸದಸ್ಯೆ ಪುಷ್ಪಲತಾ ಮಾತನಾಡಿ, ಯಳಂದೂರು ತಾಲೂಕಲ್ಲೂ ಜನಸಂಪರ್ಕ ಸಭೆ ಮಾಡಬೇಕು. ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಮದ್ಯಪಾನವನ್ನು ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಎಲ್ಲ ಠಾಣೆಗಳಲ್ಲೂ ಜನ ಸಂಪರ್ಕ ಸಭೆ ಮಾಡಲಾಗುವುದು. ಮದ್ಯಪಾನ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಬಕಾರಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.

ಮೂರ್ತಿ ಮಾತನಾಡಿ, ನಗರದ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಸಿಗ್ನಲ್ ಲೈಟ್‌ಗಳು ಕೆಟ್ಟಿದ್ದು ಅಪಘಾತಗಳು ಹೆಚ್ಚುತ್ತಿವೆ. ಕೂಡಲೇ ಇದನ್ನು ಸರಿಪಡಿಸಿ ಎಂದರು.

ಎಸ್ಪಿ ಉತ್ತರಿಸಿ, ನಗರ ವ್ಯಾಪ್ತಿಯಲ್ಲಿ 3 ಕಡೆ ಸಿಗ್ನಲ್ ಲೈಟ್ ಇತ್ತು. ಹೆದ್ದಾರಿ ನಿರ್ಮಾಣ ಮಾಡುವಾಗ ಅದನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮವಹಿಸಲಾಗುವುದು ಎಂದರು.

ಜಾಕೀರ್ ಮಾತನಾಡಿ, ನಗರದ ಜೆಎಸ್‌ಎಸ್ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜು ಬಳಿ ಪೊಲೀಸ್ ಸಿಬ್ಬಂದಿ ಹಾಕಬೇಕು. ಜಿಲ್ಲಾಸ್ಪತ್ರೆ ಬಳಿ ಪಾರ್ಕಿಂಗ್ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ನೋಂದಣಿ ಪುಸ್ತಕವನ್ನು ಇಡಲಾಗಿದೆ. ಯಾರೇ ಠಾಣೆಗೆ ಹೋದರೂ ನೋಂದಣಿ ಪುಸ್ತಕದಲ್ಲಿ ತಮ್ಮ ಹೆಸರು, ಮೊಬೈಲ್ ನಂಬರ್ ಬರೆದು ಬನ್ನಿ. ಮಾರನೇ ದಿನ ನಿಮಗೆ ಫೋನ್ ಬರುತ್ತದೆ. ಠಾಣೆಯಲ್ಲಿ ತಮಗೆ ಆಗಿರುವ ತೊಂದರೆ ಕುರಿತು ಕೇಳಲಾಗುತ್ತದೆ. ಏನಾದರೂ ತೊಂದರೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ.
ಧಮೇಂದ್ರಕುಮಾರ್ ಮೀನಾ ಎಸ್ಪಿ