ಎಸ್ಪಿಎಂಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶ

ತುಮಕೂರು: ಹಾಲಿ ಸಂಸದರಿರುವ ಕ್ಷೇತ್ರ ಉಳಿಸಿಕೊಳ್ಳದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಜಿಲ್ಲೆಯಲ್ಲಿ ಕೈ ಮುಖಂಡರು ಹಾಗೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಜೆಡಿಎಸ್​ಗೆ ಸೀಟು ಕೊಡದೆ ಕ್ಷೇತ್ರ ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜೆಡಿಎಸ್ ಸೋಲಿಸಲು ರಣತಂತ್ರ ರೂಪಿಸುತ್ತಿರುವುದಾಗಿ ಕೆಲ ಮುಖಂಡರು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು. ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಮರು ಪರಿಶೀಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಮರು ಪರಿಶೀಲಿಸಿದರೆ ಉತ್ತಮ: ‘ವಿಜಯವಾಣಿ’ ಜತೆ ಮಾತನಾಡಿದ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್, ಕಾಂಗ್ರೆಸ್​ಗೆ ಗೆಲ್ಲುವ ಅವಕಾಶ ಇದ್ದ ಕ್ಷೇತ್ರವೂ ಕೈತಪ್ಪಿದ್ದಕ್ಕೆ ತೀವ್ರ ನಿರಾಸೆ ಆಗಿದೆ. ಮೈತ್ರಿ ಧರ್ಮದಂತೆ ಹೊಂದಾಣಿಕೆ ಮಾಡಿಕೊಂಡಿದ್ದರೂ, ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರ ಬಿಟ್ಟು ಕೊಡದಂತೆ ವರಿಷ್ಠರಿಗೆ ಒತ್ತಾಯಿಸಲಾಗಿತ್ತು. ತುಮಕೂರನ್ನು ಜೆಡಿಎಸ್​ಗೆ ಬಿಟ್ಟುಕೊಡಬಾರದಿತ್ತು ಎಂದು ಆಗ್ರಹಿಸಿದರು.

ಕಾಂಗ್ರೆಸ್​ನ ಹಾಲಿ ಸಂಸದರಿರುವ 11 ಕ್ಷೇತ್ರಗಳಲ್ಲಿ 10 ಕ್ಷೇತ್ರ ಉಳಿಸಿಕೊಂಡಿದೆ. ಆದರೆ, ಗೆಲ್ಲಲು ಉತ್ತಮ ಅವಕಾಶವಿದ್ದ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿರುವುದು ಸರಿಯಾದ ನಿರ್ಧಾರವಲ್ಲ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಮುನ್ನ ವರಿಷ್ಠರು ಪರಿಶೀಲಿಸಬೇಕು ಎಂದರು.

ಸಜ್ಜನ ರಾಜಕಾರಣಿ: ಎಸ್.ಪಿ.ಮುದ್ದಹನುಮೇಗೌಡ ಸಜ್ಜನ ರಾಜಕಾರಣಿ. ಅದ್ಭುತ ಕೆಲಸ ಮಾಡಿದ್ದಾರೆ. ಸಂಸತ್​ನಲ್ಲಿ ರಾಜ್ಯ, ಜಿಲ್ಲೆಯ ಪರ ಧ್ವನಿ ಎತ್ತಿದ್ದು, ಅವರಿಗೆ ಟಿಕೆಟ್ ಕೈತಪ್ಪಿರುವುದು ಪಕ್ಷದ ಅಧ್ಯಕ್ಷನಾಗಿ, ವೈಯಕ್ತಿಕವಾಗಿ ತುಂಬ ನೋವಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಬೇಸರಿಸಿದರು. ಮೈತ್ರಿ ಒಡಂಬಡಿಕೆಯಂತೆ ರಾಜ್ಯದಲ್ಲಿ ಲೋಕಸಭಾ ಸೀಟು ಹಂಚಿಕೆಯಾಗಿದೆ. ಹೈಕಮಾಂಡ್ ತೀರ್ವನಕ್ಕೆ ಬದ್ಧವಾಗಬೇಕಿದೆ. ಕೋಮುವಾದಿ ಪಕ್ಷವನ್ನು ದೂರವಿಡಲು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಲಾಗುವುದು. ಈ ಬಗ್ಗೆ ಕೆಪಿಸಿಸಿಯಿಂದ ಅಧಿಕೃತ ಆದೇಶ ಇನ್ನೂ ಬಂದಿಲ್ಲ ಎಂದರು. 1996ರಲ್ಲಿ ಜನತಾದಳದಿಂದ ಸಿ.ಎನ್.ಭಾಸ್ಕರಪ್ಪ ಗೆದ್ದಿದ್ದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಒಮ್ಮೆಯೂ ಗೆಲ್ಲದ ಜೆಡಿಎಸ್ ಬೆಂಬಲಿಸಲು ಜಿಲ್ಲಾ ಕಾಂಗ್ರೆಸ್ ಮುಖಂಡರ್ಯಾರೂ ಮನಃಪೂರ್ವಕವಾಗಿ ಒಪ್ಪದಿರುವುದು ಅವರ ಮಾತುಗಳಲ್ಲಿ ಗೋಚರಿಸುತ್ತಿತ್ತು.

ಕಾದು ನೋಡೋಣ: ಇದು ಹೈಕಮಾಂಡ್ ನಿರ್ಧಾರ. ಸಮ್ಮಿಶ್ರ ವ್ಯವಸ್ಥೆಯಲ್ಲಿ ಇಂತಹ ನಿರ್ಧಾರ ಒಪ್ಪಿಕೊಳ್ಳುವುದು ಅನಿವಾರ್ಯ. ಬಿ-ಫಾರಂ ಕೊಡುವವರೆಗೆ ಕಾದು ನೋಡೋಣ. ಯಾವ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೂಚ್ಯವಾಗಿ ಹೇಳಿದ್ದು, ಹಲವು ಅರ್ಥಗಳನ್ನು ಹೊರಡಿಸಿತ್ತು.